ಶನಿವಾರ, ನವೆಂಬರ್ 23, 2019
18 °C

‌ನಾನೀಗ ರಾಜಕೀಯ ತಬ್ಬಲಿ: ಸಂಸದ ಬಚ್ಚೇಗೌಡ ಪುತ್ರ ಶರತ್

Published:
Updated:
Prajavani

ಹೊಸಕೋಟೆ: ‘ಪಕ್ಷ, ತಂದೆ ಬಚ್ಚೇಗೌಡ ನನ್ನನ್ನು ದೂರ ಮಾಡಿದ ಕಾರಣ ನಾನೀಗ ರಾಜಕೀಯ ತಬ್ಬಲಿ ಆಗಿದ್ದೇನೆ’ ಎಂದು ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿ ಶರತ್‌ ಬಚ್ಚೇಗೌಡ ಬೇಸರ ವ್ಯಕ್ತಪಡಿಸಿದರು.  

ಪಟ್ಟಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದ ಬಗ್ಗೆ ಪ್ರತಿಕ್ರಿಯಿಸಿದ  ಅವರು, ‘ರಾಜಕೀಯ ವ್ಯಕ್ತಿಗಳಿಗೆ ಇಬ್ಬರು ತಾಯಂದಿರು. ಒಬ್ಬರು ಹೆತ್ತ ತಾಯಿ. ಮತ್ತೊಂದು ಪ್ರತಿನಿಧಿಸುವ ಪಕ್ಷ. ರಾಜಕೀಯವಾಗಿ ಬೆಳೆಯಲು ಬಿಜೆಪಿ ಆಯ್ಕೆ ಮಾಡಿಕೊಂಡೆ. ಆದರೆ, ಅದೇ ಪಕ್ಷ ಈಗ ಮೋಸ ಮಾಡುತ್ತಿದೆ’ ಎಂದು ಅಳಲು ತೋಡಿಕೊಂಡರು.

‘ನನ್ನ ವಿರುದ್ಧ ಕಳೆದ 15 ವರ್ಷದಿಂದ ಎಂ.ಟಿ.ಬಿ. ನಾಗರಾಜ್‌ ವಿನಾಕಾರಣ ಪೊಲೀಸರಿಗೆ ದೂರು ನೀಡುತ್ತಾ ತೇಜೋವಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಕಾರ್ಯಕರ್ತರ ನೈತಿಕತೆ ಕುಂದಿಸುವ ಕೆಲಸ ಮಾಡುತ್ತಿರುವ ವ್ಯಕ್ತಿಗೆ ವೇದಿಕೆ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಗೌರವ ನೀಡಿ ಆದರಿಸಿದ್ದಾರೆ. ಇದು ಬೇಸರದ ಸಂಗತಿ. ಪಕ್ಷ ಟಿಕೆಟ್‌ ನೀಡಿದರೆ ಗೆಲುವು ಕಟ್ಟಿಟ್ಟ ಬುತ್ತಿ. ಆದರೆ, ಈಗ ತಬ್ಬಲಿಯಂತಾಗಿದ್ದೇನೆ’ ಎಂದರು.

‘ಪಕ್ಷ ವಹಿಸಿದ ಕಮಲ ಜ್ಯೋತಿ, ಸದಸ್ಯತ್ವ ಅಭಿಯಾನ, ಸ್ವಚ್ಛ ಭಾರತ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದ್ದೇನೆ. ಪಕ್ಷದ ಶಿಸ್ತಿನ ಸಿಪಾಯಿಯಂತೆ ನಡೆದುಕೊಂಡಿದ್ದೇನೆ. ಆದರೆ, ಬೇರೆ ಪಕ್ಷದಿಂದ ವಲಸೆ ಬಂದವರಿಗೆ ಮಣೆ ಹಾಕುವ ಮೂಲಕ ದ್ರೋಹ ಬಗೆಯಲಾಗಿದೆ’ ಎಂದು ಪರೋಕ್ಷವಾಗಿ ಎಂಟಿಬಿ ನಾಗರಾಜ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಕ್ರಿಯಿಸಿ (+)