ಭಾನುವಾರ, ಜೂನ್ 13, 2021
25 °C
ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಂದ ಪರಿಶೀಲನೆ

ರಾಸಾಯನಿಕ ಮಾಲಿನ್ಯದಿಂದ ಕೆರೆ ಮಲಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ತಾಲ್ಲೂಕಿನ ಮುತ್ತಾನಲ್ಲೂರು, ಯಾರಂಡಹಳ್ಳಿ, ಬೊಮ್ಮಸಂದ್ರ, ಹೆನ್ನಾಗರ, ಕಾಚನಾಯಕನಹಳ್ಳಿ ಕೆರೆಗಳಿಗೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು.

ಇತ್ತೀಚಿಗೆ ತಾಲ್ಲೂಕಿನ ಮುತ್ತಾನಲ್ಲೂರು ಕೆರೆಯಲ್ಲಿ ಕಲುಷಿತ ಮತ್ತು ರಾಸಾಯನಿಕಯುಕ್ತ ನೀರಿನಿಂದಾಗಿ ಮೀನುಗಳು ಮೃತಪಟ್ಟ ಹಿನ್ನೆಲೆಯಲ್ಲಿ ಕ್ಯಾಪ್ಟನ್‌ ಸಿ.ಸಂತೋಷ್‌ ಕುಮಾರ್‌ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್‌ ಅವರ ಸೂಚನೆಯ ಮೇರೆಗೆ ಮೂರು ತಂಡಗಳು ಆನೇಕಲ್‌ ತಾಲ್ಲೂಕಿನ ಐದು ಕೆರೆಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪರಿಶೀಲಿಸಿ ಅಲ್ಲಿಯ ನೀರಿನ ಸ್ಯಾಂಪಲ್‌ಗಳನ್ನು ಪಡೆದರು.

‘ಮುತ್ತಾನಲ್ಲೂರು ಕೆರೆಗೆ ಕೈಗಾರಿಕ ಪ್ರದೇಶಗಳ ನೀರು ಬರುತ್ತಿರುವುದರಿಂದ ಕೆರೆ ಕಲುಷಿತವಾಗಿದೆ. ಫಾರ್ಮ ಕಂಪನಿಗಳು ಎಲೆಕ್ಟ್ರೋ ಪ್ಲೇಟಿಂಗ್‌ ಮತ್ತು ಬ್ಯಾಟರಿ ತಯಾರಿಕ ಕೈಗಾರಿಕೆಗಳ ಸೇರಿದಂತೆ ಕೆಂಪು ವರ್ಗದ ಕಾರ್ಖಾನೆಗಳು ವಿಷಪೂರಿತ ರಾಸಾಯನಿಕ ತ್ಯಾಜ್ಯಗಳನ್ನು ಶುದ್ಧೀಕರಿಸದೇ ಕೆರೆಗಳಿಗೆ ಬಿಡುತ್ತಿರುವುದರಿಂದ ಈ ಕೆರೆಗಳು ಕಲುಷಿತವಾಗಿವೆ. ಹಾಗಾಗಿ ಕಾರ್ಖಾನೆಗಳಿಂದ ತ್ಯಾಜ್ಯ ನೀರು ಇಟಿಪಿ ಪ್ಲ್ಯಾಂಟ್‌ಗಳ ಮೂಲಕ ಶುದ್ಧೀಕರಿಸಿ ಕೆರೆಗೆ ನೀರು ಹೋಗುವಂತೆ ಮಾಡಬೇಕು. ಇಲ್ಲವಾದಲ್ಲಿ ಕೆರೆಗಳು ಮಾಲಿನ್ಯಗೊಳ್ಳುತ್ತವೆ’ ಎಂದು ಕ್ಯಾಪ್ಟನ್‌ ಸಂತೋಷ್‌ ತಿಳಿಸಿದರು.

ಯಾರಂಡಹಳ್ಳಿ ಕೆರೆಯಿಂದ ಕಾಚನಾಯಕನಹಳ್ಳಿಯಿಂದ ಮಾಸ್ತೇನಹಳ್ಳಿಯಿಂದ, ಹೆನ್ನಾಗರ, ಬೊಮ್ಮಸಂದ್ರ, ಚಂದಾಪುರ, ಮುತ್ತಾನಲ್ಲೂರು, ಬಿದರಗುಪ್ಪೆ ಕೆರೆಗಳಿಗೆ ಒಂದೊಕ್ಕೊಂದು ಸಂಪರ್ಕ ಹೊಂದಿದ್ದು ಒಂದು ಕೆರೆ ನೀರು ತುಂಬಿದ ನಂತರ ಮತ್ತೊಂದು ಕೆರೆಗೆ ಹರಿದು ಹೋಗುತ್ತದೆ. ಹಾಗಾಗಿ ಕೈಗಾರಿಕೆಗಳ ತ್ಯಾಜ್ಯ ಸೇರ್ಪಡೆಯಾಗುವ ಮೂಲ ಹಂತದಲ್ಲಿಯೇ ಶುದ್ಧೀಕರಿಸದಿದ್ದರೆ ಕೆರೆಗಳನ್ನು ಉಳಿಸಲು ಸಾಧ್ಯವಿಲ್ಲ. ಕೆರೆ ತುಂಬ ನೀರಿದ್ದರೂ ಆ ನೀರು ಉಪಯೋಗಕ್ಕೆ ಬರುವುದಿಲ್ಲ. ನೀರಿನ ಬಳಕೆಯಿಂದ ವಿವಿಧ ಕಾಯಿಲೆಗಳು ಬರುತ್ತವೆ. ಹಾಗಾಗಿ ಕೆರೆಗಳ ಸಂರಕ್ಷಣೆಗೆ ಜನಪ್ರತಿನಿಧಿಗಳು, ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಲಿನ್ಯ ಮಂಡಳಿಯ ವಲಯ ಅಧಿಕಾರಿ ಪಿ.ಆರ್‌.ಮಂಜುನಾಥ್‌, ಸಹ ನಿರ್ದೇಶಕ ಮಂಜುನಾಥ್, ಮಾಲಿನ್ಯ ನಿಯಂತ್ರಣಾಧಿಕಾರಿ ನಾರಾಯಣಸ್ವಾಮಿ, ಆಸಿಫ್‌ಖಾನ್‌ ಅವರ ತಂಡವು ಕೆರೆಗಳನ್ನು ವೀಕ್ಷಿಸಿ ಅಲ್ಲಿಯ ಕೆರೆಗಳಲ್ಲಿನ ನೀರಿನ ಸ್ಯಾಂಪಲ್‌ಗಳನ್ನು ಪಡೆದರು. ಕೆರೆಗಳಲ್ಲಿನ ಮಾಲಿನ್ಯ ನಿಯಂತ್ರಣ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತ ವರದಿ ನೀಡುವಂತೆ ಅಧಿಕಾರಿಗಳು ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಕೇಶವರೆಡ್ಡಿ, ವಿನಯ್‌ಕುಮಾರ್‌ ರೆಡ್ಡಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.