ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿದ ಮೋಡ, ಕಾರ್ಮಿಕರ ಕೊರತೆ: ರಾಗಿ ಬೆಳೆ ಕಟಾವು ವಿಳಂಬ

ರಾಗಿ ನೆಲಕ್ಕುದುರುವ ಆತಂಕ, ಸಮರ್ಪಕ ಯಂತ್ರೋಪಕರಣ ಒದಗಿಸುವಂತೆ ರೈತರ ಮನವಿ
Last Updated 6 ಡಿಸೆಂಬರ್ 2019, 12:59 IST
ಅಕ್ಷರ ಗಾತ್ರ

ವಿಜಯಪುರ: ‘ಐದು ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿದ್ದರಿಂದ ಹೊಲದಲ್ಲಿ ಬೆಳೆ ಇಲ್ಲದೆ ಕಂಗಾಲಾಗಿದ್ದ ರೈತರ ಪಾಲಿಗೆ ಈ ಬಾರಿ ಸುರಿದ ಉತ್ತಮ ಮಳೆಯಿಂದ ಉತ್ತಮ ಇಳುವರಿ ಬಂದಿದೆ. ಆದರೆ ಕಟಾವು ಮಾಡಲು ಸೂಕ್ತ ವಾತಾವರಣ ಮತ್ತು ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ’ ಎಂದು ರೈತ ಈರಪ್ಪ ಅಳಲು ತೋಡಿಕೊಂಡರು.

‘ಮಳೆ, ಬೆಳೆಯ ಸತತ ಕೊರತೆಯಿಂದ ರಾಗಿ ಸೇರಿದಂತೆ ಜಾನುವಾರಗಳ ಮೇವಿಗೆ ಪರದಾಡುತ್ತಿದ್ದ ರೈತರು, ಈ ಬಾರಿ ಉತ್ತಮ ರಾಗಿ ಬೆಳೆಯಿಂದ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಬೆಳೆಯೆಲ್ಲ ಹೊಲದಲ್ಲೇ ನೆಲಕ್ಕುರುಳಿದೆ. ಕಟಾವು ಮಾಡಲು ಒಬ್ಬ ಕಾರ್ಮಿಕರಿಗೆ ದಿನಕ್ಕೆ ₹ 500 ಕೂಲಿ ಕೊಡಬೇಕು. ಈಗ ಕಾರ್ಮಿಕರೂ ಸಿಗುತ್ತಿಲ್ಲ. ಕಟಾವು ಮಾಡುತ್ತಿರುವ ಯಂತ್ರಗಳಿಗೂ ಎಕರೆಗೆ ₹ 4 ಸಾವಿರ ಕೊಡಬೇಕು. ಮೋಡ ಮುಸುಕಿದ ವಾತಾವರಣ ಹಾಗೂ ಆಗಾಗ ಬೀಳುವ ಜಿಟಿಜಿಟಿ ಮಳೆಯಿಂದ ಬೆಳೆ ಕಟಾವು ಮಾಡಲು ಸಮಯ ಸಿಗುತ್ತಿಲ್ಲ. ಇದರಿಂದ ತೆನೆಯಲ್ಲಿನ ರಾಗಿ ಉದುರುವ ಹಂತಕ್ಕೆ ಹೋಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಅವಿನಾಶ್ ಮಾತನಾಡಿ, ‘ರಾಗಿಯನ್ನೆ ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಿರುವ ರೈತರಿಗೆ ಬೆಳೆ ಕಟಾವು ಮಾಡಲು ಯಂತ್ರೋಪಕರಣ ಇದ್ದರೂ ಕೃಷಿ ಇಲಾಖೆ ಅದನ್ನು ಒದಗಿಸಿಲ್ಲ. ಇದರಿಂದ ಖಾಸಗಿಯವರು ಕೇಳಿದಷ್ಟು ಹಣ ಕೊಟ್ಟು ಕಟಾವು ಮಾಡಿಸಬೇಕಾಗಿದೆ. ಉಳ್ಳವರು ಬಂಡವಾಳ ಹಾಕುತ್ತಾರೆ. ಬಿತ್ತನೆ ಮಾಡಲೂ ಸಾಲ ಮಾಡಿಕೊಂಡಿರುವ ರೈತರು ಕಟಾವು ಮಾಡಿಸಲು ಹಣಕಾಸಿನ ಸೌಲಭ್ಯವಿಲ್ಲದೆ ಬೆಳೆ ಕಟಾವು ಮಾಡಲು ಮುಂದಾಗುತ್ತಿಲ್ಲ. ಸರ್ಕಾರ ಯಂತ್ರಗಳನ್ನು ಒದಗಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT