ವಿಜಯಪುರ(ದೇವನಹಳ್ಳಿ): ಸೊಂಪಾಗಿ ಬೆಳೆದಿರುವ ಗಿಡಮರಗಳು, ಅಲ್ಲಿ ವಾಸವಿರುವ ಹಕ್ಕಿಗಳ ಕಲರವ ಕಿವಿಗಳಿಗೆ ಇಂಪು ನೀಡುತ್ತಿದೆ....
–ಇದು ಹೋಬಳಿಯ ಗೊಡ್ಲುಮುದ್ದೇನಹಳ್ಳಿಯ ನಮ್ಮೂರ ಸರ್ಕಾರಿ ಆಸ್ಪತ್ರೆ ವಾತಾವರಣ. ಆಸ್ಪತ್ರೆ ಆವರಣ ಪ್ರವೇಶಿಸುತ್ತಿದ್ದಂತೆ ಮನಸ್ಸಿಗೆ ನೆಮ್ಮದಿಯೆನಿಸುತ್ತದೆ. ಈ ಪರಿಸರ ನಿರ್ಮಾಣದ ಹಿಂದೆ ಇಲ್ಲಿನ ವೈದ್ಯೆ ಡಾ.ವಾಣಿ ಅವರ ಶ್ರಮ ಇದೆ. ಸರ್ಕಾರದ ಸೌಲಭ್ಯ ಹಾಗೂ ಪಂಚಾಯಿತಿ ನರೇಗಾ ಯೋಜನೆಯಡಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣದ ಜತೆಗೆ ಅಂಧವನ್ನು ಹೆಚ್ಚಿಸಿದ್ದಾರೆ.
ಗ್ರಾಮ ಪಂಚಾಯಿತಿಯ ನರೇಗಾ ಅನುದಾನ ಬಳಕೆ ಮಾಡಿಕೊಂಡು ಆಸ್ಪತ್ರೆ ಆವರಣದಲ್ಲಿ ಉದ್ಯಾನ ನಿರ್ಮಿಸಲಾಗಿದ್ದು, ರೋಗಿಗಳು ಮತ್ತು ಅವರ ಕುಟುಂಬಸ್ಥರು ವಿಶ್ರಾಂತಿ ತಾಣವಾಗಿದೆ. ಇಲ್ಲಿ ನಿರ್ಮಿಸಿರುವ ಜಾರು ಬಂಡೆಯಲ್ಲಿ ಮಕ್ಕಳು ಆಡಿ ನಲಿಯುತ್ತಾರೆ.
ರೋಟರಿ ವತಿಯಿಂದ ಮಳೆ ನೀರು ಕೊಯ್ಲು ಅಳವಡಿಸಿದ್ದು, ನೀರು ಸಂಗ್ರಹಿಸಿಕೊಂಡು, ಗಿಡಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತ್ಯೇಕವಾದ ಲಸಿಕಾ ಕೊಠಡಿ, ಆಯುಷ್ಮಾನ್ ಕೊಠಡಿಯೂ ಇದೆ. ಸಿಬ್ಬಂದಿಗೆ ತರಬೇತಿ ನೀಡಲು ಪ್ರತ್ಯೇಕ ಕೊಠಡಿಗಳಿವೆ. ಆರೋಗ್ಯ ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳ ಕುರಿತು ಜನರಿಗೆ ಅರಿವು ಮೂಡಿಸಲು ಚಿತ್ರಗಳ ಸಮೇತ ಗೋಡೆ ಬರಹ ಬರೆಯಿಸಲಾಗಿದೆ.
ಸ್ಥಳೀಯ ನಾಗರಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ವಾರಕ್ಕೊಮ್ಮೆ ಯೋಗ ಅಭ್ಯಾಸ ಮಾಡಿಸಲು ಪ್ರತ್ಯೇಕವಾಗಿ ಕೊಠಡಿ ನಿರ್ಮಾಣ ಮಾಡಿದ್ದಾರೆ. ಪ್ರತಿ ಮಂಗಳವಾರ ಯೋಗ ತರಬೇತಿ ನೀಡಲಾಗುತ್ತದೆ.
ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಲಾರ್ವಾಗಳನ್ನು ನಿರ್ಮೂಲನೆ ಮಾಡಲು, ಆಶಾ ಕಾರ್ಯಕರ್ತೆಯರಿಗೆ ಅನುಕೂಲವಾಗಲೆಂದು ಆಸ್ಪತ್ರೆಯ ಹಿಂಭಾಗದಲ್ಲಿ ಲಾರ್ವಾ ಮೀನಿನ ತೊಟ್ಟಿ ನಿರ್ಮಿಸಿ ಮೀನು ಸಾಕಾಣಿಕೆ ಮಾಡಲಾಗುತ್ತಿದೆ.
ಸರ್ಕಾರದ ಯೋಜನೆಗಳ ಕುರಿತು ಹೊರಡಿಸುವ ಕರಪತ್ರಗಳು, ಸ್ಥಳೀಯರಿಗೆ ಸುಲಭವಾಗಿ ಸಿಗಬೇಕು ಎನ್ನುವ ಕಾರಣದಿಂದ ಪ್ರತ್ಯೇಕವಾಗಿ ಬಾಕ್ಸ್ ಗಳನ್ನು ಮಾಡಿಸಿಟ್ಟಿದ್ದು, ಆಸ್ಪತ್ರೆಗೆ ಬರುವವರು ಅವುಗಳನ್ನು ತೆಗೆದು ಓದುವುದಕ್ಕೆ ಅನುಕೂಲವಾಗಿದೆ. ರೋಗಿಗಳು ಹಾಗೂ ಅವರ ಜೊತೆಯಲ್ಲಿ ಬರುವವರು ಸಮಯ ವ್ಯರ್ಥ ಮಾಡಬಾರದೆಂದು ಹಲವು ಪುಸ್ತಕಗಳನ್ನು ಸಂಗ್ರಹಿಸಿಟ್ಟು ಓದುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಆಸ್ಪತ್ರೆಯ ವ್ಯಾಪ್ತಿಗೆ ಒಳಪಡುವ ಹಳ್ಳಿಗಳಿಂದ ಬರುವ ಗರ್ಭಿಣಿಯರ ಕಾಳಜಿ ವಹಿಸುವ ಡಾ.ಎಸ್.ವಾಣಿ ಅವರ ಆರೋಗ್ಯ ಸುಧಾರಣೆ, ಆಹಾರ ಸೇವನೆಯ ಕ್ರಮದ ಕುರಿತು ಶಿಬಿರ ನಡೆಸುತ್ತಾರೆ. ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರಿಗೆ ಸ್ಥಳೀಯ ಪಂಚಾಯಿತಿ ಹಾಗೂ ದಾನಿಗಳಿಂದ ಸಹಕಾರ ಕೊಡಿಸುತ್ತಾರೆ. ಇದರಿಂದ ವಾಣಿ ಅವರು ಗೊಡ್ಲುಮುದ್ದೇನಹಳ್ಳಿಯ ನೆಚ್ಚಿನ ವೈದ್ಯೆ ಎನ್ನಿಸಿದ್ದಾರೆ.
ಇಲ್ಲಿಂದ ವರ್ಗಾವಣೆ ಬಯಸಿದ್ದೆ
‘ನಾನು ಈ ಆಸ್ಪತ್ರೆಗೆ 2016 ರಲ್ಲಿ ಬಂದೆ, ಇಲ್ಲಿನ ವಾತಾವರಣವನ್ನು ನೋಡಿ, ಇಲ್ಲಿಗೆ ಯಾಕೆ ಬಂದೆ ಅನ್ನಿಸಿತ್ತು. ಇಲ್ಲಿಂದ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ಇಲ್ಲಿನ ಜನರ ಪ್ರೀತಿ ಹಾಗೂ ಸಹಕಾರ ಕಂಡು ಇಲ್ಲಿನ ವಾತಾವರಣವನ್ನು ಸುಧಾರಿಸಬೇಕೆಂದು ತೀರ್ಮಾನಿಸಿ ಇಲ್ಲಿ ಉಳಿದೆ‘ ಎನ್ನುತ್ತಾರೆ ವೈದ್ಯೆ ಡಾ.ಎಸ್.ವಾಣಿ.
‘ಆಗ ನನಗೆ 9 ತಿಂಗಳ ಮಗು ಇತ್ತು. ಮಗು ನೋಡಿಕೊಂಡು ಆಸ್ಪತ್ರೆಯಲ್ಲಿ ಕೆಲಸ ಮಾಡುವುದು ಸವಾಲಾಗಿತ್ತು. ನನ್ನ ಮಗು ನೋಡಿಕೊಳ್ಳಲು ನನ್ನೊಂದಿಗೆ ಬರುತ್ತಿದ್ದ ನನ್ನ ಸಹೋದರ, ಬಿಡುವಿನ ಸಮಯದಲ್ಲಿ ಆಸ್ಪತ್ರೆಯ ಆವರಣದಲ್ಲಿ ಕೆಲವು ಗಿಡ ನೆಟ್ಟು ಪೋಷಣೆ ಮಾಡಿದರು. ನಂತರ ನಮ್ಮ ಸಿಬ್ಬಂದಿಯೊಂದಿಗೆ ಬಯಲಿನಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಿದರು. ಇದರ ಫಲವಾಗಿ ಆಸ್ಪತ್ರೆ ಆವರಣ ಹಸಿರಿನಿಂದ ಕಂಗೊಳಿಸುತ್ತಿವೆ. ಕೆಲವು ಮರಗಳು ಹಣ್ಣು ಬಿಟ್ಟಿವೆ’ ಎಂದು ಸಂತೋಷದ ಹೇಳುವ ವಾಣಿ, ಇದರಿಂದ ಮನಸ್ಸಿಗೆ ತೃಪ್ತಿ ದೊರೆತಿದೆ ಎಂದು ಸಾರ್ಥಕದ ಮಾತನಾಡುತ್ತಾರೆ.
ಉತ್ತಮ ಕೆಲಸ ಗೊಡ್ಲುಮುದ್ದೇನಹಳ್ಳಿ ಆಸ್ಪತ್ರೆಯ ವೈದ್ಯೆ ಡಾ.ವಾಣಿ ಅವರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಳ್ಳುವುದರ ಜೊತೆಗೆ, ಸ್ಥಳೀಯರ ಸಹಕಾರ ಪಡೆದುಕೊಂಡು ಆಸ್ಪತ್ರೆ ಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಜನರಿಗೆ ಒಳ್ಳೆಯ ಸೇವೆ ನೀಡುತ್ತಿದ್ದಾರೆ. ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.ಡಾ.ವಿಜಯೇಂದ್ರ, ಜಿಲ್ಲಾ ಆರೋಗ್ಯಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.