ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿನಿ ಪಾರ್ಲರ್‌ನಲ್ಲಿ ಅನ್ಯ ಹಾಲು ಉತ್ಪನ್ನ ಮಾರಾಟ ನಿರ್ಬಂಧ

Last Updated 19 ಆಗಸ್ಟ್ 2021, 3:50 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ನಂದಿನಿ ಪಾರ್ಲರ್‌ನಲ್ಲಿ ಖಾಸಗಿ ಹಾಲು ಅಥವಾ ಉತ್ಪನ್ನ ಮಾರಾಟ ಮಾಡಿದರೆ ಪರವಾನಗಿ ರದ್ದುಪಡಿಸಲಾಗುವುದು. ನಂದಿನಿ ಹಾಲು ಮಾರಾಟ ಮಾಡುವ ಪ್ರತಿಯೊಬ್ಬ ವ್ಯಾಪಾರಿಯೂ ಕಡ್ಡಾಯವಾಗಿ ನಂದಿನಿ ಹಾಲು ಹಾಗೂ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕು’ ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ. ಆನಂದಕುಮಾರ್‌ ಹೇಳಿದರು.

ನಗರದ ಬಮೂಲ್ ಶಿಬಿರದಲ್ಲಿ ತಾಲ್ಲೂಕು ನಂದಿನಿ ಹಾಲು ಮಾರಾಟಗಾರರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಡೇರಿಗಳಿಗೆ ಹಾಲು ಸರಬರಾಜು ಮಾಡುವ ರೈತರು ಮತ್ತು ಹಾಲನ್ನು ಗ್ರಾಹಕರಿಗೆ ತಲುಪಿಸುವ ರಿಟೇಲ್ ವ್ಯಾಪಾರಿಗಳು ಕೆಎಂಎಫ್‌ ಸಂಸ್ಥೆಯ ಎರಡು ಕಣ್ಣುಗಳಿದ್ದಂತೆ. ರೈತರ ಸಮಸ್ಯೆಗಳಿಗೆ ಸದಾ ಬಮೂಲ್ ಸ್ಪಂದಿಸುತ್ತಲೇ ಇದೆ. ವ್ಯಾಪಾರಿಗಳ ಸಮಸ್ಯೆಗಳು ಸಾಕಷ್ಟು ಗಮನಕ್ಕೆ ಬಂದಿವೆ ಎಂದರು.

ವ್ಯಾಪಾರಿಗಳು ಕೊರೊನಾದಿಂದಾಗಿ ಸಾಕಷ್ಟು ಸಾವು, ನೋವು ಅನುಭವಿಸಿದ್ದಾರೆ. ಅಂತಹವರಿಗೆ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ಪ್ರಮುಖವಾಗಿ ವಿಮೆ ಮಾಡಿಸುವುದು, ಸಂಘದ ಕಚೇರಿ ನಿರ್ಮಾಣಕ್ಕೆ ಜಾಗ ನೀಡಲು ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.

ಯಲಹಂಕದ ಮದರ್ ಡೇರಿ ನಿರ್ದೇಶಕ ಮಂಜುನಾಥ ಮಾತನಾಡಿ, ನಂದಿನಿ ಹಾಲು ಇಡೀ ವಿಶ್ವದಲ್ಲೇ ಅತ್ಯುತ್ತಮ ಗುಣಮಟ್ಟದ ಹಾಲು ಎಂಬ ಹೆಗ್ಗಳಿಕೆ ಪಡೆದಿದೆ. ರಿಟೇಲ್ ವ್ಯಾಪಾರಿಗಳ ಹಲವು ಸಮಸ್ಯೆಗಳನ್ನು ಕೆಎಂಎಫ್ ಆಡಳಿತ ಮಂಡಳಿಯ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದರು.

ತಾಲ್ಲೂಕು ನಂದಿನಿ ಹಾಲು ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಮಚಂದ್ರಬಾಬು ಮಾತನಾಡಿದರು.ಕಾರ್ಯಕ್ರಮದಲ್ಲಿ ಮದರ್ ಡೇರಿಯ ಗಂಗಾಧರ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ. ಸಿದ್ದರಾಮಯ್ಯ, ನಿರ್ದೇಶಕ ಅಂಜನಗೌಡ, ಕೆಎಂಎಫ್ ಸಿಬ್ಬಂದಿ ಇದ್ದರು.

ಮನವಿ ಸಲ್ಲಿಕೆ: ಹಾಲು ಉತ್ಪಾದಕರಿಗೆ ನೀಡುವ ಪ್ರಾಮುಖ್ಯತೆ ವ್ಯಾಪಾರಿಗಳಿಗೂ ನೀಡಬೇಕು. ಶೀಘ್ರವೇ ವಿಮಾ ಸೌಲಭ್ಯ ಕಲ್ಪಿಸಬೇಕು. ಕೆಎಂಎಫ್ ಮತ್ತು ಬಮೂಲ್ ಸವಲತ್ತುಗಳು ವ್ಯಾಪಾರಿಗಳಿಗೂ ದೊರೆಯುವಂತಾಗಬೇಕು. ತಾಲ್ಲೂಕಿನಲ್ಲಿ ಅತ್ಯುತ್ತಮ ಶಿಥಲ ಕೇಂದ್ರದ ವ್ಯವಸ್ಥೆಯಾಗಬೇಕು. ಬೆಳಗಿನ ವೇಳೆ ನಿಗದಿತ ಸಮಯಕ್ಕೆ ಹಾಲು ಪೂರೈಕೆಯಾಗಬೇಕು ಎಂದು ಮನವಿ ಪತ್ರ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT