ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 26 ಕೋಟಿ ಅನುದಾನಕ್ಕೆ ಪ್ರಸ್ತಾವ: ಸಂಸದ ಬಚ್ಚೇಗೌಡ

ಹದಗೆಟ್ಟ ರಸ್ತೆ, ಸೇತುವೆ, ಕೆರೆ ದುರಸ್ತಿಗೆ ಕ್ರಮವಹಿಸಿ: ಸಂಸದ ಬಚ್ಚೇಗೌಡ
Last Updated 29 ಸೆಪ್ಟೆಂಬರ್ 2022, 5:48 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಬಹುತೇಕ ಗ್ರಾಮಗಳ ರಸ್ತೆಗಳು ಹದಗೆಟ್ಟಿವೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಸಂಸದ ಬಿ.ಎನ್. ಬಚ್ಚೇಗೌಡ ಸೂಚಿಸಿದರು.

ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮಳೆಯಿಂದ ಹದಗೆಟ್ಟ ರಸ್ತೆಗಳು, ಸೇತುವೆ ದುರಸ್ತಿ ಹಾಗೂ ಕೆರೆ ಅಭಿವೃದ್ಧಿಗೆ ₹ 26 ಕೋಟಿ ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯಿಂದ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲೇ ₹ 12 ಕೋಟಿ ಅನುದಾನ ಬಿಡುಗಡೆಯಾಗಲಿದೆ. ರಸ್ತೆ, ಸೇತುವೆ ಅಭಿವೃದ್ಧಿಗೆ ಪ್ರತಿ ತಾಲ್ಲೂಕಿಗೆ ₹ 2.5 ಕೋಟಿ ಹಾಗೂ ಕೆರೆ ಅಭಿವೃದ್ಧಿಗೆ ₹ 50 ಲಕ್ಷ ಅನುದಾನ ನಿಗದಿಪಡಿಸಲಾಗುವುದು ಎಂದರು.

ಪಂಚಾಯತ್ ರಾಜ್ ಎಂಜಿ ನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್, ನಾಲ್ಕು ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿಗಳು ಮಳೆಯಿಂದ ಹಾಳಾದ ರಸ್ತೆಗಳ ಮಾಹಿತಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಸಂಗ್ರಹಿಸಿ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಆಯಾ ತಾಲ್ಲೂಕು ವಿಧಾನಸಭಾ ಕ್ಷೇತ್ರದ ಶಾಸಕರ ಅನುಮೋದನೆ ಪಡೆದು ಜಿಲ್ಲಾ ಪಂಚಾಯಿತಿಗೆ ವಾರದೊಳಗೆ ಪ್ರಸ್ತಾವ ಸಲ್ಲಿಸಿದರೆ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ನಗರೀಕರಣದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಪ್ರದೇಶದ ವಿಸ್ತರಣೆ ಕಡಿಮೆಯಾಗುತ್ತಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ರೈತರಿಗೆ ಯೋಜನೆಗಳ ಪೂರ್ಣ ಪ್ರಮಾಣದ ಸೌಲಭ್ಯ ತಲುಪಿಸುವ ಮೂಲಕ ಕೃಷಿ ಹಾಗೂ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸಲು ಸಮನ್ವಯ, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಗಂಗೆ ಯೋಜನೆಯಡಿ ಪ್ರತಿ ಮನೆಗಳಿಗೆ ನೀರು ಕಲ್ಪಿಸಲು ಹಾಗೂ ಜಲಜೀವನ್ ಮಿಷನ್, ಅಟಲ್ ಭೂಜಲ ಯೋಜನೆಯಡಿ ಚೆಕ್ ಡ್ಯಾಂ ನಿರ್ಮಾಣ, ಕೆರೆಗಳಲ್ಲಿ ಹೂಳೆತ್ತುವಿಕೆ ಸೇರಿದಂತೆ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ಕೈಗೊಂಡು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ನಿಗಮ, ಮಂಡಳಿಯ ವಿವಿಧ ಯೋಜನೆಯಡಿ ಸಾಲ, ಸಹಾಯಧನ, ಇತರೇ ಸೌಲಭ್ಯಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ನೈಜತೆ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿ ಅವಶ್ಯವಿರುವ ರಸ್ತೆ, ನೀರು, ಶಾಲೆ, ಅಂಗನವಾಡಿ, ಗ್ರಂಥಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು. ಅನುಮೋದನೆ ಪಡೆದು ಶೀಘ್ರವೇ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಡಾ.ನಾಗರಾಜ, ಮುಖ್ಯ ಯೋಜನಾಧಿಕಾರಿ ನರಸಿಂಹ ಎಂ.ಆರ್. ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT