ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಒತ್ತಾಯಿಸಿ ಪ್ರತಿಭಟನೆ 

ಬೀರಸಂದ್ರದ 30ಕ್ಕೂ ಹೆಚ್ಚು ಮನೆಗಳಿಗೆ ಪೂರೈಕೆಯಾಗದ ಕುಡಿಯುವ ನೀರು: ಆರೋಪ
Last Updated 10 ಜನವರಿ 2020, 12:39 IST
ಅಕ್ಷರ ಗಾತ್ರ

ದೇವನಹಳ್ಳಿ: ಒಂದು ವರ್ಷದಿಂದ ಗ್ರಾಮದ 30ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ತಾಲ್ಲೂಕಿನ ಬೀರಸಂದ್ರದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖಂಡ ನಾರಾಯಣಸ್ವಾಮಿ ಮಾತನಾಡಿ, ‘ಅವೈಜ್ಞಾನಿಕವಾಗಿ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಸಲಾಗಿದೆ. ಅದನ್ನೂ ಅರ್ಧ ನಡೆಸಿ ಒಂದು ವರ್ಷ ಕಳೆದಿದ್ದರೂ ಪೂರ್ಣಗೊಳಿಸಿಲ್ಲ. ಮುಂಗಾರಿನಲ್ಲಿ ಕೆರೆಯಲ್ಲಿ ಸಂಗ್ರಹವಾಗಿದ್ದ ಮಳೆ ನೀರನ್ನೇ ದಿನಬಳಕೆಗೆ, ಕುಡಿಯುವುದಕ್ಕೆ ಬಳಸಲಾಗುತ್ತಿತ್ತು. ಈಗ ಕೆರೆಯಲ್ಲಿ ಹನಿ ನೀರಿಲ್ಲ’ ಎಂದರು.

‘ಕುಡಿಯುವ ನೀರನ್ನು ಎರಡು ಕಿ.ಮೀ ದೂರವಿರುವ ಬೈರದೇನಹಳ್ಳಿ ಗ್ರಾಮದಿಂದ ತರುತ್ತಿದ್ದೇವೆ. ವಾಹನ ಇರುವವರು ನೀರು ತರುತ್ತಾರೆ. ಸಾಗಾಣಿಕೆ ವ್ಯವಸ್ಥೆ ಇಲ್ಲದವರು ತಲೆ ಮೇಲೆ ಹೊತ್ತು ತರಬೇಕು. ಮತ್ತೊಂದೆಡೆ ನಾಲ್ಕಾರು ಮನೆಯವರು ಹಣ ಕ್ರೋಢೀಕರಿಸಿ ವಾರಕ್ಕೊಮ್ಮೆ ಖಾಸಗಿ ಟ್ಯಾಂಕರ್ ಮೂಲಕ ನೀರು ಖರೀದಿಸಿ ಬಳಸುವ ಸ್ಥಿತಿ ಇದೆ’ ಎಂದು ಹೇಳಿದರು.

‘ಜಿಲ್ಲಾ ಪಂಚಾಯಿತಿ ಇಲಾಖೆ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಗ್ರಾಮ ಪಂಚಾಯಿತಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು ಎಂದು ಹೇಳಿದೆ. ಜಿಲ್ಲಾಡಳಿತ ಭವನಕ್ಕೆ ಜಾಗ ನೀಡಿದ ಬೀರಸಂದ್ರ ಗ್ರಾಮದಿಂದ 200 ಮೀ. ದೂರವಿರುವ ಜಿಲ್ಲಾ ಪಂಚಾಯಿತಿ ಕಚೇರಿ ಮತ್ತು ಅಲೂರುದುದ್ದನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಇದ್ದರೂ ಮೂಲ ಸೌಲಭ್ಯ ವಂಚಿತವಾಗಿದೆ. ಕುಡಿಯಲೂ ನೀರಿಲ್ಲ. ಇಲ್ಲೇ ಹೀಗಾದರೆ ಜಿಲ್ಲೆಯ ಗಡಿ ಗ್ರಾಮಗಳ ಪರಿಸ್ಥಿತಿ ಏನು’ ಎಂದು ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದರು.

‘ಸಮರ್ಪಕ ನೀರು ಪುರೈಕೆಗಾಗಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಖರೀದಿಸಿರುವ ಪೈಪ್ ಒಂದು ವರ್ಷದಿಂದ ಹಾಗೇ ಬಿದ್ದಿವೆ. ಗ್ರಾಮದಲ್ಲಿ ಕೊರೆಯಿಸಿರುವ ಎರಡು ಕೊಳವೆ ಬಾವಿಗಳಲ್ಲಿ ನೀರಿದೆ. ಕಾಮಗಾರಿ ಪೂರ್ಣಗೊಳಿಸಿ ನೀರು ಪೂರೈಕೆ ಮಾಡುವ ಜವಾಬ್ದಾರಿ ಅಧಿಕಾರಿಗಳಿಗೆ ಇಲ್ಲ. ಇನ್ನೆರಡು ದಿನದಲ್ಲಿ ಗ್ರಾಮದಿಂದ ಒಂದು ಬಿಂದಿಗೆಯಾದರು ನೀರು ಕೊಡಿ ಎಂದು ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT