ಶುಕ್ರವಾರ, ಸೆಪ್ಟೆಂಬರ್ 25, 2020
28 °C
ವಿಜಯಪುರ : 57ನೇ ಮಾಸದ ’ಕನ್ನಡದೀಪ’ ಕಾರ್ಯಕ್ರಮ

ರಂಗಕಲಾವಿದರಿಗೆ ಶಾಶ್ವತ ಪರಿಹಾರ ಒದಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಒಡಲಿನಲ್ಲಿ ಅಪಾರ ನೋವು ತುಂಬಿಕೊಂಡಿದ್ದರೂ ಮುಖದಲ್ಲಿ ಮಂದಹಾಸ ‍ಬೀರುವ ಪ್ರವೃತ್ತಿ ಬೆಳೆಸಿಕೊಂಡಿರುವ ರಂಗ ಕಲಾವಿದರ ಬದುಕಿಗೆ ಶಾಶ್ವತ ಪರಿಹಾರ ಒದಗಿಸಬೇಕಿದೆ ಎಂದು ನಿರ್ಮಾಪಕ ಮಂಡಿಬೆಲೆ ಮುನೇಗೌಡ ಸರ್ಕಾರಕ್ಕೆ ಒತ್ತಾಯಿಸಿದರು.

ಇಲ್ಲಿನ ಸಂತೆಬೀದಿಯಲ್ಲಿರುವ ಕನ್ನಡ ಕಲಾವಿದರ ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ 57ನೇ ಮಾಸದ ’ಕನ್ನಡದೀಪ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಕಷ್ಟ, ಸುಖ ಸಹಜ. ಕಷ್ಟ ಪರಿಹಾರವಾದ ಮೇಲೆ ಸುಖ ಬರುವುದು ಸಹಜ. ಆದರೆ, ರಂಗಕಲಾವಿದರ ಇಡೀ ಜೀವನ ಕಷ್ಟಗಳ ಸರಮಾಲೆ. ಸಾಮಾಜಿಕ ಜಾಲತಾಣಗಳು, ಧಾರಾವಾಹಿಗಳ ಪ್ರಭಾವಕ್ಕೆ ಪೌರಾಣಿಕ ನಾಟಕ, ಹರಿಕಥೆ, ಭಜನೆ, ಜಾನಪದ ಸಂಸ್ಕೃತಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವಸ್ತುಗಳಂತೆ ಆಗಿವೆ ಎಂದು ಬೇಸರ ವ್ಯಕ್ತಪಡಿಸಿದರು. 

ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದ್ದರೂ ಕಲಾವಿದರ ನೆರವಿಗಾಗಿ ಏನನ್ನೂ ಮಾಡುತ್ತಿಲ್ಲ. ಬಹಳಷ್ಟು ಮಂದಿ ಕಲಾವಿದರು ಕಲೆ ಮೇಲಿನ ವ್ಯಾಮೋಹದಿಂದ ಎಲ್ಲ ಸಂಪತ್ತು ಮಾರಿಕೊಂಡು ನಿರ್ಗತಿಕರಾಗಿದ್ದಾರೆ. ಕಲಾವಿದ ಎನ್.ರಾಜಗೋಪಾಲ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದರು.

ಸಾಹಿತಿ ಡಾ.ವಿ.ಎನ್.ರಮೇಶ್ ಮಾತನಾಡಿ, ‌ಹಿರಿಯ ಕಲಾವಿದರ ಬದುಕು ಅಕ್ಷರಶ ಬೀದಿಗೆ ಬಂದಿದೆ. ಅವರ ಮಕ್ಕಳು, ವಿದ್ಯಾಭ್ಯಾಸದಿಂದ ವಂಚಿತರಾಗಿ ಖಾಸಗಿ ಕಂಪನಿಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಕಲಾವಿದರೂ ಕೂಡ ಸಂಪಾದನೆ ಇಲ್ಲದೆ ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ ಎಂದು ನೊಂದು ನುಡಿದರು.

ಕನ್ನಡ ಕಲಾವಿದರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಜಗೋಪಾಲ್ ಮಾತನಾಡಿ, ಮಾಹಿತಿ ತಂತ್ರಜ್ಞಾನಯುಗ ಆರಂಭವಾದ ಮೇಲೆ ಯುವಜನರು ಸಂಸ್ಕಾರ, ಉತ್ತಮ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಕೌಟುಂಬಿಕ ಸಂಬಂಧಗಳ ಕುರಿತು ಮಾಹಿತಿ ಇಲ್ಲ. ಭಾವನಾತ್ಮಕ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ವಿಷಾದಿಸಿದರು.

ನಿರ್ಮಾಪಕ ಮಂಡಿಬೆಲೆ ಮುನೇಗೌಡ ಅವರನ್ನು ಸನ್ಮಾನಿಸಲಾಯಿತು. ಎಂ.ವಿ.ನಾಯ್ಡು ತಂಡದಿಂದ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯ ಕೋರಮಂಗಲ ಭೈರೇಗೌಡ, ಮುಖಂಡರಾದ ಕನಕರಾಜು, ಜಿ.ಎಂ.ಚಂದ್ರು, ಬೂದಿಗೆರೆ ಶ್ರೀನಿವಾಸ್, ವೆಂಕಟೇಶ್, ಲಕ್ಷ್ಮೀಪತಿ, ಮಹಾತ್ಮಾಂಜನೇಯ, ಕಲಾವಿದರ ಸಂಘದ ಕಾರ್ಯದರ್ಶಿ ಗೋವಿಂದರಾಜು, ನಾಗಯ್ಯ, ಗಾಯಕ ನರಸಿಂಹಪ್ಪ, ಮಹೇಶ್‌ಕುಮಾರ್, ವೆಲ್ಡರ್‌ಮುನಿಮಾರಪ್ಪ, ತಿಮ್ಮರಾಯಬಾಬು, ಇದ್ದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.