ಮಳೆ ನೀರು ಸಂಗ್ರಹ: ಪೌರಾಯುಕ್ತರ ಎಚ್ಚರಿಕೆ

ಬುಧವಾರ, ಏಪ್ರಿಲ್ 24, 2019
32 °C
ತಿಂಗಳ ಒಳಗಡೆ ಅಗತ್ಯಕ್ಕೆ ಅನುಕೂಲವಾಗಿ ಸಂಪ್‌ ನಿರ್ಮಿಸಿಕೊಳ್ಳಿ

ಮಳೆ ನೀರು ಸಂಗ್ರಹ: ಪೌರಾಯುಕ್ತರ ಎಚ್ಚರಿಕೆ

Published:
Updated:
Prajavani

ದೊಡ್ಡಬಳ್ಳಾಪುರ: ಕುಡಿಯುವ ಹಾಗೂ ದಿನ ಬಳಕೆ ನೀರಿಗೆ ಬೇಸಿಗೆಯಲ್ಲಿ ಪ್ರತಿ ವರ್ಷವು ಕೊರತೆ ಉಂಟಾಗುತ್ತಿದೆ. ಹೀಗಾಗಿ ನಗರದಲ್ಲಿನ ಕಲ್ಯಾಣ ಮಂದಿರ, ಚಿತ್ರ ಮಂದಿರ ಸೇರಿದಂತೆ ವಾಣಿಜ್ಯ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಣೆಯನ್ನು ಕಡ್ಡಾಯವಾಗಿ ಮಾಡಿಕೊಳ್ಳಲೇಬೇಕು. ಇಲ್ಲವಾದರೆ ಪರವಾನಗಿಯನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಪೌರಾಯುಕ್ತ ಆರ್‌. ಮಂಜುನಾಥ್‌ ಎಚ್ಚರಿಸಿದ್ದಾರೆ.

ಅವರು ನಗರಸಭೆಯಲ್ಲಿ ಕಲ್ಯಾಣ ಮಂದಿರ, ಚಿತ್ರಮಂದಿಗಳ ಮಾಲೀಕರ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಮಳೆ ನೀರು ಸಂಗ್ರಹಣೆ ಮಾಡಿಕೊಂಡು ಸ್ವಾವಲಂಬಿಗಳಾಗಿರುವ ಹಲವಾರು ಖಾಸಗಿ ಶಾಲೆ, ಆಸ್ಪತ್ರೆಗಳ ನಿದರ್ಶನ ದೊಡ್ಡಬಳ್ಳಾಪುರ ನಗರದಲ್ಲಿ ಇವೆ. ಮಳೆ ನೀರು ಸಂಗ್ರಹಣೆ ಮಾಡಿಕೊಳ್ಳಲು ಅಗತ್ಯ ಇರುವ ಸಂಪ್‌ಗಳನ್ನು 30 ದಿನಗಳ ಒಳಗಾಗಿ ನಿರ್ಮಿಸಿಕೊಳ್ಳದಿದ್ದರೆ ಪರವಾನಗಿಯನ್ನು ಹಿಂದಕ್ಕೆ ಪಡೆಯುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ತಮ್ಮ ನೀರಿನ ಬಳಕೆಯ ಅಗತ್ಯಗಳಿಗೆ ಅನುಗುಣವಾಗಿ ಸಂಪ್‌ಗಳನ್ನು ನಿರ್ಮಿಸಿಕೊಳ್ಳಬೇಕು. ಇದರಿಂದ ನಗರಸಭೆಗೆ ಸಾಕಷ್ಟು ವಿದ್ಯುತ್‌ ಬಿಲ್‌, ಹಾಗೆಯೇ ಅಂತರ್ಜಲವನ್ನು ಮೇಲೆತ್ತುವುದು ತಪ್ಪಲಿದೆ ಎಂದು ವಿವರಿಸಿದರು.

ಕಲ್ಯಾಣ ಮಂದಿರಗಳಲ್ಲಿ ಈಗ ಯಾರೂ ಕುಡಿಯಲು, ಅಡುಗೆ ಮಾಡಲು ಸಂಪ್‌ ನೀರನ್ನು ಬಳಸುವುದಿಲ್ಲ. ಬಾಟಲಿ ಅಥವಾ ಕ್ಯಾನ್‌ ನೀರನ್ನೇ ಬಳಸುತ್ತಾರೆ. ಹೀಗಾಗಿ ಮೇಲ್ಚಾವಣಿ ಮಳೆ ನೀರು ಸಂಗ್ರಹಿಸಿಕೊಂಡರೆ ಕೈ ತೊಳೆಯಲು, ಪಾತ್ರೆಗಳನ್ನು ಶುಚಿಗೊಳಿಸಲು ಹಾಗೂ ಶೌಚಾಲಯಕ್ಕೂ ಬಳಕೆಯಾಗಲಿದೆ. ಇದೇ ರೀತಿಯಲ್ಲಿ ಚಿತ್ರಮಂದಿರದಲ್ಲಿ ಇಡೀ ವರ್ಷಕ್ಕೆ ಸಾಕಾಗುಷ್ಟು ಮಳೆ ನೀರನ್ನು ಸಂಗ್ರಹಿಸಿಕೊಂಡು ಶೌಚಾಲಯಕ್ಕೆ ಬಳಸಲು ಸಾಧ್ಯವಿದೆ ಎಂದು ಹೇಳಿದರು.

‘ಟ್ಯಾಂಕರ್‌ ನೀರು ಖರೀದಿಸಲು ಅಥವಾ ನಗರಸಭೆಗೆ ಕಟ್ಟುವ ನೀರಿನ ಶುಲ್ಕದ ಒಂದು ವರ್ಷದ ಹಣವನ್ನು ಸಂಪ್‌ಗಳ ನಿರ್ಮಾಣಕ್ಕೆ ಖರ್ಚು ಮಾಡಿದರೆ ಶಾಶ್ವತವಾಗಿ ಹಣ ಉಳಿತಾಯವಾಗಲಿದೆ’ ಎಂದರು.

ಮಳೆ ನೀರು ಸಂಗ್ರಹಣೆ ವ್ಯವಸ್ಥೆ ಮಾಡಿಕೊಳ್ಳುವುದರಿಂದ ಕಲ್ಯಾಣ ಮಂದಿರ, ಚಿತ್ರಮಂದಿರಗಳ ಮಾಲೀಕರಿಗೆ ಹಣ ಉಳಿತಾಯವು ಆಗಲಿದೆ. ನೀರಿನಲ್ಲಿ ಸ್ವಾವಲಂಬಿಗಳಾಗಬಹುದಾಗಿದೆ. ಸಂಪ್‌ ಕಾಮಗಾರಿ ನಡೆಯುತ್ತಿರುವ ಬಗ್ಗೆ ಒಂದು ವಾರದ ಒಳಗೆ ಕಡ್ಡಾಯವಾಗಿ ಚಿತ್ರ ಸಮೇತ ಪ್ರತಿ ಕಲ್ಯಾಣ ಮಂದಿರ, ಚಿತ್ರಮಂದಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲೇಬೇಕಾಗಿದೆ. 30 ದಿನಗಳ ಒಳಗೆ ಕಾಮಗಾರಿ ಪೂರ್ಣಗೊಂಡಿರುವ ವರದಿಯನ್ನು ನೀಡಬೇಕು ಎಂದರು.

ಸಭೆಯಲ್ಲಿ ನಗರಸಭೆ ಕಾರ್ಯಪಾಲಕ ಎಂಜಿನಿಯರ್‌ ಶೇಕ್‌ ಫಿರೋಜ್‌, ಎಂಜಿನಿಯರಿಂಗ್‌ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !