ದೇವನಹಳ್ಳಿ: ‘ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಸರ್ಕಾರ ಪರಿಶಿಷ್ಟ ಸಮುದಾಯಗಳ ಒಳ ಮೀಸಲಾತಿಯನ್ನು ಘೋಷಣೆ ಮಾಡಿದೆ. ಕಳೆದ 30 ವರ್ಷಗಳಿಂದ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಲು ಸಾಕಷ್ಟು ಹೋರಾಟಗಳು ನಡೆದಿದ್ದವು. ರಾಜ್ಯ ಸರ್ಕಾರದ ಈ ನಡೆಯನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ’ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಬೈಪಾಸ್‌ನಲ್ಲಿ ಆಂಧ್ರಪ್ರದೇಶದ ಮಂತ್ರಾಲಯದಿಂದ ಬೆಂಗಳೂರಿಗೆ ಹೋಗುವ ವೇಳೆ ದೇವನಹಳ್ಳಿ ತಾಲ್ಲೂಕು ಮಾದಿಗ ಸಮಾಜ ಹಾಗೂ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ಸದಾಶಿವ ವರದಿ, ಹಾವನೂರು ವರದಿ ಎರಡೂ ಕೇವಲ ಮಾದಿಗ ಸಮುದಾಯಕ್ಕೆ ಮಾತ್ರ ಮೀಸಲಾತಿ ಕಲ್ಪಿಸುವುದಿಲ್ಲ. ಎಲ್ಲ ಪರಿಶಿಷ್ಟ ಉಪ ಜಾತಿಗಳಿಗೂ ಮೀಸಲಾತಿ ಕಲ್ಪಿಸುತ್ತವೆ. ಒಳ ಮೀಸಲಾತಿಯ ಅನುಷ್ಠಾನಕ್ಕೆ ನಡೆಯುತ್ತಿದ್ದ ದಶಕಗಳ ಹೋರಾಟಕ್ಕೆ ಸಂದ ಜಯ ಇದು’ ಎಂದರು.
ಒಳ ಮೀಸಲಾತಿ ಕುರಿತು ಸದಾಶಿವ ಆಯೋಗ ರಚನೆ ಮಾಡಿದ್ದ ಕಾಂಗ್ರೆಸ್ ಸರ್ಕಾರ, ಅದರ ಕಾರ್ಯ ಕಲಾಪ ನಡೆಸಲು ಒಂದು ಕುರ್ಚಿ ನೀಡಿರಲಿಲ್ಲ. ಆದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ಸದಾಶಿವ ಆಯೋಗಕ್ಕೆ ₹15 ಕೋಟಿ ಅನುದಾನ ನೀಡಿದ್ದರು ಎಂದರು.
ಇದರ ಸಹಾಯದಿಂದ ರಾಜ್ಯದಾದ್ಯಂತ ಪ್ರವಾಸ ಮಾಡಿ, ಸ್ಥಿತಿಗತಿಗಳನ್ನು ತಿಳಿದುಕೊಂಡು, ಆಯೋಗವು ಸರ್ಕಾರಕ್ಕೆ ವರದಿ ನೀಡಿತ್ತು. ಆದರೆ, ಕಾಂಗ್ರೆಸ್ ನೇತೃತ್ವದ ಸರ್ಕಾರ ಇದನ್ನು ಜಾರಿ ಮಾಡಲು ಹಿಂದೆಟ್ಟು ಹಾಕಿತ್ತು. ಆದರೆ, ಕಾಂಗ್ರೆಸ್‌ನ ಸಚಿವರಾಗಿದ್ದ ಎಚ್. ಆಂಜನೇಯ ವರದಿ ಅನುಷ್ಠಾನಕ್ಕೆ ಯತ್ನಿಸಿದ್ದರೂ, ಅದು ಸಾಧ್ಯವಾಗಿರಲಿಲ್ಲ ಎಂದರು.
ಕೇಂದ್ರ ಸರ್ಕಾರದಲ್ಲಿ ಮೀಸಲಾತಿಗೆ ಅನುಮೋದನೆ ಯಾವಾಗ ದೊರೆಯುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ
ಪ್ರತಿಕ್ರಿಯಿಸಿದ ಅವರು, ಆಂಧ್ರಪ್ರದೇಶದಲ್ಲಿ ಮೀಸಲಾತಿ ವರ್ಗೀಕರಣದ ತೀರ್ಮಾನ ಮಾಡಿದ್ದಾಗ ಇ.ವಿ. ಚನ್ನಯ್ಯ ದಾವೆಯಲ್ಲಿ ತಡೆಯಾಜ್ಞೆ ನೀಡಿದ್ದರು. ಅರುಣ್ ಮಿಶ್ರಾ ಹಾಗೂ ದೆವೇಂದ್ರನಾಥ್ ಪಂಜಾಬ್ ಕೇಸ್‌ನಲ್ಲಿ ಒಳ ಮೀಸಲಾತಿ ಬಗ್ಗೆ 5ನೇ ಸಂವಿಧಾನ ಪೀಠ ಆದೇಶ ನೀಡಿದೆ. 70 ವರ್ಷಗಳ ಆಡಳಿತ ವ್ಯವಸ್ಥೆಯಲ್ಲಿ ದೇಶದ ಅನೇಕ ಜನಾಂಗಗಳು ಮೀಸಲಾತಿಯಲ್ಲಿ ಬರಲಿದ್ದಾರೆ ಎಂದರು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಎಲ್.ಎನ್. ಅಶ್ವಥ್ ನಾರಾಯಣ್, ರಾಜ್ಯ ಮಾದಿಗ ದಂಡೋರ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಪುರಸಭೆ ಮಾಜಿ ಸದಸ್ಯ ವಿ.ಹನುಮಂತಪ್ಪ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಎಸ್.ರಮೇಶ್ ಕುಮಾರ್, ಹೇಮಂತ್, ಕದಿರಪ್ಪ, ರವಿ ಸೇರಿದಂತೆ ಇತರರು ಇದ್ದರು.
ಸಮುದಾಯ ಹೋರಾಟದ ಫಲ
ಸಂಘಟನೆಗಳ ಹೋರಾಟದ ಪ್ರತಿಫಲ, ಸಂಘ ಪರಿವಾರದ ಪ್ರಾಮಾಣಿಕ ಪ್ರಯತ್ನದಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿದ್ದಾರೆ. ಮಾದಿಗರಿಗೆ ಶೇ 6, ಬಲಗೈ ಸಮುದಾಯಕ್ಕೆ ಶೇ 5.5, ಸ್ಪೃಶ್ಯ ಜಾತಿಗೆ ಶೇ 4.5 ಮೀಸಲು ನೀಡಲಾಗಿದೆ. ಜತೆಗೆ ಲಂಬಾಣಿ, ಬೋವಿ, ಕೊರಚ, ಸಮಾಜದವರನ್ನು ಮೀಸಲಾತಿಯಿಂದ ತೆಗೆದುಹಾಕುತ್ತಾರೆ ಎಂದು ಬೆದರಿಸಿದ್ದರು. ಆ ಸಮಾಜಗಳಿಗೂ ಆದ್ಯತೆ ನೀಡಿದ್ದೇವೆ ಎಂದು ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.
ಭಾಗಶಃ ಜನಾಂಗಗಳು ಮೀಸಲಾತಿ ಪಡೆದಿಲ್ಲ. ಮೀಸಲಾತಿಯಲ್ಲಿ ನ್ಯಾಯ ಒದಗಿಸುವ ಜವಾಬ್ದಾರಿ ಸರ್ಕಾರಕ್ಕಿದೆ. 75 ವರ್ಷ ಆಡಳಿತ ನಡೆಸಿದ ಸರ್ಕಾರಗಳಿಂದ ಮೀಸಲಾತಿ ಹಂಚಿಕೆಯಲ್ಲಿ ವಂಚನೆಯಾಗಿದೆ. ವಂಚನೆಯನ್ನು ಸರಿದೂಗಿಸಬೇಕಾದರೆ ವರ್ಗೀಕರಣ ಅವಶ್ಯಕತೆ ಇದೆ ಎಂದು ಸಂವಿಧಾನ ಪೀಠ ಆದೇಶ ಮಾಡಿದೆ ಎಂದರು.
ಅಭಿವೃದ್ಧಿ ಕಾರ್ಯ ಜನತೆಗೆ ತಲುಪಿಸಿ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ತಲುಪಿಸಬೇಕು. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ದೇವನಹಳ್ಳಿಗೆ ಚುನಾವಣೆ ಸಂದರ್ಭದಲ್ಲಿ ಬರುತ್ತೇನೆ. ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿಯಲ್ಲಿ ಮಾದಿಗ ಸಮುದಾಯಕ್ಕೆ 6% ಮೀಸಲಾತಿಯನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು ಹಾಗೂ ಕಾನೂನು ಸಚಿವರು, ಕೇಂದ್ರ ಸಚಿವ ನಾರಾಯಣಸ್ವಾಮಿ, ಅವರನ್ನು ಅಭಿನಂದಿಸಬೇಕು.ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.