ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕಟ್ಟಡ ಅವಶೇಷ ತೆರವಿಗೆ ಆಗ್ರಹ

ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಹಿಂಜರಿಕೆ
Last Updated 1 ಅಕ್ಟೋಬರ್ 2022, 4:26 IST
ಅಕ್ಷರ ಗಾತ್ರ

ವಿಜಯಪುರ(ಬೆಂ.ಗ್ರಾಮಾಂತರ): ಸರ್ಕಾರಿ ಶಾಲಾ ಕಟ್ಟಡ ಕುಸಿದು ಬಿದ್ದು ಒಂದು ತಿಂಗಳು ಕಳೆದರೂ ಕಟ್ಟಡದ ಅವಶೇಷಗಳನ್ನು ಈವರೆಗೂ ತೆರವುಗೊಳಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಜೊತೆಗೆ ಶಿಥಿಲವಾಗಿರುವ ಕಟ್ಟಡದ ಕಡೆಗೆ ಶಾಲೆ ಮಕ್ಕಳು ಹೋಗದಂತೆ ತಾತ್ಕಾಲಿಕ ತಡೆಗೋಡೆಯನ್ನೂ ನಿರ್ಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಕಲ್ಲು ಚಪ್ಪಡಿ ಮೇಲ್ಛಾವಣಿಯುಳ್ಳ ಶಾಲಾ ಕಟ್ಟಡವು ಕುಸಿದು ಬಿದ್ದಿತ್ತು. ಅದೃಷ್ಟವಶಾತ್ ಈ ವೇಳೆ ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲಿ ಇಲ್ಲದಿರುವುದರಿಂದ ಯಾವುದೇ ಅನುಹುತ ಸಂಭವಿಸಿರಲಿಲ್ಲ. ಶಾಲೆಯಲ್ಲಿ 13ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಿಥಿಲವಾದ ಕಟ್ಟಡದ ಪಕ್ಕದಲ್ಲೆ ಅಂಗನವಾಡಿ ಕೇಂದ್ರವೂ ಇದೆ. ಮಕ್ಕಳು ಇಲ್ಲೆ ಆಟವಾಡಿಕೊಂಡಿರುತ್ತಾರೆ. ಮುರಿದು ಬಿದ್ದಿರುವ ಕಲ್ಲು ಚಪ್ಪಡಿಗಳು ಕಬ್ಬಿಣದ ಕಂಬಗಳ ಮೇಲೆ ನಿಂತಿವೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ, ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜನರು ದೂರಿದ್ದಾರೆ.

ಶಾಲೆಯ ಆವರಣದಲ್ಲಿ ಗಿಡಗಂಟಿಗಳು ದಟ್ಟವಾಗಿ ಬೆಳೆದಿದ್ದು, ವಿಷ ಜಂತುಗಳು ಇರುವ ಸಾಧ್ಯತೆಯೂ ಇದೆ.ಈ ಸಂಬಂಧ ಗ್ರಾಮಸಭೆಯಲ್ಲೂ ಪ್ರಸ್ತಾಪ ಮಾಡಿದ್ದೇವೆ. ಆದರೆ, ಇದುವರೆಗೂ ಕ್ರಮ ಜರುಗಿಸಿಲ್ಲ. ಶಾಲೆಗೆ ಮಕ್ಕಳನ್ನು ಕಳುಹಿಸಲು ಭಯ ಪಡುವಂತಾಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು.

ಸಿ.ಆರ್.ಪಿ.ಮುನಿಯಪ್ಪ ಮಾತನಾಡಿ, ಕಟ್ಟಡ ಕುಸಿದುಬಿದ್ದ ಕೂಡಲೇ ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಅವಶೇಷಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿಕೊಂಡಿದ್ದೆವು. ನಮ್ಮ ಇಲಾಖೆಗೂ ಪತ್ರ ಬರೆದಿದ್ದೇವೆ. ಅವಶೇಷಗಳು ತೆರವುಗೊಳಿಸಲು ಪಂಚಾಯಿತಿಯಲ್ಲಿ ಅನುದಾನವಿಲ್ಲ ಎಂಬ ನೆಪ ಹೇಳಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಮೇಲೆ ನಿಗಾ: ‘ಶಾಲಾ ಕಟ್ಟಡ ಕುಸಿದು ಬಿದ್ದ ಕೂಡಲೇ ನಮ್ಮ ಶಾಲಾಭಿವೃದ್ಧಿ ಸಮಿತಿ ಗ್ರಾಮ ಪಂಚಾಯಿತಿ ಹಾಗೂ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಶಾಲೆಯಿಂದ ಮಕ್ಕಳನ್ನು ಹೊರಗೆ ಬಿಡಲು ಭಯಪಡುವಂತಾಗಿದೆ. ಆದಾಗ್ಯೂ, ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳು ಕುಸಿದ ಕಟ್ಟಡ ಸ್ಥಳದತ್ತ ವಿದ್ಯಾರ್ಥಿಗಳು ಹೋಗದಂತೆ ನಿಗಾ ವಹಿಸಲಾಗುತ್ತಿದೆ’ ಎಂದುಶಾಲೆ ಮುಖ್ಯ ಶಿಕ್ಷಕಿ ಕೆ.ಎಂ.ಬೂದಿಹಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT