ಕುಟುಂಬಗಳು ವಂಚಿತ, ಸೌದೆಗಾಗಿ ಹುಡುಕಾಟ ದೂರು

7
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಸಿಲಿಂಡರ್‌ಗಳ ಉಚಿತ ವಿತರಣೆ

ಕುಟುಂಬಗಳು ವಂಚಿತ, ಸೌದೆಗಾಗಿ ಹುಡುಕಾಟ ದೂರು

Published:
Updated:
Prajavani

ವಿಜಯಪುರ : ಕೇಂದ್ರ ಸರ್ಕಾರ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಉಚಿತವಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿನ ಬಹುತೇಕ ಬಡಕುಟುಂಬಗಳು ಈ ಸೌಲಭ್ಯದಿಂದ ವಂಚಿತವಾಗಿವೆ ಎಂದು ಮುಖಂಡ ಎಸ್. ಮಂಜುನಾಥ್ ಹೇಳಿದರು.

ತಾಲ್ಲೂಕಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಹಳ್ಳಿಗಳಲ್ಲಿ ಮಹಿಳೆಯರು ಇಂದಿಗೂ ಸೌದೆ ಸಂಗ್ರಹಣೆಗಾಗಿ ಅರಣ್ಯ ಪ್ರದೇಶಗಳು, ನೀಲಗಿರಿ ತೋಪುಗಳ ಕಡೆಗೆ ಹೋಗಿ ಸೌದೆ ಸಂಗ್ರಹಣೆ ಮಾಡಿಕೊಂಡು ಬಂದು ಅಡುಗೆ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು.

ಪ್ರತಿಯೊಂದು ಕುಟುಂಬಕ್ಕೂ ಅಡುಗೆ ಸಿಲಿಂಡರ್‌ಗಳನ್ನು ವಿತರಣೆ ಮಾಡುವುದಾಗಿ ಸರ್ಕಾರ ಹೇಳಿದೆ. ಗ್ಯಾಸ್ ಏಜೆನ್ಸಿಗಳ ಮೂಲಕ ಪೂರೈಕೆ ಮಾಡುವ ಭರವಸೆ ನೀಡಿದ್ದರೂ ಹಳ್ಳಿಗಳಲ್ಲಿ ಉಜ್ವಲ ಯೋಜನೆಯಡಿಯಲ್ಲಿ ಹೇಗೆ ಅವುಗಳನ್ನು ಪಡೆದುಕೊಳ್ಳಬೇಕು ಎನ್ನುವುದು ಇದುವರೆಗೂ ತಿಳಿದಿಲ್ಲ ಎಂದರು.

ಹಳ್ಳಿಗಳಲ್ಲಿ ಮೊದಲೇ ಅಡುಗೆ ಅನಿಲ ಸಂಪರ್ಕ ಪಡೆದುಕೊಂಡಿರುವವರೂ ಎರಡು ಸಿಲಿಂಡರ್‌ಗಳು ಸಿಗುತ್ತವೆ ಎನ್ನುವ ಕಾರಣಕ್ಕಾಗಿ ಉಜ್ವಲ ಯೋಜನೆಯ ಮೂಲಕವೂ ಪಡೆದುಕೊಂಡಿದ್ದಾರೆ. ಕೆಲ ಕುಟುಂಬಗಳಿಗೆ ಇದುವರೆಗೂ ತಲುಪಿಲ್ಲ ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಉರುವಲು ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಿದ್ದ ಊರಿನ ಹೆಸರೇಳಲು ಇಚ್ಛಿಸದ ಮಹಿಳೆ ಲಕ್ಷ್ಮಮ್ಮ ಮಾತನಾಡಿ, ‘ಸಿಲಿಂಡರ್‌ಗಳು ಉಚಿತವಾಗಿ ಕೊಡ್ತಾರಂತೆ, ಅದಕ್ಕೆ 1 ಸಾವಿರ ರೂಪಾಯಿ ಕಟ್ಟಬೇಕಂತೆ, ನಾವು ಕೂಲಿ ಮಾಡೋರು, ಅಷ್ಟೊಂದು ದುಡ್ಡು ಎಲ್ಲಿಂದ ತರೋದು ಸ್ವಾಮಿ, ಸಿಲಿಂಡರ್ ಮುಗಿದೋದ್ರೆ ಮತ್ತೆ ತಗೋಬೇಕು ಅಂದ್ರೆ ₹ 800 ಕೊಡಬೇಕಂತೆ. ಅದಕ್ಕೆ ನಾವ್ಯಾರು ಗ್ಯಾಸ್ ಸಂಪರ್ಕ ತಗೊಂಡಿಲ್ಲ’ ಎಂದರು.

ಸ್ಥಳೀಯ ಯುವ ಮುಖಂಡ ಮೂರ್ತಿ ಮಾತನಾಡಿ, ಕೇಂದ್ರ ಸರ್ಕಾರ ಬಡವರ ಹೆಸರೇಳಿಕೊಂಡು ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಕೊಡುತ್ತಿದೆ. ಪುನಃ ಅದೇ ಬಡವರು ಸಿಲಿಂಡರ್ ಖರೀದಿ ಮಾಡಬೇಕಾದರೆ ₹ 800 ಖರ್ಚು ಮಾಡಬೇಕು ಎಂದರು.

ಇದರಿಂದ ಸಂಪರ್ಕ ಪಡೆದುಕೊಂಡಿರುವ ಎಷ್ಟೋ ಮಂದಿ ಬಡವರು ಸಿಲಿಂಡರ್ ಉಪಯೋಗ ಮಾಡುವುದನ್ನು ಬಿಟ್ಟು ಪುನಃ ಸೌದೆಗಾಗಿ ಹುಡುಕಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡಜನರ ಈ ಪರಿಸ್ಥಿತಿ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಈ ಕುರಿತು ಶಾಶ್ವತ ಪರಿಹಾರ ಸೂಚಿಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !