ನಿಮ್ಮ ಬದಲು ಅಟೆಂಡರ್‌ಗಳನ್ನು ಕಳುಹಿಸಿ: ಡಿ.ಕೆ.ಸುರೇಶ್‌

7
ಕೆಡಿಪಿ ಸಭೆಯಲ್ಲಿ ಗೈರಾದ ಅಧಿಕಾರಿಗಳ ವಿರುದ್ಧ ಸಂಸದ ಗುಡುಗು

ನಿಮ್ಮ ಬದಲು ಅಟೆಂಡರ್‌ಗಳನ್ನು ಕಳುಹಿಸಿ: ಡಿ.ಕೆ.ಸುರೇಶ್‌

Published:
Updated:
Deccan Herald

ಆನೇಕಲ್: ಕೆಡಿಪಿ ಸಭೆಗಳು ಜನರ ಸಮಸ್ಯೆಗಳನ್ನು ಬಿಂಬಿಸುವ, ಅಭಿವೃದ್ಧಿ ವೇಗ ಹೆಚ್ಚಿಸುವ ಸಭೆಗಳಾಗಬೇಕು. ಅಧಿಕಾರಿಗಳು ಪೂರ್ಣ ಪ್ರಮಾಣದ ಮಾಹಿತಿಯೊಂದಿಗೆ ಹಾಜರಾಗಬೇಕೆಂದು ಸಂಸದ ಡಿ.ಕೆ.ಸುರೇಶ್ ಖಡಕ್‌ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಸಭೆಗಳ ಬಗ್ಗೆ ಅಧಿಕಾರಿಗಳು ತಾತ್ಸರ ಮನೋಭಾವ ಬಿಡಬೇಕು. ಹಲವು ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಕೆಲ ಇಲಾಖೆಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸದೆ ಸಹಾಯಕ ಅಧಿಕಾರಿಗಳನ್ನು ಸಭೆಗೆ ನಿಯೋಜಿಸಲಾಗಿದೆ. ಆ ಅಧಿಕಾರಿಗಳಿಗೆ ನೋಟಿಸ್‌ ನೀಡಬೇಕು. ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಇದಕ್ಕೆ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದರು.

ಪಟ್ಟಣದ ಬಹುದಿನಗಳ ಬೇಡಿಕೆಯಾದ ಥಳೀ ರಸ್ತೆ ವಿಸ್ತರಣೆಗೆ ₹2.65ಕೋಟಿ ಹಣ ಮಂಜೂರಾಗಿದೆ. ಈ ಪೈಕಿ ₹ 1.9ಕೋಟಿ ಸ್ವಾಧೀನಪಡಿಸಿಕೊಳ್ಳುವ ಮನೆ ಮಾಲೀಕರಿಗೆ ಪರಿಹಾರಕ್ಕಾಗಿ ಹಣ ಮೀಸಲಿಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆನೇಕಲ್‌–ಹೊಸೂರು ರಸ್ತೆ, ಸರ್ಜಾಪುರ–ಇಚ್ಛಂಗೂರು ರಸ್ತೆಗಳು ಹಾಳಾಗಿವೆ. ಇವುಗಳನ್ನು ಕೂಡಲೇ ಅಭಿವೃದ್ಧಿ ಪಡಿಸಲು ಕ್ರಿಯಾ ಯೋಜನೆ ತಯಾರಿಸಬೇಕು. ಅತ್ತಿಬೆಲೆ–ಸರ್ಜಾಪುರ, ಬ್ಯಾಗಡದೇನಹಳ್ಳಿಯಿಂದ ಇಗ್ಗಲೂರುವರೆಗೆ ದ್ವಿಪಥದ ರಸ್ತೆ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.

ಶುದ್ಧ ಕುಡಿಯುವ ನೀರಿನ ಘಟಕಗಳು ಶೋಕಿಗಲ್ಲ: ತಾಲ್ಲೂಕಿನ ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆಯಿಲ್ಲದೆ ಜನರು ಪರದಾಡುತ್ತಿದ್ದಾರೆ ಎಂಬ ದೂರುಗಳಿವೆ. ಶುದ್ಧ ಕುಡಿಯುವ ನೀರಿನ ಘಟಕಗಳು ಜನರಿಗಾಗಿ ಪ್ರಾರಂಭವಾಗಬೇಕೇ ವಿನಃ ಕಂಟ್ರಾಕ್ಟರ್‌ಗಳು ಹಾಗೂ ಮಧ್ಯವರ್ತಿಗಳಿಗೆ ಲಾಭ ಮಾಡಲು ಪ್ರಾರಂಭ ಮಾಡಬಾರದು ಎಂದರು.

ಶಿಕ್ಷಣ ಇಲಾಖೆಯು ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಹಾಗೂ ಸೌಲಭ್ಯಗಳ ಅಭಿವೃದ್ಧಿಗೆ ಸ್ಥಳೀಯ ಗ್ರಾಮ ಪಂಚಾಯಿತಿಗಳು ಹಾಗೂ ಕೈಗಾರಿಕೆಗಳನ್ನು ಒಗ್ಗೂಡಿಸಿ ಅವರ ಮೂಲಕ ಅತಿಥಿ ಶಿಕ್ಷಕರ ನೇಮಕ, ಶೌಚಾಲಯ, ಕಂಪ್ಯೂಟರ್, ಪೀಠೋಪಕರಣ ಪಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಕೆರೆಗಳಿಗೆ ತ್ಯಾಜ್ಯ ನೀರು ಬಿಡಲಾಗುತ್ತಿದ್ದರೆ ಸಂಬಂಧಿಸಿದವರ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ದೂರು ದಾಖಲಿಸಬೇಕು ಎಂದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲು ಇರುವ ಅಡೆತಡೆ ನಿವಾರಿಸಿ ಮಂಜೂರಾಗಿರುವ ಎಲ್ಲಾ ರಸ್ತೆಗಳ ಕಾಮಗಾರಿ ಕೈಗೊಳ್ಳುವ ಮೂಲಕ ಜನರಿಗೆ ತ್ವರಿತ ಸೌಲಭ್ಯ ನೀಡುವ ಅವಶ್ಯ ಇದೆ. ಅಂಬೇಡ್ಕರ್ ಭವನ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕು. ಬಗರ್‌ಹುಕುಂ ಸಾಗುವಳಿ ಮಂಜೂರಾತಿ ಮಾಡಿರುವ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲು ತಹಶೀಲ್ದಾರ್ ಕ್ರಮ ವಹಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮುನಿರತ್ನಮ್ಮ ನಾರಾಯಣ್, ಉಪಾಧ್ಯಕ್ಷರಾದ ಚಂದ್ರಕಲಾ ಮುನಿರಾಜು, ಕಾರ್ಯನಿರ್ವಹಣಾಧಿಕಾರಿ ಟಿ.ಕೆ. ರಮೇಶ್, ತಹಶೀಲ್ದಾರ್ ಸಿ.ಮಹದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ವೆಂಕಟೇಶ್‌ಗೌಡ, ಎಚ್.ಜೆ. ಪ್ರಸನ್ನಕುಮಾರ್, ಮಮತಾ ವಿಜಯಕೃಷ್ಣ, ಪಾರಿಜಾತ ದೊರೆಸ್ವಾಮಿ, ವಾತ್ಸಲ್ಯ ಲಕ್ಷ್ಮೀನಾರಾಯಣ್, ನಾಗೇಶ್‌ರೆಡ್ಡಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !