ಶುಕ್ರವಾರ, ನವೆಂಬರ್ 27, 2020
24 °C
ಖರೀದಿಗೆ ಆಸಕ್ತ ತೋರದ ಗ್ರಾಹಕರು * ನಿರೀಕ್ಷೆಯಲ್ಲಿ ವ್ಯಾಪಾರಸ್ಥರು

ಪಟಾಕಿ ಮೇಲೂ ಸೋಂಕಿನ ಕರಿನೆರಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ದೀಪಾವಳಿ ಹಬ್ಬ ಬಂತೆಂದರೆ ತಾಲ್ಲೂಕಿನ ಗಡಿಭಾಗ ಅತ್ತಿಬೆಲೆಯಲ್ಲಿ ಪಟಾಕಿಗಳ ಸದ್ದು ಜೋರಾಗಿರುತ್ತಿತ್ತು. ಆದರೆ, ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಪಟಾಕಿಗಳ ಸದ್ದು ಕಡಿಮೆಯಾಗಿದೆ.

ಅತ್ತಿಬೆಲೆ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿದ್ದು ಪಟಾಕಿಗಳ ವ್ಯಾಪಾರಕ್ಕೆ ಪ್ರಸಿದ್ಧಿ. ತಮಿಳುನಾಡಿನ ಶಿವಕಾಶಿಯಿಂದ ಪ್ರತಿವರ್ಷ ಕೋಟ್ಯಂತರ ಬೆಲೆ ಬಾಳುವ ಪಟಾಕಿ ಸಗಟು ಖರೀದಿ ಮಾಡಿ ವ್ಯಾಪಾರಿಗಳು ಅತ್ತಿಬೆಲೆಯಲ್ಲಿ ಮಳಿಗೆ ಇಟ್ಟು ಮಾರಾಟ ಮಾಡುತ್ತಿದ್ದರು. ಗಡಿಯಲ್ಲಿ ನೂರಾರು ಅಂಗಡಿಗಳು ಪ್ರಾರಂಭವಾಗಿ ಭರಾಟೆ ವ್ಯಾಪಾರ ನಡೆಸುತ್ತಿದ್ದವು. ಹಬ್ಬಕ್ಕಿಂತ ಮುಂಚೆ 10 ದಿನಗಳಲ್ಲಿ ಪ್ರಾರಂಭವಾಗುವ ಅಂಗಡಿಗಳು ದೀಪಾವಳಿ ಮುಗಿಯುತ್ತಿದ್ದಂತೆ ತೆರವಾಗುತ್ತಿದ್ದವು. ಆದರೆ, ಈವರ್ಷ ಅತ್ತಿಬೆಲೆ ಪರಿಸ್ಥಿತಿ ಭಿನ್ನವಾಗಿದೆ. ಅಲ್ಲಲ್ಲಿ ವಿರಳವಾಗಿ ಅಂಗಡಿಗಳು ಪ್ರಾರಂಭವಾಗಿವೆ. ಪ್ರತಿವರ್ಷ 500ಕ್ಕೂ ಹೆಚ್ಚು ಅಂಗಡಿಗಳು ಸ್ಥಾಪನೆಯಾಗುತ್ತಿದ್ದವು. ಆದರೆ, ಈ ವರ್ಷ ಕೇವಲ 10-15 ಅಂಗಡಿಗಳಿವೆ. ತಾತ್ಕಾಲಿಕ ಮಳಿಗೆಗಳು ಪ್ರಾರಂಭದ ಸಿದ್ಧತೆಯಲ್ಲಿವೆ. ಹಬ್ಬಕ್ಕೆ ಕೇವಲ ಒಂದು ವಾರವಿದೆ. ಆದರೆ, ಪಟಾಕಿಗಳ ಮಾರಾಟದ ಭರಾಟೆ ಇಲ್ಲ.

ಕಂದಾಯ ಇಲಾಖೆ, ಪುರಸಭೆ ಮತ್ತು ಪೊಲೀಸರಿಂದ ಪರವಾನಗಿ ಪಡೆದು ಅಂಗಡಿಗಳನ್ನು ಪ್ರಾರಂಭಿಸಬೇಕು. ಇದುವರೆಗೂ ಪರವಾನಗಿ ದೊರೆತಿಲ್ಲ. ಕೆಲವೇ ಅಂಗಡಿಗಳಿಗೆ ಮಾತ್ರ ಕಾಯಂ ಪರವಾನಗಿ ಇದೆ. ಅಲ್ಲಿ ಪಟಾಕಿ ವ್ಯಾಪಾರ ನಡೆಯುತ್ತಿದೆ. ಹಬ್ಬಕ್ಕೆಂದೇ ವಿಶೇಷವಾಗಿ ಪ್ರಾರಂಭವಾಗುತ್ತಿದ್ದ ತಾತ್ಕಾಲಿಕ ಮಳಿಗೆಗಳು ಪ್ರಾರಂಭವಾಗಿಲ್ಲ. ಪಟಾಕಿ ಖರೀದಿಸುವ ಗ್ರಾಹಕರ ಸಂಖ್ಯೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇದೆ. ಒಂದು ಅಂಗಡಿ ಪ್ರಾರಂಭ ಮಾಡಬೇಕಾದರೆ ₹50-75ಲಕ್ಷ ಬಂಡವಾಳ ಹಾಕಬೇಕು. ಇಷ್ಟೆಲ್ಲ ಬಂಡವಾಳ ಹಾಕಿದ್ದರೂ ಕೊಳ್ಳುವವರೇ ಇಲ್ಲ ಎಂದು ಅಂಗಡಿ ಮಾಲೀಕ ರಾಜು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಪಟಾಕಿಗಳನ್ನು ನಿಷೇಧಿಸಿದೆ. ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ ಇದೆ ಎಂಬ ಸುದ್ದಿಗಳಿಂದಾಗಿ ಜನರು ಪಟಾಕಿ ಅಂಗಡಿಗಳತ್ತ ಬರುತ್ತಿಲ್ಲ. ಹಬ್ಬ ಸಮೀಪವಾದಂತೆ ಪಟಾಕಿಕೊಳ್ಳಲು ಜನ ಬರಬಹುದು ಎಂಬ ವಿಶ್ವಾಸದಲ್ಲಿ ಅಂಗಡಿ ಮಾಲೀಕರು ಇದ್ದಾರೆ. ಹಿಂದಿನ ವರ್ಷಗಳ ವ್ಯಾಪಾರ ವಹಿವಾಟು ನಡೆಯುವುದು ಕಷ್ಟ ಎಂಬುದು ವ್ಯಾಪಾರಿ ವಿಜಿ ಅವರ ಅಭಿಪ್ರಾಯ.

ಸ್ಥಳೀಯ ಪೊಲೀಸರ ಮಾಹಿತಿಯಂತೆ ತಾತ್ಕಾಲಿಕ ಪಟಾಕಿ ಅಂಗಡಿ ಮಳಿಗೆಗಳನ್ನು ತೆರೆಯುವ ಸಂಬಂಧ ವ್ಯಾಪಾರಿಗಳ ಮನವಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಅವರಿಂದ ಅನುಮತಿ ಸಿಕ್ಕ ನಂತರ ಅಂಗಡಿಪ್ರಾರಂಭಿಸಲು ಅವಕಾಶವಿದೆ ಎಂದು ಹೇಳುತ್ತಾರೆ.

ವರ್ಷವಿಡೀ ಪಟಾಕಿ ಸಂಗ್ರಹಿಸಿ ಹಬ್ಬದ ಒಂದು ವಾರದಲ್ಲಿ ವ್ಯಾಪಾರ ಮಾಡಿ ಲಾಭಗಳಿಸುವ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳಿಗೆ ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಹಾಕಿದ ಬಂಡವಾಳ ಕೈಗೆ ಬರುವ ನಿರೀಕ್ಷೆ ಇಲ್ಲವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು