ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರರು

Last Updated 26 ಏಪ್ರಿಲ್ 2019, 13:22 IST
ಅಕ್ಷರ ಗಾತ್ರ

ವಿಜಯಪುರ: ವಾತಾವರಣದಲ್ಲಿನ ಬದಲಾವಣೆ, ತೀವ್ರ ನೀರಿನ ಕೊರತೆ ಹಿಪ್ಪುನೇರಳೆ ಬೆಳೆಯಲು ತೊಡಕಾಗಿವೆ. ಹಾಗಾಗಿ ಮಾರುಕಟ್ಟೆಗೆ ಬರುತ್ತಿರುವ ರೇಷ್ಮೆಗೂಡಿನ ಪ್ರಮಾಣ ತೀವ್ರ ಇಳಿಮುಖವಾಗಿದ್ದು ಕೇವಲ 98 ಲಾಟುಗಳಷ್ಟೇ ಗೂಡು ಬರುತ್ತಿರುವ ಪರಿಣಾಮ ಗೂಡಿನ ಕೊರತೆಯಿಂದ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

2018ರ ಏಪ್ರಿಲ್ ತಿಂಗಳ ಆರಂಭದಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ರೇಷ್ಮೆಗೂಡಿನ ಪ್ರಮಾಣ 150 ಲಾಟುಗಳಿಗೂ ಹೆಚ್ಚಿತ್ತು. ಈ ಬಾರಿಯ ಏಪ್ರಿಲ್ ತಿಂಗಳ ಕೊನೆಯಲ್ಲಿ ಬರುತ್ತಿರುವ ಗೂಡಿನ ಪ್ರಮಾಣ ಕೇವಲ 98 ಲಾಟುಗಳಷ್ಟೆ ಎಂದು ರೇಷ್ಮೆಗೂಡು ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

ರೇಷ್ಮೆ ಬೆಳೆಯನ್ನು ನಂಬಿ ಹಲವಾರು ರೈತರು ಬದುಕುತ್ತಿದ್ದಾರೆ. ಬೆಳೆಯನ್ನು ಚಳಿಗಾಲದಲ್ಲಿ ಸುಣ್ಣಕಟ್ಟು ರೋಗ ಬಾಧಿಸುತ್ತದೆ. ಬೇಸಿಗೆಯಲ್ಲಿ ಉಷ್ಣಾಂಶದಿಂದ ಸೊಪ್ಪಿನ ಕೊರತೆ ಉಂಟಾಗುತ್ತದೆ. ಇದರಿಂದಾಗಿ ಕೆಲ ರೈತರು ಬೆಳೆಯನ್ನೇ ಕೈ ಬಿಡುತ್ತಿದ್ದಾರೆ. ಇದರಿಂದ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳ ಮಾಲೀಕರು ಗೂಡಿನ ಅಭಾವದಿಂದ ಕಂಗಾಲಾಗಿದ್ದಾರೆ.

‘ಚಳಿಗಾಲದಲ್ಲಿ ರೇಷ್ಮೆಗೂಡು ಖರೀದಿಯಲ್ಲಿ ಪೈಪೋಟಿ ಇರುತ್ತದೆ. ರೈತರಿಗೆ ಉತ್ತಮ ಬೆಲೆಯೂ ಸಿಗುತ್ತದೆ. ಆದರೆ ಈಗ ಬೇಡಿಕೆಗೆ ತಕ್ಕಂತೆ ಗೂಡು ಸಿಗುತ್ತಿಲ್ಲ. ಬಿಚ್ಚಾಣಿಕೆ ಘಟಕದಲ್ಲಿ ಕಾರ್ಮಿಕರಿಗೆ ಮುಂಗಡ ಹಣ ನೀಡಿ ಕೆಲಸಕ್ಕೆ ನೇಮಿಸಿಕೊಂಡಿದ್ದೇವೆ. ಇದೀಗ ಅವರಿಗೆ ಕೆಲಸ ಇಲ್ಲದಂತಾಗಿದೆ. ಒಂದೊಮ್ಮೆ ಗೂಡಿನ ಕೊರತೆಯಿಂದ ಘಟಕ ಬಂದ್ ಆದರೆ ಅವರಿಗೂ ಕಷ್ಟ’ ಎಂದು ರೀಲರ್ ಬಾಬಾಜಾನ್ ಹೇಳುತ್ತಾರೆ.

‘40 ವರ್ಷಗಳಿಂದ ರೇಷ್ಮೆ ನೂಲು ಬಿಚ್ಚಾಣಿಕೆ ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿದ್ದೇನೆ. ಬಹಳಷ್ಟು ಕಾರ್ಮಿಕರನ್ನೂ ನೇಮಿಸಿಕೊಂಡಿದ್ದೇನೆ. ಚಳಿಗಾಲದಲ್ಲಿ ರೈತರು ಗೂಡು ಬೆಳೆಯಲು ಎಷ್ಟು ಕಷ್ಟ ಪಡುತ್ತಾರೋ, ನಾವೂ ಅಷ್ಟೇ ಕಷ್ಟ ಅನುಭವಿಸಿ ನೂಲು ಬಿಚ್ಚಾಣಿಕೆ ಮಾಡುತ್ತೇವೆ. ಬೇಸಿಗೆಯಲ್ಲಿ ಉದ್ಯಮಕ್ಕೆ ತೊಂದರೆಯಾಗುತ್ತಿದೆ. ಗೂಡು ಖರೀದಿ ಮಾಡಲು ಕೈಯಲ್ಲಿ ಹಣ ಇಲ್ಲದಿದ್ದರೂ ಸಾಲ ಮಾಡಿಯಾದರೂ ಗೂಡು ಖರೀದಿಸಬೇಕು’ ಎನ್ನುತ್ತಾರೆ ರೀಲರ್ ಅಕ್ಮಲ್ ಪಾಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT