ಆನೇಕಲ್: ವಾರದ ಹಿಂದೆ ಕೆಂಪು ದೊಮ್ಮಸಂದ್ರದ ಬಳಿ ನಡೆದಿದ್ದ ಮೆಣಸಿಗನಹಳ್ಳಿಯ ಹೇಮಂತ್ (24) ಎಂಬ ಯುವಕನ ಕೊಲೆ ಪ್ರಕರಣದ ಆರೋಪಿ 19 ವರ್ಷದ ಯುವಕನ ಕಾಲಿಗೆ ಗುಂಡು ಹೊಡೆದು, ಪೊಲೀಸರು ಭಾನುವಾರ ಬಂಧಿಸಿದರು.
ಈ ಕೊಲೆ ಸಂಬಂಧ ಕಾನೂನು ಸಂಘರ್ಷ ಎದುರಿಸುತ್ತಿರುವ ಮೂವರು ಸೇರಿದಂತೆ ಐವರು ಯುವಕರು ಮತ್ತು ವಿದ್ಯಾರ್ಥಿಯೊಬ್ಬನ ತಂದೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಆಘಾತಕಾರಿ ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ.
ಪ್ರೇಯಸಿ ಎದುರು ರೌಡಿ ಎಂದು ಬಿಂಬಿಸಿಕೊಳ್ಳಲು ಪಿಯು ವಿದ್ಯಾರ್ಥಿ ನಾಲ್ವರು ಸ್ನೇಹಿತರ ಜೊತೆಗೂಡಿ ವಾರದ ಹಿಂದೆ ಈ ಕೊಲೆ ಮಾಡಿದ್ದ. ಕೊಲೆ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದರು.
ಆನೇಕಲ್ ಸಮೀಪ ನಿರ್ಮಾಣ ಹಂತದ ಮನೆಯೊಂದರಲ್ಲಿ ಅಡಗಿದ್ದ ಆರೋಪಿಗಳ ಬಂಧನಕ್ಕೆ ಭಾನುವಾರ ತೆರಳಿದ್ದ ಪೊಲೀಸರ ಮೇಲೆ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು. ಆಗ ಆಕಾಶ್ (19) ಎಂಬಾತನ ಕಾಲಿಗೆ ಗುಂಡು ಹೊಡೆದು ಬಂಧಿಸಿದರು ಎಂದು ಗ್ರಾಮಾಂತರ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್.ಪಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು...
‘ನಾನು ಕೊಲೆ ಮಾಡಿದ್ದು ತಲೆಮರೆಸಿಕೊಳ್ಳಲು ತುರ್ತಾಗಿ ಹಣ ಮತ್ತು ಕಾರು ವ್ಯವಸ್ಥೆ ಮಾಡಿಕೊಡುವಂತೆ’ ಪಿಯು ವಿದ್ಯಾರ್ಥಿ ತನ್ನ ತಂದೆಗೆ ಸುಳ್ಳು ಹೇಳಿದ್ದ. ಆತನ ಮಾತು ನಂಬಿ ಆತನ ತಂದೆ ನಾಲ್ಕು ಸಾವಿರ ಹಣ ಮತ್ತು ಕಾರು ವ್ಯವಸ್ಥೆ ಮಾಡಿ ಕೊಟ್ಟಿದ್ದರು. ಕಾರು ಮತ್ತು ಹಣದೊಂದಿಗೆ ತನ್ನ ಇಬ್ಬರು ಸಹಪಾಠಿಗಳನ್ನು ಕರೆದುಕೊಂಡು ಆಕಾಶ್ ಗುರುಕಿರಣ್ ಎಂಬ ಸ್ನೇಹಿತರ ಬಳಿ ಹೋದ. ತಂದೆಗೆ ಸುಳ್ಳು ಹೇಳಿ ಹಣ ಮತ್ತು ಕಾರು ತಂದಿದ್ದು ಅದಕ್ಕಾಗಿ ಯಾರನ್ನಾದರೂ ಕೊಲೆ ಮಾಡಬೇಕು ಎಂದು ಸ್ನೇಹಿತರಲ್ಲಿ ತಿಳಿಸಿದ್ದಾನೆ. ಅದರಂತೆ ಜುಲೈ30 ರಂದು ವಣಕನಹಳ್ಳಿ ರಸ್ತೆಯಲ್ಲಿ ಕೊಲೆಗೆ ಹೊಂಚು ಹಾಕಿ ಕುಳಿತಿದ್ದರು. ಸಾಧ್ಯವಾಗದಿದ್ದಾಗ ಮತ್ತೆ ಮರುದಿನ ಕೊಲೆ ಮಾಡಲು ಕಾಯ್ದು ಕುಳಿತಿದ್ದಾರೆ. ಜುಲೈ31 ರಂದು ಕೆಲಸ ಮುಗಿಸಿಕೊಂಡು ಅತ್ತಿಬೆಲೆಯಿಂದ ಮೆಣಸಿಗನಹಳ್ಳಿಗೆ ಹೋಗುತ್ತಿದ್ದ ಹೇಮಂತ್ ಬೈಕ್‌ಗೆ ಕೆಂಪುದೊಮ್ಮಸಂದ್ರದ ಬಳಿ ಕಾರು ಡಿಕ್ಕಿ ಹೊಡೆಸಿ ಕೆಳಗೆ ಬೀಳಿಸಿದ್ದಾರೆ. ನಂತರ ಐವರೂ ಸೇರಿ ಆತನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಪರಾರಿಯಾಗುವ ಮುನ್ನ ಪ್ರಕರಣದ ಪ್ರಮುಖ ಆರೋಪಿ (ಪಿಯು ವಿದ್ಯಾರ್ಥಿ) ತನ್ನ ಪ್ರೇಯಸಿಗೆ ವಿಡಿಯೊ ಕಾಲ್ ಮಾಡಿ ಕೊಲೆ ಮಾಡಿದ ಸ್ಥಳದ ದೃಶ್ಯಗಳನ್ನು ತೋರಿಸಿ ತಾನೊಬ್ಬ ದೊಡ್ಡ ರೌಡಿ ಎಂದು ಕೊಚ್ಚಿಕೊಂಡಿದ್ದ. ಪ್ರಕರಣ ದಾಖಲು ಮಾಡಿಕೊಂಡಿದ್ದ ಆನೇಕಲ್ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಆರಂಭಿಸಿದ್ದರು. ತನಿಖೆ ವೇಳೆ ದೊರೆತ ಮಾಹಿತಿ ಆಧರಿಸಿ ವಿದ್ಯಾರ್ಥಿಯ ಪ್ರೇಯಸಿಯನ್ನು (ಬಾಲಕಿ) ವಶಕ್ಕೆ ಪಡೆದು ಮೊಬೈಲ್ ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಯಿತು. ಕೊಲೆ ನಂತರ ಆರೋಪಿಗಳು ಕನಕಪುರ ಬಳಿ ಬಟ್ಟೆಗಳನ್ನು ಸುಟ್ಟು ಹಾಕಿದ್ದರು. ಕೊಲೆಗೆ ಬಳಸಿದ್ದ ಚಾಕು ಮತ್ತು ಡ್ರ್ಯಾಗರ್ ಅಲ್ಲೇ ಎಸೆದು ಬಂದಿರುವುದು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಕೊಲೆ ಮಾಡಿರುವುದಾಗಿ ಮಗ ಹೇಳಿದರೂ ಅದನ್ನು ಪೊಲೀಸರಿಗೆ ತಿಳಿಸದೆ ಹಣ ಮತ್ತು ಕಾರು ನೀಡಿ ಸಹಕಾರ ವಿದ್ಯಾರ್ಥಿಯ ತಂದೆಯನ್ನೂ ಬಂಧಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಯೊಬ್ಬ ಈ ಹಿಂದೆ ಕಾಲೇಜಿನಲ್ಲಿ ಪುಂಡಾಡಿಕೆಯಲ್ಲಿ ತೊಡಗಿದ್ದರಿಂದ ವರ್ಗಾವಣೆ ಪತ್ರ ( ಟಿ.ಸಿ) ನೀಡಿ ಹೊರ ಹಾಕಲಾಗಿತ್ತು. ನಂತರ ಬೇರೆ ಕಾಲೇಜಿಗೆ ಸೇರಿ ಗುಂಪು ಕಟ್ಟಿಕೊಂಡು ಗೂಂಡಾ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ಎಎಸ್‌ಪಿ ಎಂ.ಎಲ್.ಪುರುಷೋತ್ತಮ್ ಡಿವೈಎಸ್ಪಿ ಲಕ್ಷ್ಮೀನಾರಾಯಣ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.