ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS: ಭಾರತಕ್ಕೆ ಸರಣಿ ಕೈವಶ

ಕ್ರಿಕೆಟ್: ಗಿಲ್, ಶ್ರೇಯಸ್ ಶತಕ; ಸೂರ್ಯ ವೇಗದ ಅರ್ಧಶತಕ
Published 24 ಸೆಪ್ಟೆಂಬರ್ 2023, 17:35 IST
Last Updated 24 ಸೆಪ್ಟೆಂಬರ್ 2023, 17:35 IST
ಅಕ್ಷರ ಗಾತ್ರ

ಇಂದೋರ್: ಹೋಳ್ಕರ್ ಮೈದಾನದಲ್ಲಿ ಭಾನುವಾರ ಸಂಜೆ ಮಳೆಯೂ ಸುರಿಯಿತು. ರನ್‌ಗಳ ಹೊಳೆಯೂ ಹರಿಯಿತು.  ಅದರಲ್ಲಿ ಆಸ್ಟ್ರೇಲಿಯಾ ತಂಡದ ಜಯದ  ಆಸೆಯೂ ಕೊಚ್ಚಿಹೋಯಿತು.

ಆತಿಥೇಯ ಭಾರತ ತಂಡವು 99 ರನ್‌ಗಳಿಂದ ಜಯಿಸಿತು. ಮೂರು ಏಕದಿನ ಪಂದ್ಯಗಳ ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತು. ಇದಕ್ಕೆ ಶುಭಮನ್ ಗಿಲ್ (104; 97ಎ) ಹಾಗೂ ಶ್ರೇಯಸ್ ಅಯ್ಯರ್ (105; 90ಎ) ಅವರ ಅಬ್ಬರದ ಶತಕಗಳು. ಜೊತೆಗೆ 24 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಸೂರ್ಯಕುಮಾರ್ ಯಾದವ್ ಕೂಡ ಭಾರತ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 399 ರನ್ ಗಳಿಸಲು ಕಾರಣರಾದರು.  ಹಂಗಾಮಿ ನಾಯಕ ಕೆ.ಎಲ್. ರಾಹುಲ್ (52; 38ಎ) ಕೂಡ ಅರ್ಧಶತಕದ ಕಾಣಿಕೆ ನೀಡಿದರು. 

ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಆಸ್ಟ್ರೇಲಿಯಾಕ್ಕೆ  ಆರಂಭದಲ್ಲಿಯೇ ಆಘಾತ ನೀಡಿದರು. ಎರಡನೇ ಓವರ್‌ನಲ್ಲಿ ಎರಡು ವಿಕೆಟ್‌ ಗಳಿಸಿದರು. ಆಗ ಆಸ್ಟ್ರೇಲಿಯಾ ತಂಡವು ಕೇವಲ 9 ರನ್‌ ಗಳಿಸಿತ್ತು.  ತಂಡವು 9 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 52 ರನ್‌ ಗಳಿಸಿದ ಸಂದರ್ಭದಲ್ಲಿ ಮಳೆ ಸುರಿಯಿತು. ಇದರಿಂದಾಗಿ ಕೆಲ ಹೊತ್ತು ಆಟ ಸ್ಥಗಿತವಾಯಿತು.

ಡಕ್ವರ್ಥ್ ಲೂಯಿಸ್ ನಿಯಮದನ್ವಯ ಗುರಿಯನ್ನು ಪರಿಷ್ಕರಿಸಲಾಯಿತು. 33 ಓವರ್‌ಗಳಲ್ಲಿ 317 ರನ್‌ಗಳ ಗುರಿ ನಿಗದಿ ಮಾಡಲಾಯಿತು.  ಆದರೆ ಭಾರತದ ಬೌಲರ್‌ಗಳ ದಾಳಿಯ ಮುಂದೆ ಆಸ್ಟ್ರೇಲಿಯಾ ತಂಡವು 28.2 ಓವರ್‌ಗಳಲ್ಲಿ 217 ರನ್‌ ಗಳಿಸಿ ಆಲೌಟ್ ಆಯಿತು. ಸೀನ್ ಅಬಾಟ್ (54; 36ಎ) ಅವರ ಹೋರಾಟಕ್ಕೆ ಜಯದ ಕಾಣಿಕೆ ಸಿಗಲಿಲ್ಲ.

ದ್ವಿಶತಕದ ಜೊತೆಯಾಟ

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಪಾಟಾದ ಪಿಚ್‌ ಮರ್ಮ ಅರಿಯುವಲ್ಲಿ ಪ್ರವಾಸಿ ಬಳಗವು ವಿಫಲವಾಗಿದ್ದು ಕೆಲಹೊತ್ತಿನಲ್ಲಿಯೇ ಎದ್ದುಕೊಂಡಿತು. 

ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಋತುರಾಜ್ ವಿಕೆಟ್‌ ಗಳಿಸಿದ ಹ್ಯಾಜಲ್‌ವುಡ್ ಸಂಭ್ರಮಿಸಿದರು. ಆದರೆ ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ಶುಭಮನ್ ಅವರ ಜೊತೆಗೂಡಿದ ಶ್ರೇಯಸ್  ಅಯ್ಯರ್ ಆಸ್ಟ್ರೇಲಿಯಾ ತಂಡದ ಸಂತಸವನ್ನು ಕಸಿದುಕೊಂಡರು.

ಇಬ್ಬರೂ ಆಟಗಾರರು ಎರಡನೇ ವಿಕೆಟ್ ಜೊತೆಯಾಟದಲ್ಲಿ 200 ರನ್‌ಗಳನ್ನು ಸೇರಿಸಿದರು. ಗಾಯದಿಂದಾಗಿ ದೀರ್ಘ ಸಮಯ ಆಟದಿಂದ ದೂರವಿದ್ದ ಶ್ರೇಯಸ್ ಕೆಲದಿನಗಳ ಹಿಂದಷ್ಟೇ ಮರಳಿದ್ದರು. ಆದರೆ ಕಳೆದ ಕೆಲವು ಪಂದ್ಯಗಳಲ್ಲಿ ಲಯ ಕಂಡುಕೊಳ್ಳಲು ಪರದಾಡಿದ್ದರು.

ಆದರೆ ಈ ಪಂದ್ಯದಲ್ಲಿ ಅವರ ಆಟ ರಂಗೇರಿತು. ಗಿಲ್‌ ಅವರಿಗಿಂತಲೂ ವೇಗವಾಗಿ ರನ್‌ ಗಳಿಸಿದರು. ಚೆಂದದ ಡ್ರೈವ್, ಸ್ವೀಪ್ ಮತ್ತು ಫ್ಲಿಕ್‌ಗಳ ಮೂಲಕ ಮನಗೆದ್ದರು. 41 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಗಿಲ್ 37 ಎಸೆತಗಳಲ್ಲಿ 50ರ ಗಡಿ ದಾಟಿದರು. ತಾವೆದುರಿಸಿದ 86ನೇ ಎಸೆತದಲ್ಲಿ ಶತಕ ಪೂರೈಸಿದರು. ಶ್ರೇಯಸ್‌ಗೆ ಇದು ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಶತಕ. 31ನೇ ಓವರ್‌ನಲ್ಲಿ ಶ್ರೇಯಸ್ ಅವರು ಸೀನ್ ಅಬಾಟ್ ಬೌಲಿಂಗ್‌ನಲ್ಲಿ ಔಟಾದರು.

ಗಿಲ್ ತಮ್ಮ ಆರನೇ ಶತಕ ಪೂರೈಸಲು ಒಟ್ಟು 91 ಎಸೆತಗಳನ್ನು ಆಡಿದರು. 35ನೇ ಓವರ್‌ನಲ್ಲಿ ಅವರು ಗ್ರೀನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಸೂರ್ಯ ಶರವೇಗ

ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸೂರ್ಯಕುಮಾರ್ ಯಾದವ್ ಎಲ್ಲ ಬೌಲರ್‌ಗಳನ್ನೂ ದಂಡಿಸಿದರು. ಕೇವಲ 24 ಎಸೆತಗಳಲ್ಲಿ ಅರ್ಧತತಕ ದಾಖಲಿಸಿದರು. ಅಜೇಯ 72 ಗಳಿಸಿದರು.  ಆರು ಸಿಕ್ಸರ್ ಹಾಗೂ ಆರು ಬೌಂಡರಿಗಳನ್ನು ಸಿಡಿಸಿದರು.  ರಾಹುಲ್ ಕೂಡ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT