ಭಾನುವಾರ, ಜೂನ್ 26, 2022
28 °C

2020-ಬೆಂಗಳೂರು ಗ್ರಾಮಾಂತರ| ಹೋರಾಟಗಳಲ್ಲೇ ಮುಗಿದ ವರುಷ

-ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ:  ತಾಲ್ಲೂಕಿನ ಮಟ್ಟಿಗೆ 2020 ಪ್ರಮುಖರ ನಿಧನಕ್ಕೆ, ಮುಖ್ಯ ಹೋರಾಟಗಳಿಗೆ ಹಾಗೆಯೇ ಪೊಲೀಸರ ಹೊಸ ಕಾರ್ಯಶೈಲಿಗೆ ನಾಂದಿಯಾದ ವರ್ಷ.

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಗೆ ಎಪಿಎಂಸಿ ಆವರಣದಲ್ಲಿ ಜನವರಿಯಲ್ಲಿ ಆಹಾರ ಇಲಾಖೆ ವತಿಯಿಂದ ತೆರೆಯಲಾಗಿದ್ದ ಖರೀದಿ ಕೇಂದ್ರದಲ್ಲಿನ ಅವ್ಯವಸ್ಥೆ, ರಾಗಿ ಖರೀದಿ ಪ್ರಮಾಣ ಹೆಚ್ಚಿಸಬೇಕು ಮತ್ತಿತರೆ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ರೈತರು ಖರೀದಿ ಕೇಂದ್ರದ ಮುಂದೆ ಹಾಕಲಾಗಿದ್ದ ಬ್ಯಾನರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಖರೀದಿ ಕೇಂದ್ರದಲ್ಲಿನ ಸಮಸ್ಯೆಗಳು ತಾಲ್ಲೂಕಿಗಷ್ಟೇ ಸೀಮಿತವಾಗಿರದೇ ರಾಜ್ಯದ ಸಮಸ್ಯೆಯೂ ಆಗಿತ್ತು. ಇಲ್ಲಿಂದ ಆರಂಭವಾದ ಪ್ರತಿಭಟನೆ ಇಡೀ ರಾಜ್ಯಕ್ಕೆ ವ್ಯಾಪಿಸಿದ್ದರಿಂದ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಎಕರೆಗೆ 15 ಚೀಲ ಹಾಗೆಯೇ ಗರೀಷ್ಠ 75 ಚೀಲ ರಾಗಿ ಖರೀದಿಸಲು ನಿರ್ಧರಿಸಿತು.

ಭಾರತ ಸೇವಾ ದಳದ ವತಿಯಿಂದ ನಗರದ ಬೆಸೆಂಟ್‌ ಪಾರ್ಕ್‌ನಲ್ಲಿ ಭಾರತ ಸೇವಾದಳದಿಂದ ರಾಜ್ಯ ಮಟ್ಟದ ಶಾಲಾ ಮಕ್ಕಳ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 4 ಸಾವಿರ ಜನ ಮಕ್ಕಳು ಭಾಗವಹಿಸಿದ್ದರು. ಇದು ತಾಲ್ಲೂಕಿನ ಮಟ್ಟಿಗೆ 2020ರಲ್ಲಿ ನಡೆದ ದೊಡ್ಡ ಸಮಾರಂಭ.

ತಾಲ್ಲೂಕಿನ ಚಿಗರೇನಹಳ್ಳಿ ಹಾಗೂ ಗುಂಡ್ಲಹಳ್ಳಿ ಸಮೀಪಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ತಂದು ರಾಶಿ ಹಾಕುತ್ತಿರುವುದರ ವಿರುದ್ಧ ಹಾಗೂ ಗುಂಡ್ಲಹಳ್ಳಿ ಸಮೀಪ ಬಂದ್‌ ಮಾಡಲಾಗಿದ್ದ ಟೆರ್ರಾಫಾರ್ಮ್‌ ಕಸ ವಿಲೇವಾರಿ ಘಟಕವನ್ನು ಮತ್ತೆ ಆರಂಭಿಸುವ ಬಗ್ಗೆ ಬಂದ ಆದೇಶ ರದ್ದುಗೊಳಿಸಲು ಆಗ್ರಹಿಸಿ ಪಕ್ಷಾತೀತವಾಗಿ ಎಲೆರಾಂಪುರ ಮಠದ ಡಾ.ಹನುಮಂತನಾಥಸ್ವಾಮೀಜಿ ಅವರ ನೇತೃತ್ವದಲ್ಲಿ ಮಾರ್ಚ್‌ ತಿಂಗಳಲ್ಲಿ ಆರಂಭವಾದ ಧರಣಿ 7 ದಿನಗಳ ಕಾಲ ರಾತ್ರಿ ಹಗಲು ನಿರಂತವಾಗಿ ನಡೆಯಿತು.

ಮಾರ್ಚ್‌ ಮಧ್ಯಭಾಗದಲ್ಲಿ ಆರಂಭವಾದ ಲಾಕ್‌ಡೌನ್‌ ಜೂನ್‌ವರೆಗೂ ತಾಲ್ಲೂಕಿನ ಜನ ಜೀವನದ ಮೇಲೆ ಗಾಢವಾದ ಪರಿಣಾಮ ಬೀರಿತು. ಲಾಕ್‌ಡೌನ್‌ ಸಂದರ್ಭದಲ್ಲಿ ನೇಕಾರಿಕೆ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಲ್ಲದೆ ನೇಕಾರರ ಪ್ರತಿಭಟನೆಗಳು ನಡೆದವು. ಹಲವಾರು ಸಭೆಗಳ ನಂತರ ಸರ್ಕಾರ ನೇಕಾರ ಕಾರ್ಮಿಕರಿಗೆ ₹2000 ಪರಿಹಾರ ಘೋಷಣೆ ಮಾಡಿತು.

ಹುಲಿಕುಂಟೆ ಬಳಿ ಫಲವತ್ತಾದ ಕೃಷಿ ಭೂಮಿಯನ್ನು ವಶಕ್ಕೆ ಪಡೆದು ಮಾಡಲ್‌ ಲಾಜಿಸ್ಟಿಕ್‌ ಪಾರ್ಕ್‌ ಸ್ಥಾಪನೆಗೆ ಮುಂದಾದ ಕ್ರಮ ಖಂಡಿಸಿ ಈ ಭಾಗದ ರೈತರು ಶಾಸಕ ಟಿ.ವೆಂಕಟರಮಣಯ್ಯ ಅವರ ನೇತೃತ್ವದಲ್ಲಿ ಬೃಹತ್‌ ಸಮಾವೇಶ ನಡೆಸುವ ಮೂಲಕ ಭೂ ಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು.

ಜೂನ್‌ 27 ರಂದು ಚೈತನ್ಯ ನಗರದಲ್ಲಿ ಪ್ರಥಮವಾಗಿ ಇಬ್ಬರಿಗೆ ಕೋವಿಡ್‌ ಪ್ರಕರಣ ಪತ್ತೆಯಾಗುವ ಮೂಲಕ ತಾಲ್ಲೂಕಿನಲ್ಲಿ ಕೋವಿಡ್‌ ಅಧಿಕೃತವಾಗಿ ಆರಂಭವಾಯಿತು.

ಪ್ರಮುಖ ಅಪರಾಧಗಳು: ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ತಾಲ್ಲೂಕಿನಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದವು. ಆದರೆ, ಲಾಕ್‌ಡೌನ್‌ ತೆರವಾಗುತ್ತಿದ್ದಂತೆ ಅಪರಾಧಗಳ ಸಂಖ್ಯೆ ಮತ್ತೆ ಯಥಾಸ್ಥಿತಿಗೆ ಬಂದು ತಲುಪಿದೆ.

ದೊಡ್ಡಬಳ್ಳಾಪುರ ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಹೊಸದೊಂದು ಕಾರ್ಯವಿಧಾನಕ್ಕೆ ನಾಂದಿಯಾದ ವರ್ಷ 2020. ಕಾರಣ ಯಾವುದೇ ಅಪರಾಧಗಳಲ್ಲಿ ಭಾಗಿಯಾದವರನ್ನು ಸಾಹಸ ಮಾಡಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸುತ್ತಿದ್ದರು. ಆದರೆ, 2020ರಲ್ಲಿ ಕಳವು, ಕೊಲೆ,ದರೋಡೆ ಸೇರಿದಂತೆ ಅಪರಾಧ ಪ್ರಕರಗಳಲ್ಲಿ ಭಾಗಿಯಾದವರನ್ನು ಬಂಧಿಸುವ ಸಂದರ್ಭದಲ್ಲಿ ಕಿರಿಕಿರಿ ಮಾಡುವ ಆರೋಪಿಗಳ ಮೇಲೆ ಫೈರಿಂಗ್‌ ಮಾಡುವ ಮೂಲಕ ಬಂಧಿಸಲಾಗುತ್ತಿದೆ. ಒಂದು ವರ್ಷದಲ್ಲಿ ಐದು ಪ್ರಕರಣಗಳಲ್ಲಿ ಫೈರಿಂಗ್ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸಲಾಗಿದೆ.

ಭೂ ಹಗರಣ ಬಯಲಿಗೆ

ತಾಲ್ಲೂಕಿನಲ್ಲಿ ಬಹುದಿನಗಳಿಂದ ಜನರ ಮಾತಿನಲ್ಲೇಷ್ಟೇ ಉಳಿದಿದ್ದ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು