ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿ ಹತ್ಯೆ: ಆರೋಪಿ ಆತ್ಮಹತ್ಯೆಗೆ ಯತ್ನ

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆ l ಪ್ರೇಮ ವಿಚಾರ ಶಂಕೆ
Last Updated 2 ಜನವರಿ 2023, 21:36 IST
ಅಕ್ಷರ ಗಾತ್ರ

ಯಲಹಂಕ: ರಾಜಾನುಕುಂಟೆ ದಿಬ್ಬೂರು ಬಳಿಯ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಲಯಸ್ಮಿತಾ (19) ಅವರನ್ನು ಚಾಕುವಿನಿಂದ ಇರಿದು ಸೋಮ ವಾರ ಹತ್ಯೆ ಮಾಡಲಾಗಿದೆ. ಕೃತ್ಯ ಎಸಗಿರುವ ಆರೋಪಿ ಪವನ್ ಕಲ್ಯಾಣ್ (23) ಸಹ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

‘ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಗುಟ್ಟಹಳ್ಳಿಯ ಲಯಸ್ಮಿತಾ, ‍ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದರು. ಇವರ ತಂದೆ ನಾಗರಾಜ್ 2 ವರ್ಷ ಗಳ ಹಿಂದೆಯಷ್ಟೇ ಅಪಘಾತದಲ್ಲಿ ತೀರಿ ಕೊಂಡಿದ್ದರು. ತಾಯಿ ರಾಜೇಶ್ವರಿ ಹಾಗೂ ಇಬ್ಬರು ಸಹೋದರಿಯರು ಇದ್ದರು’ ಎಂದು ಪೊಲೀಸರು ಹೇಳಿದರು.

‘ಕೋಲಾರದವನೇ ಆಗಿದ್ದ ಆರೋಪಿ ಪವನ್‌ ಕಲ್ಯಾಣ್, ಲಯಸ್ಮಿತಾ ಅವರ ಸಂಬಂಧಿ. ನಗರದ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ. ಆತ್ಮಹತ್ಯೆಗೆ ಯತ್ನಿಸಿರುವ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದರು.

‘ಲಯಸ್ಮಿತಾ ಹಾಗೂ ಪವನ್‌ ಸಂಬಂಧಿಕರು ಹಾಗೂ ಒಂದೇ ಊರಿನವರಾಗಿದ್ದರಿಂದ ಹಲವು ವರ್ಷಗಳಿಂದ ಪರಿಚಯವಿತ್ತು. ಬೇರೆ ಬೇರೆ ಕಡೆ ಓದುತ್ತಿದ್ದರೂ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಈ ಬಗ್ಗೆ ಸ್ನೇಹಿತರು ಮಾಹಿತಿ ನೀಡಿದ್ದಾರೆ’ ಎಂದು ಹೇಳಿದರು.

ಚಾಕು ಸಮೇತ ಬಂದಿದ್ದ ಆರೋಪಿ: ‘ಶನಿವಾರ ಕಾಲೇಜಿಗೆ ಗೈರುಹಾಜರಾಗಿದ್ದ ಪವನ್, ಸೋಮವಾರವೂ ಹೋಗಿ ರಲಿಲ್ಲ. ಮಧ್ಯಾಹ್ನ 12.30ರ ಸುಮಾ ರಿಗೆ ಚಾಕು ಸಮೇತ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಆವರಣಕ್ಕೆ ಬಂದಿದ್ದ. ಲಯಸ್ಮಿತಾ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆವರಣದಲ್ಲಿ ಕುಳಿತಿದ್ದ ಇಬ್ಬರೂ ಪರಸ್ಪರ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಲಯಸ್ಮಿತಾ ಮೇಲೆ ಹಲ್ಲೆ ಮಾಡಿದ್ದ ಆರೋಪಿ, ಚಾಕು ವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದಿದ್ದ. ಲಯಸ್ಮಿತಾ ಕುಸಿದು ಬೀಳು ತ್ತಿದ್ದಂತೆ ತಾನೂ ಚಾಕುವಿನಿಂದ ಇರಿದುಕೊಂಡಿದ್ದ. ಇಬ್ಬರನ್ನೂ ಗಮನಿಸಿದ್ದ ಸಹಪಾಠಿಗಳು ಮತ್ತು ಕಾಲೇಜಿನ ಭದ್ರತಾ ಸಿಬ್ಬಂದಿ, ರಕ್ಷಣೆಗೆ ಹೋಗಿದ್ದರು. ಇಬ್ಬರನ್ನೂ ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಮಾರ್ಗ ಮಧ್ಯೆಯೇ ಲಯಸ್ಮಿತಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದೂ ಮೂಲಗಳು ಹೇಳಿವೆ.

‘ಪ್ರೇಮದ ವಿಚಾರವಾಗಿ ಆರೋಪಿ ಕೃತ್ಯ ಎಸಗಿರುವ ಶಂಕೆ ಇದೆ. ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದು ವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಡ್ರಗ್ಸ್ ಮಾರಾಟ, ಗಲಾಟೆ ನಿರಂತರ’

‘ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ 13 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿ.ವಿ ಆವರಣ ಹಾಗೂ ಸುತ್ತಮುತ್ತ ಕೆಲವರು ಡ್ರಗ್ಸ್ ಮಾರುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಜೊತೆಗೆ ಪದೇ ಪದೇ ಗಲಾಟೆಗಳು ನಡೆಯುತ್ತಿದ್ದು, ಆಡಳಿತ ಮಂಡಳಿ ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ‘ವರ್ಷದ ಹಿಂದೆಯಷ್ಟೇ ವಿ.ವಿಯಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಗಲಾಟೆ ಆಗಿತ್ತು. ಇದೀಗ ಬೇರೆ ಕಾಲೇಜಿನ ವಿದ್ಯಾರ್ಥಿ ಚಾಕು ಹಿಡಿದುಕೊಂಡು ಬಂದು
ವಿದ್ಯಾರ್ಥಿನಿಯನ್ನು ಕೊಲೆ ಮಾಡಿರುವುದು ಭದ್ರತೆ ವೈಫಲ್ಯ’ ಎಂದು ಆರೋಪಿಸಿದರು.

‘ತಿಂಗಳ ಹಿಂದೆ ಕಾಲೇಜಿಗೆ ಸೇರಿಸಿದ್ದೆ’

‘ಓದಿನಲ್ಲಿ ಜಾಣೆಯಾಗಿದ್ದ ಮಗಳನ್ನು ತಿಂಗಳ ಹಿಂದೆಯಷ್ಟೇ ಬಿ.ಟೆಕ್ ಓದಲು ಕಾಲೇಜಿಗೆ ಸೇರಿಸಿದ್ದೆ. ಮಗಳಿಗೆ ರಕ್ಷಣೆ ನೀಡಬೇಕಾದ ಜವಾಬ್ದಾರಿ ಪ್ರಾಂಶುಪಾಲ ಹಾಗೂ ಭದ್ರತಾ ಸಿಬ್ಬಂದಿಗೆ ಇರಲಿಲ್ಲವೇ? ಅವರ ನಿರ್ಲಕ್ಷ್ಯದಿಂದ ಮಗಳನ್ನು ಕಳೆದುಕೊಂಡೆ’ ಎಂದು ತಾಯಿ ರಾಜೇಶ್ವರಿ ಕಣ್ಣೀರಿಟ್ಟರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಗಳನ್ನು ಹಾಸ್ಟೆಲ್‌ನಲ್ಲಿ ಇರಿಸಿದ್ದೆ. ಬೆಳಿಗ್ಗೆ ಕಾಲೇಜಿಗೆ ಹೋಗುವಾಗ ಹಾಗೂ ಕಾಲೇಜಿನಿಂದ ಹಾಸ್ಟೆಲ್‌ಗೆ ಬಂದಾಗ ತಪ್ಪದೇ ಕರೆ ಮಾಡುತ್ತಿದ್ದಳು. ಸೋಮವಾರ ಬೆಳಿಗ್ಗೆ ಸಹ ಕರೆ ಮಾಡಿ ಕಾಲೇಜಿಗೆ ಹೋಗಿದ್ದಳು’ ಎಂದರು.

‘ಚಾಕುವಿನಿಂದ ಇರಿದಿರುವ ಯುವಕ ನಮ್ಮ ದೂರದ ಸಂಬಂಧಿ. ಅವರ ಕುಟುಂಬದವರ ಜೊತೆ ಯಾವುದೇ ಜಗಳವೂ ಇರಲಿಲ್ಲ. ಆತ ಏಕೆ ನನ್ನ ಮಗಳನ್ನು ಕೊಂದನೋ ಗೊತ್ತಿಲ್ಲ. ನಮಗೆ ನ್ಯಾಯ ಬೇಕು’ ಎಂದು ಆಗ್ರಹಿಸಿದರು.

‘ಆರೋಪಿ ಯುವಕ ನನ್ನ ಮಗಳ ಫೋಟೊವನ್ನು ವಾಟ್ಸ್‌ಆ್ಯಪ್‌ ಡಿ.ಪಿ ಆಗಿ ಹಾಕಿಕೊಂಡಿದ್ದ. ಈ ಬಗ್ಗೆ ಪರಿಚಯಸ್ಥರೊಬ್ಬರು ತಿಳಿಸಿದ್ದರು. ಮಗಳನ್ನು ಈ ಬಗ್ಗೆ ವಿಚಾರಿಸಿದಾಗ, ಆತನ ನಂಬರ್ ಬ್ಲಾಕ್ ಮಾಡಿದ್ದಾಗಿ ಹೇಳಿದ್ದಳು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT