ಶನಿವಾರ, ನವೆಂಬರ್ 26, 2022
21 °C

ಬಡವರಿಗೆ ಯಶಸ್ವಿನಿ ವರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ‘ಮತ್ತೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪ್ರಾರಂಭಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಹಸ್ತ ನೀಡಿದೆ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದರು.

ನಗರದ ಟೌನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ 2022-23ನೇ ಸಾಲಿನ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಸದಸ್ಯರ ನೋಂದಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿರುವ ಸಹಕಾರ ಕ್ಷೇತ್ರದ ಎಲ್ಲಾ ಬ್ಯಾಂಕ್‌ಗಳು, ಸಂಘಗಳ ಷೇರುದಾರರು ಈ ಯೋಜನೆಗೆ ಅರ್ಹರು. ಇದರಿಂದ ಷೇರುದಾರರ ಕುಟುಂಬಕ್ಕೆ ಪ್ರತಿವರ್ಷ ₹ 5 ಲಕ್ಷದವರೆಗೆ ಆರೋಗ್ಯ ವಿಮೆ ದೊರೆಯಲಿದೆ ಎಂದರು.

ಆರೋಗ್ಯ ಕರ್ನಾಟಕ ಅಥವಾ ಆಯುಷ್ಮಾನ್ ಭಾರತ್ ಯೋಜನೆಯಡಿ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್‌ದಾರರು ಅರ್ಹರಾಗಿದ್ದಾರೆ. ಆದರೆ, ಈ ಯೋಜನೆಗೆ ಯಾವುದೇ ವ್ಯಕ್ತಿ ಸಹಕಾರ ಸಂಘಗಳಲ್ಲಿ ಸದಸ್ಯನಾಗಿದ್ದರೆ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.

ಬ್ಯಾಂಕ್ ಅಧ್ಯಕ್ಷ ಬಾಲಚಂದ್ರನ್ ಮಾತನಾಡಿ, ಯಶಸ್ವಿನಿ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು ಪ್ರತಿಯೊಬ್ಬ ಷೇರುದಾರರು ಇದರ ಉಪಯೋಗ ಪಡೆಯಬೇಕು ಎಂದು ಕೋರಿದರು.

ಈ ಯೋಜನೆಯಡಿ 1,650ಕ್ಕೂ ಹೆಚ್ಚು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು. ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಲಭಿಸಲಿದೆ. ಇನ್ನೂ ಹಲವು ಆಸ್ಪತ್ರೆಗಳು ಯೋಜನೆಯಡಿ ನೋಂದಣಿ  ಮಾಡಿಕೊಳ್ಳುತ್ತಿವೆ. ಜನವರಿಯಲ್ಲಿ ಆಸ್ಪತ್ರೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದರು.

ನಗರ ಪ್ರದೇಶದ ಷೇರುದಾರರು ₹ 1,000 ಮತ್ತು ಗ್ರಾಮಾಂತರ ಪ್ರದೇಶದವರು ₹ 500 ನೀಡಿ ಸದಸ್ಯರಾದರೆ ಅವರ ಕುಟುಂಬದ ನಾಲ್ವರಿಗೆ ಯೋಜನೆಯಡಿ ಸೌಲಭ್ಯ ದೊರೆಯಲಿದೆ. ಅದಕ್ಕಿಂತ ಹೆಚ್ಚು ಸದಸ್ಯರಿದ್ದರೆ ಪ್ರತಿಯೊಬ್ಬರಿಗೂ ₹ 200 ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸದಸ್ಯರು ಜಾತಿ ಪ್ರಮಾಣ ಪತ್ರ ನೀಡಿದರೆ ಆ ಹಣವನ್ನು ಸರ್ಕಾರವೇ ಭರಿಸುತ್ತದೆ. ಡಿ. 31ರೊಳಗೆ ಹೆಸರು ನೋಂದಾಯಿಸಿದರೆ ಜ. 1ರಿಂದ ಯೋಜನೆ ಪ್ರಾರಂಭವಾಗಿ ಒಂದು ವರ್ಷದವರೆಗೆ ಮುಂದುವರಿಯುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಉಪಾಧ್ಯಕ್ಷೆ ಜೀನತ್ ಉನ್ನೀಸಾ, ನಿರ್ದೇಶಕರಾದ ಅಫ್ಸರ್, ಜಿ. ನಾಗರಾಜ್, ಕಿರಣ್ ಕುಮಾರ್‌, ಎಚ್.ಜೆ. ಮೋಹನ್ ಕುಮಾರ್‌, ಎಚ್.ಜೆ. ನಾಗರಾಜ್, ಟಿ.ಎನ್. ರಾಜಶೇಖರ್‌, ಎಂ. ಅಮರೇಶ್, ಎಂ. ಚಂದ್ರಶೇಖರ್‌, ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಂ. ಆಂಜಿನಪ್ಪ, ಮುಖಂಡರಾದ ಸಿ. ಜಯರಾಜ್, ಅರುಣ್ ಕುಮಾರ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು