ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆಮೊಟ್ಟೆ ಬೀಜೋತ್ಪಾದನಾ ಕೇಂದ್ರಕ್ಕೆ ಸ್ವಿಟ್ಜರ್ಲೆಂಡ್‌ನ ತಂಡ ಭೇಟಿ

Last Updated 27 ಜನವರಿ 2020, 13:41 IST
ಅಕ್ಷರ ಗಾತ್ರ

ವಿಜಯಪುರ: ರೇಷ್ಮೆ ಮೊಟ್ಟೆ ಬೀಜೋತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ್ದ ಸ್ವಿಟ್ಜರ್‌ಲೆಂಡ್‌ ತಂಡದವರು ದ್ವಿತಳಿ ರೇಷ್ಮೆಗೂಡು ಬೀಜೋತ್ಪಾದನೆಯ ಕುರಿತು ಇಲ್ಲಿನ ವಿಜ್ಞಾನಿ ಡಾ.ಮುನಿಶಾಮಿರೆಡ್ಡಿ ಅವರಿಂದ ಮಾಹಿತಿ ಪಡೆದುಕೊಂಡರು.

ಇಲ್ಲಿನ ದೇವನಹಳ್ಳಿ ರಸ್ತೆಯಲ್ಲಿರುವ ರೇಷ್ಮೆ ಬೀಜೋತ್ಪಾದನಾ ಕೇಂದ್ರದಲ್ಲಿ ಮೊಟ್ಟೆ ಉತ್ಪಾದನಾ ವಿಧಾನ, ಗೂಡು ಖರೀದಿ, ಮೊಟ್ಟೆಯಿಂದ ಹುಳು ಹೊರಬರುವ ಪ್ರಮಾಣ, ಸಂರಕ್ಷಣೆ ಕುರಿತು ಮಾಹಿತಿ ಪಡೆದರು. ಹಿಪ್ಪುನೇರಳೆ ಸೊಪ್ಪಿನ ಬೆಳವಣಿಗೆ ಸೇರಿದಂತೆ ಅನೇಕ ಮಾಹಿತಿಗಳನ್ನು ಪಡೆದುಕೊಂಡರು.

ಡಾ.ಮುನಿಶಾಮಿರೆಡ್ಡಿ ಮಾತನಾಡಿ, ‘ಗ್ರಾಮೀಣ ಭಾಗದ ರೈತರಿಗೆ ರೇಷ್ಮೆ ಪ್ರಭಾವಿ ಹಾಗೂ ಲಾಭದಾಯಕ ಕೃಷಿಯಾಗಿದ್ದು, ರೇಷ್ಮೆ ಕೃಷಿಯಲ್ಲಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಹೆಚ್ಚಿನ ಉತ್ಪಾದನೆ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುವತ್ತ ರೈತರು ಗಮನಹರಿಸಿದ್ದಾರೆ’ ಎಂದರು.

‘ರೈತರಿಂದ ಉತ್ತಮ ಗುಣಮಟ್ಟದ ಗೂಡನ್ನು ನೇರವಾಗಿ ಖರೀದಿ ಮಾಡುತ್ತೇವೆ. ದೇಸಿ ತಳಿ ಗೂಡಿಗಿಂತ ಹೆಚ್ಚಿನ ಬೆಲೆಗೆ ಗೂಡು ಮಾರಾಟವಾಗುತ್ತದೆ. ನಾವು ಉತ್ಪಾದಿಸುವ ಮೊಟ್ಟೆ ಪುನಃ ರೈತರಿಗೆ ಕೊಡಬೇಕಾಗಿರುವುದರಿಂದ ಉತ್ತಮ ಗುಣಮಟ್ಟದಲ್ಲೆ ಉತ್ಪಾದನೆ ಮಾಡಬೇಕು. ಮೊಟ್ಟೆ ಕೊಟ್ಟ ನಂತರ ನಾವೂ ಕೂಡಾ ಆಗಾಗ ಭೇಟಿ ನೀಡಿ ಹುಳು ಹೇಗಿದೆ ಎನ್ನುವುದನ್ನು ಪರಿಶೀಲಿಸುತ್ತೇವೆ. ದೇಸಿ ತಳಿ ಗೂಡಿಗಿಂತ ದ್ವಿತಳಿ ರೇಷ್ಮೆಗೂಡು ಬೆಳೆದರೆ ವಿದೇಶಿ ಮಾರುಕಟ್ಟೆ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎನ್ನುವ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ಒದಗಿಸುತ್ತೇವೆ’ ಎಂದರು.

‘ಆಧುನಿಕ ತಾಂತ್ರಿಕತೆ ಬಳಕೆಯಿಂದ ರೇಷ್ಮೆ ಹುಳುಗಳಿಗೆ ರೋಗಗಳ ಹಾವಳಿ ಇರುವುದಿಲ್ಲ. ರೈತರು ವೈಜ್ಞಾನಿಕ ಪದ್ಧತಿಗಳಿಂದ ಕಡಿಮೆ ಖರ್ಚಿನಿಂದ ಹೆಚ್ಚು ಲಾಭದಾಯಕವಾಗಿದೆ. ರೈತರು ಕೃಷಿಗೆ ಪೂರಕವಾದ ರೇಷ್ಮೆ ಕೃಷಿಗೆ ಸುಧಾರಿತ ಅಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು’ ಎನ್ನುವ ಕುರಿತು ಮಾಹಿತಿ ಒದಗಿಸುತ್ತಿದ್ದೇವೆ.

‘ಉತ್ತಮ ಬೆಳೆ ಬೆಳೆಯಲು 16 ಪೋಷಕಾಂಶಗಳು ಮುಖ್ಯ. ಶೇ 30 ಸಾವಯವ ಗೊಬ್ಬರ ಹಾಗೂ ಶೇ 70ರಷ್ಟು ರಾಸಾಯನಿಕ ಗೊಬ್ಬರ ನೀಡಿದರೆ ತೊಂದರೆಯಿಲ್ಲ. ಇದರಿಂದ ಮಣ್ಣಿನ ಭೌತಿಕ ಗುಣಧರ್ಮ ಕಾಪಾಡಲು ಸಾಧ್ಯ. ಈ ಭಾಗದಲ್ಲಿನ ರೈತರು ನೀರಾವರಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇರುವ ನೀರನ್ನೆ ಬಳಕೆ ಮಾಡಿಕೊಂಡು ಹನಿ ನೀರಾವರಿ ಪದ್ಧತಿಯಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆಯುತ್ತಿದ್ದಾರೆ’ ಎಂದರು.

‘ರೇಷ್ಮೆ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡರೆ ಕೆಲಸಗಾರರ ಸಂಖ್ಯೆ ಹಾಗೂ ಕೂಲಿ ಖರ್ಚಿನಲ್ಲಿ ಶೇ 45.5ರಷ್ಟು ಉಳಿತಾಯವಾಗುತ್ತದೆ. ಹುಳುವಿನ ತೂಕ ಮತ್ತು ಗೂಡಿನ ತೂಕದಲ್ಲಿ ಹೆಚ್ಚಳವಾಗುತ್ತದೆ. ಹುಳು ಹಾಸಿಗೆಯ ನೈರ್ಮಲ್ಯ ಕಾಪಾಡುವಲ್ಲಿ ಪರಿಣಾಮಕಾರಿ ಕೆಲಸವಾಗಿದೆ’ ಎಂದು ವಿವರಿಸಿದರು. ತಂಡದ ನಾಯಕ ಫ್ರಿಟ್ಜ್ ಷ್ನೇಯ್ಡರ್ ಸ್ಕೆಂಡರ್‌ಪ್ರೇಡ್‌ಬೆಲ್, ಮಾರ್ಟಿನ್, ಹೆಡೆಲ್ ಮುಲ್ಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT