ಬುಧವಾರ, ನವೆಂಬರ್ 20, 2019
20 °C

ಶಿಕ್ಷಣದ ಜತೆ ನಾಟಕ ಕಲಿಸುವಿಕೆ ಸ್ವಾಗತಾರ್ಹ

Published:
Updated:
Prajavani

ಚನ್ನಪಟ್ಟಣ: ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರ್ತಿಸಿ ಶಿಕ್ಷಣದ ಜೊತೆಗೆ ನಾಟಕ ಕಲೆ ಕಲಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹೊಡಿಕೆ ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಗ್ರಾಮಸ್ಥರ ನೆರವಿನಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಕಲಿತಿದ್ದು, ಅದರ ಪೂರ್ವಭಾವಿ ಪ್ರದರ್ಶನವನ್ನು ವೀಕ್ಷಿಸಿ, ನಂತರ ನಾಟಕದ ಆಹ್ವಾನಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಶಾಲಾ ಮಕ್ಕಳು ಪೌರಾಣಿಕ ನಾಟಕ ಕಲಿತು ಅಭಿನಯಿಸುತ್ತಿರುವುದು ಬಹುಶಃ ರಾಜ್ಯದಲ್ಲಿಯೇ ಮೊಟ್ಟ ಮೊದಲ ಪ್ರಯೋಗ. ಪೌರಾಣಿಕ ನಾಟಕಗಳ ಸಂಭಾಷಣೆಯನ್ನು ಹೇಳಲು ಹಿರಿಯರೆ ತಡವರಿಸುವಾಗ ಮಕ್ಕಲೂ ನೀರು ಕುಡಿದಂತೆ ಸುಲಲಿತವಾಗಿ ನಾಟಕದ ಸಂಭಾಷಣೆಯನ್ನು ಹೇಳುವುದನ್ನು ನೋಡಿದರೆ ನಿಜ್ಕಕೂ ಸಂತೋಷವಾಗುತ್ತದೆ ಎಂದರು.

ಮನರಂಜನೆಯ ಜೊತೆಗೆ ಪ್ರತಿಯೊಬ್ಬ ಮನುಷ್ಯನಲ್ಲಿರಬೇಕಾದ ಸತ್ಯ, ಧರ್ಮ, ಪರೋಪಕಾರ, ದಾನ ಹಲವಾರು ರೀತಿಯ ಸಂಸ್ಕಾರವನ್ನು ನೀಡುವಂತಹ ಪಾತ್ರಗಳನ್ನು ಅಭಿನಯಿಸುವುದು ಸುಲಭವಲ್ಲ. ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಇಂತಹ ಸಾಹಸಕ್ಕೆ ಕೈಹಾಕಿರುವುದು ನಿಜಕ್ಕೂ ಪ್ರಶಂಸನಾರ್ಹ ಎಂದರು.

30ಕ್ಕೂ ಹೆಚ್ಚು ಮಕ್ಕಳಿಗೆ ವಿವಿಧ ಪಾತ್ರಗಳನ್ನು ಸುಮಾರು 4 ತಿಂಗಳು ಅಭ್ಯಾಸ ಮಾಡಿಸಿ ನಾಟಕವನ್ನು ಪ್ರದರ್ಶಿಸಲು ಸಜ್ಜಾಗಿರುವುದು ಹೆಮ್ಮೆಯ ವಿಚಾರ. ವಿದ್ಯಾರ್ಥಿಗಳ ಕುರುಕ್ಷೇತ್ರ ನಾಟಕ ರಾಜ್ಯದಲ್ಲಿ ಹೆಸರು ಪಡೆಯಲಿ ಎಂದು ಶುಭ ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವಸಂತಕುಮಾರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀಕಂಠಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಸಾರಥಿ, ಮುಖಂಡರಾದ ಸಿದ್ದೇಗೌಡ, ನಂಜೇಗೌಡ, ಕೆಂಪರಾಜು, ನಯನ, ಚನ್ನಪ್ಪ, ವೆಂಕಟೇಶ್, ನಾಗೇಶ್, ಯೋಗಾನಂದ್, ರಂಗಭೂಮಿ ನಿರ್ದೇಶಕ ಎಂ.ಎನ್.ಕೃಷ್ಣಪ್ಪ, ತಬಲವಾದಕ ವೇಣುಗೋಪಾಲ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)