ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆ ಭರಾಟೆ: ಎತ್ತಿನಗಾಡಿ ಕಣ್ಮರೆ

Last Updated 3 ಆಗಸ್ಟ್ 2021, 5:03 IST
ಅಕ್ಷರ ಗಾತ್ರ

ವಿಜಯಪುರ:ಒಂದು ಕಾಲದಲ್ಲಿ ರೈತರಿಗೆ ವರವಾಗಿದ್ದ ಎತ್ತಿನಗಾಡಿಗಳು ಈಗ ಮೂಲೆ ಸೇರಿದ್ದು, ಪ್ರದರ್ಶನಕ್ಕೆ ಇಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಗ್ರಾಮೀಣ ರೈತರು ತಮ್ಮ ದೈನಂದಿನ ಜೀವನ ಹಾಗೂ ಕೃಷಿ ಚಟುವಟಿಕೆಗಳಿಗೆ ಇವುಗಳನ್ನೇ ಆಶ್ರಯಿಸಿದ್ದರು.

ದೈನಂದಿನ ಕೃಷಿ ಕಾರ್ಯಕ್ಕೆ ಬೇಸಾಯದ ಸಾಮಗ್ರಿ ಸಾಗಿಸುವುದರಿಂದ ಹಿಡಿದು, ಧಾನ್ಯಗಳನ್ನು ಮನೆಗೆ ತಲುಪಿಸಲು, ಗೊಬ್ಬರ ಸಾಗಿಸಲು, ಜಾನುವಾರುಗಳಿಗೆ ಮೇವು ತರಲು ಹೀಗೆ ಪ್ರತಿಯೊಂದಕ್ಕೂ ಎತ್ತಿನಗಾಡಿ ಅನಿವಾರ್ಯವಾಗಿತ್ತು. ಹಬ್ಬ, ಜಾತ್ರೆ, ಶುಭ ಸಮಾರಂಭ, ಮೆರವಣಿಗೆಯಂತಹ ಕಾರ್ಯಕ್ರಮಗಳಿಗೆ ಹೋಗಲು ಎತ್ತಿನಗಾಡಿಗಳಿಗೆ ಅಲಂಕಾರ ಮಾಡಿಕೊಂಡು ಹೋಗುತ್ತಿದ್ದ ಸಂಭ್ರಮದ ಕ್ಷಣಗಳು ನೆನಪಾಗುತ್ತವೆ.

ಬಡಗಿ ವೃತ್ತಿಯವರು ಎತ್ತಿನಗಾಡಿಗೆ ಅವಶ್ಯವಾಗಿದ್ದ ಚಕ್ರಗಳ ತಯಾರಿಕೆಯಲ್ಲಿ ಕೌಶಲ ಮೆರೆಯುತ್ತಿದ್ದರು. ಕುಲುಮೆಯಲ್ಲಿ ಬಹಳಷ್ಟು ಮಂದಿ ಎತ್ತಿನಗಾಡಿಗಳಿಗೆ ಅಗತ್ಯವಾಗಿ ಬೇಕಾಗಿದ್ದ ಪಟ್ಟ, ಕಡಾಣಿ, ಕುಂಭ, ಅಣಸು, ಅಕ್ಸಲ್, ಕೀಲುಗಳು, ಎತ್ತುಗಳ ಕಾಲುಗಳಿಗೆ ಹೊಡೆಯಲು ಲಾಳ ತಯಾರಿಕೆಯಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದರು.

ಈಗ ಬಳಕೆ ಕಡಿಮೆಯಾಗುತ್ತಿದಂತೆ ಗಾಡಿಯನ್ನು ನಂಬಿಕೊಂಡು ಕಾಯಕ ಮಾಡುವವರಿಗೂ ಕೆಲಸವಿಲ್ಲದಂತಾಗಿದೆ. ಅವರು ಬೇರೆ ಕೆಲಸದ ಕಡೆ ಮುಖ ಮಾಡುವುದು ಅನಿವಾರ್ಯವಾಗಿದೆ.

ಬೆಳಗಿನ ಸಮಯ ಹಳ್ಳಿಗಳಲ್ಲಿ ರೈತರು ತಂಡೋಪತಂಡವಾಗಿ ಎತ್ತಿನಗಾಡಿಯಲ್ಲಿ ಊಟದ ಗಂಟು ಸಜ್ಜುಗೊಳಿಸಿಕೊಂಡು ಪ್ರಯಾಣ ಮಾಡಿ ಜಾತ್ರೆ, ಉತ್ಸವ ಮುಗಿಸಿ ಸಂಭ್ರಮದಿಂದ ಸಂಜೆ ವೇಳೆಗೆ ಮನೆಗೆ ಬರುತ್ತಿದ್ದರು. ಈ ವೇಳೆ ಜನಪದ ಕಲಾವಿದರನ್ನು ಕೂರಿಸಿಕೊಂಡು ಹಾಡು ಹಾಡುತ್ತಾ ಸಾಗುತ್ತಿದ್ದರು. ಇಂದಿಗೂ ಕೆಲವೆಡೆ ಎತ್ತುಗಳೇ ರೈತನ ಮಿತ್ರ. ಆದರೆ, ಎತ್ತಿನಗಾಡಿಗಳು ಮಾತ್ರ ಕಾಣದಂತಾಗಿವೆ. ಈಗ ಕೇವಲ ಅವುಗಳ ಅವಶೇಷ ನೋಡಿ ಸಂಭ್ರಮಪಡುವಂತಾಗಿದೆ.

ಇವು ಮೂಲೆ ಸೇರುತ್ತಿದ್ದಂತೆ ಇದನ್ನು ಅವಲಂಬಿಸಿದ ಕೆಲ ಉದ್ಯೋಗಗಳೂ ನಶಿಸುತ್ತಿವೆ. ಆಧುನಿಕ ಭರಾಟೆಯಲ್ಲಿ ಅವಸರದ ಬದುಕಿನ ನಡುವೆ ಟ್ರ್ಯಾಕ್ಟರ್‌, ಗೂಡ್ಸ್‌ ಆಟೊಗಳಿಗೆ ಪೈಪೋಟಿ ನೀಡಲಾಗದೆ ಎತ್ತಿನಗಾಡಿಗಳು ಅಸ್ತಿತ್ವ ಕಳೆದುಕೊಂಡಿವೆ. ಎಲ್ಲಿಯಾದರೂ ಅಪರೂಪಕ್ಕೆ ನೋಡಿದರೆ ಸಾರ್ವಜನಿಕರು ಕುತೂಹಲದಿಂದ ಕಣ್ಣರಳಿಸುವ ಸ್ಥಿತಿ ನಿರ್ಮಾಣವಾಗಿದೆ.

‘ನಮ್ಮ ಕಾಲದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆ ಇರಲಿಲ್ಲ. ಎತ್ತಿನಗಾಡಿಯಲ್ಲಿ ಪ್ರಯಾಣ ಬೆಳೆಸಲಾಗುತ್ತಿತ್ತು. ಧವಸ ಧಾನ್ಯಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಎತ್ತಿನಗಾಡಿಗೆ ಎತ್ತುಗಳು ಕಟ್ಟಿಕೊಂಡು ಹೋಗುತ್ತಿದ್ದೆವು. ರೋಗಿಗಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗುವುದು, ಸಾಮಗ್ರಿ ತರುವುದು, ಗರ್ಭಿಣಿಯರನ್ನು ಹೆರಿಗೆಗಾಗಿ ಎತ್ತಿನಗಾಡಿಗಳಲ್ಲೇ ಕರೆದುಕೊಂಡು ಹೋಗುತ್ತಿದ್ದರು’ ಎಂದುಹಿರಿಯ ನಾಗರಿಕ ವೆಂಕಟಸ್ವಾಮಪ್ಪ ನೆನಪಿಗೆ ಜಾರಿದರು.

‘ಎತ್ತಿನಗಾಡಿಗಳಿಗೆ ಯಾಂತ್ರಿಕ ವಾಹನಗಳಂತೆ ದೊಡ್ಡ ಹೂಡಿಕೆ ಮತ್ತು ದುರಸ್ತಿಗೆ ಖರ್ಚು ಮಾಡಬೇಕಾಗಿರುವುದಿಲ್ಲ. ಹಾಗೆಯೇ ಇಂತಹ ಗಾಡಿಗಳಿಂದ ಶಬ್ದ ಮತ್ತು ವಾಯುಮಾಲಿನ್ಯವಾಗುವುದಿಲ್ಲ. ಅವುಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಸಹಜವಾಗಿ ದುರಸ್ತಿ ಮಾಡಬಹುದು. ಆದ್ದರಿಂದ ಎತ್ತಿನಗಾಡಿಗಳ ಬಳಕೆಗೆ ಜನರು ಒಗ್ಗಿಕೊಳ್ಳುವ ಮೂಲಕ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕು’ ಎನ್ನುತ್ತಾರೆ ಅವರು.

‘ಎತ್ತಿನಗಾಡಿಗೆ ಎತ್ತುಗಳು ಕಟ್ಟಿಕೊಂಡು ಬೆಳಿಗ್ಗೆ 4 ಗಂಟೆಗೆ ಮನೆ ಬಿಟ್ಟರೆ 9 ಗಂಟೆಗೆ ಹೊಸಕೋಟೆಗೆ ಹೋಗುತ್ತಿದ್ದೆವು. ಅಲ್ಲಿನ ಸೌದೆ, ಕೃಷಿಗೆ ಬೇಕಾಗಿದ್ದ ಉಪಕರಣ ತುಂಬಿಸಿಕೊಂಡು ಅಲ್ಲಿ ಮಧ್ಯಾಹ್ನ 12 ಗಂಟೆಗೆ ಬಿಟ್ಟರೆ ಸಂಜೆ 5 ಗಂಟೆಗೆ ಮನೆ ಸೇರುತ್ತಿದ್ದೆವು. ಕೆಲವೊಮ್ಮೆ ಎತ್ತಿನಗಾಡಿಯಲ್ಲೇ ನಿದ್ರೆಗೆ ಜಾರಿದಾಗ ಎತ್ತುಗಳೇ ನೇರವಾಗಿ ಮನೆಗೆ ತಲುಪಿಸುತ್ತಿದ್ದವು’ ಎಂದು ರೈತ ಕೆ. ಮುನಿರಾಜು ನೆನಪಿನ ಬುತ್ತಿ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT