ಶುಕ್ರವಾರ, ಜನವರಿ 27, 2023
26 °C
ಖಾಸಗಿ ರಾಗಿ ಕಟಾವು ಯಂತ್ರಗಳಿಗೆ ದುಬಾರಿ ಬಾಡಿಗೆ ನಿಗದಿ; ರೈತರ ಆತಂಕ

ಕೊಯ್ಲು ಯಂತ್ರಕ್ಕೆ ಪರದಾಟ

ವಡ್ಡನಹಳ್ಳಿ ಭೋಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

ಹೊಲದಲ್ಲಿ ನೆಲಕಚ್ಚಿರುವ ರಾಗಿ ತೆನೆ

ದೇವನಹಳ್ಳಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ರಾಗಿ ಫಸಲು ಕೊಯ್ಲಿಗೆ ಬಂದಿದ್ದು ಕಟಾವು ಮಾಡಲು ರೈತರು ಯಂತ್ರಗಳಿಗಾಗಿ ಪರದಾಡುತ್ತಿದ್ದಾರೆ. ಕೃಷಿ ಇಲಾಖೆಯು ಈ ವರ್ಷ ಕಟಾವು ಯಂತ್ರದ ಬಗ್ಗೆ ಮಾಹಿತಿ ನೀಡಿಲ್ಲ.

ಖಾಸಗಿ ರಾಗಿ ಕಟಾವು ಯಂತ್ರದ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡು ಪ್ರತಿ ಎಕರೆಗೆ ₹1,200ರಿಂದ ₹1,500 ವಸೂಲಿ ಮಾಡುತ್ತಿದ್ದಾರೆ. ಕಳೆದ ವರ್ಷ ಕೃಷಿ ಇಲಾಖೆಯಿಂದ ಪ್ರತಿ ಎಕರೆಗೆ ₹700ರಿಂದ ₹850 ನೀಡಲಾಗಿತ್ತು.

ಕಳೆದ ವರ್ಷ ಕೃಷಿ ಇಲಾಖೆಯು ಖಾಸಗಿ ಗುತ್ತಿಗೆದಾರರಿಂದ ರಾಗಿ ಕೊಯ್ಲು ಯಂತ್ರಗಳನ್ನು ತಂದಿತ್ತು. ಆ ಯಂತ್ರದಿಂದ ಕಟಾವು ಮಾಡಿಸಿದ ರಾಗಿ ಬೆಳೆಯಲ್ಲಿ ಶೇಕಡ 30ರಿಂದ 40ರಷ್ಟು ರಾಗಿ ಕಾಳು ಮಣ್ಣು ಪಾಲಾಗಿತ್ತು. ಈ ಬಗ್ಗೆ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು.

‘ಈ ಬಾರಿ ಕಳೆದ ವರ್ಷದ ಯಂತ್ರಗಳು ಇಲ್ಲ. ಈವರೆಗೆ ಹೊಸ ತಾಂತ್ರಿಕ ವ್ಯವಸ್ಥೆ ಇರುವ ಕೊಯ್ಲು ಯಂತ್ರಗಳು ಬಂದಿಲ್ಲ. ಕೃಷಿ ಯಂತ್ರಧಾರೆಯಿಂದ ಈ ವರ್ಷ ಯಾವುದೇ ಒಂದು ಯಂತ್ರ ‌‌ನೀಡಿಲ್ಲ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ’ ಎಂದು ರೈತ ಜಿ. ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.

‘ಬಯಲುಸೀಮೆಯ ಅತಿ ಮುಖ್ಯವಾದ ಆಹಾರದ ಬೆಳೆ ರಾಗಿ. ಈ ಬಾರಿ ದಾಖಲೆ ಬಿತ್ತನೆಯ ಜತೆಗೆ ನಿರೀಕ್ಷೆ ಮೀರಿ ಫಸಲು ಬಂದಿದೆ. ಮೊದಲ ಹಂತದಲ್ಲಿ ಬಿತ್ತನೆ ಮಾಡಿದ ಶೇಕಡ 60ರಷ್ಟು ಫಸಲು ಕಟಾವಿಗೆ ನಿಂತಿದೆ. ಕೃಷಿ ಕಾರ್ಮಿಕರ ಕೊರತೆ ಇದೆ’ ಎನ್ನುತ್ತಾರೆ ರೈತ ವೆಂಕಟೇಶ್.

ಕೃಷಿ ಇಲಾಖೆಯ ಮಾಹಿತಿಯಂತೆ ಈ ಬಾರಿ ಮುಂಗಾರಿನಲ್ಲಿ ನಿಗದಿಯಾಗಿದ್ದ 12,218 ಹೆಕ್ಟೇರ್ ಗುರಿ ಪೈಕಿ 11,834.99 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಒಟ್ಟಾರೆ ಎಲ್ಲ ಬೆಳೆಗಳು ಶೇಕಡ 97ರಷ್ಟು ಆಗಿದೆ. ಉತ್ತಮ ಫಸಲು ಬೆಳವಣಿಗೆಯ ಹಂತದಿಂದ ಕೊಯ್ಲು ಹಂತಕ್ಕೆ ಬಂದಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಮುಂಜಾಗ್ರತೆ ವಹಿಸುವಲ್ಲಿ ಎಡವಿದ್ದಾರೆ ಎನ್ನುತ್ತಾರೆ ಪ್ರಾಂತ ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎನ್. ವೀರಣ್ಣ.

‘ನಾಲ್ಕೈದು ದಿನಗಳಲ್ಲಿ ರಾಗಿ ಕೊಯ್ಲು ಯಂತ್ರಗಳು ಬರುವ ಸಾಧ‍್ಯತೆ ಇದೆ’ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು