ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಯಿ ಹಾವಳಿ ಉಲ್ಬಣ

ವಿಜಯಪುರ ಪುರಸಭೆ ಕಾರ್ಯವೈಖರಿಗೆ ನಾಗರಿಕರ ಆಕ್ರೋಶ
Last Updated 1 ನವೆಂಬರ್ 2022, 6:05 IST
ಅಕ್ಷರ ಗಾತ್ರ

ವಿಜಯಪುರ(ಬೆಂ.ಗ್ರಾಮಾಂತರ):ಪಟ್ಟಣದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ತಪ್ಪಿಸಿ, ಜನರಿಗೆ ಆಗುತ್ತಿರುವ ತೊಂದರೆ ನಿವಾರಣೆ ಮಾಡಬೇಕೆಂದು ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ 23 ವಾರ್ಡ್‌ಗಳಲ್ಲಿಯೂ ಬೀದಿ ನಾಯಿಗಳು ಹಿಂಡು ಹಿಂಡಾಗಿ ಸಂಚರಿಸುತ್ತಿವೆ. ರಸ್ತೆಗಳಲ್ಲಿ ಜನರು ಓಡಾಡುವುದಕ್ಕೆ ಭಯಪಡುವಂತಾಗಿದೆ. ಈಗಾಗಲೇ, ಹಲವಾರು ಮಂದಿಯನ್ನು ಕಚ್ಚಿ ಗಾಯಗೊಳಿಸಿವೆ. ನಾಯಿಗಳ ದಾಳಿಗೆ ತುತ್ತಾಗಿರುವವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಂಸದ ಅಂಗಡಿ, ಹೊಟೇಲ್‌ಗಳ ಮುಂದೆ ಇವುಗಳ ಹಾವಳಿ ಹೆಚ್ಚಿದೆ. ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೂ, ಪುರಸಭೆ ಆಡಳಿತ ನಿರ್ಲಕ್ಷ್ಯವಹಿಸಿದೆ. ರಸ್ತೆಯ ಪಕ್ಕದಲ್ಲಿ ಮಲಗಿರುವ ನಾಯಿಗಳು ನಡೆದುಕೊಂಡು ಹೋಗುವವರ ಮೇಲೆ ಏಕಾಏಕಿ ಎರಗುತ್ತಿವೆ. ಅಂಗಡಿಗಳಿಂದ ಏನೇ ವಸ್ತುಗಳನ್ನು ಖರೀದಿ ಮಾಡಿಕೊಂಡು ರಸ್ತೆಗಳಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಬ್ಯಾಗ್‌ಗಳ ಸಮೇತ ಕಿತ್ತುಕೊಳ್ಳುತ್ತವೆ ಎಂದು ದೂರಿದ್ದಾರೆ.

‘ಮನೆಗಳಿಂದ ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತದೆ. ದೊಡ್ಡವರು ಓಡಾಡುವುದೂ ಕಷ್ಟವಾಗಿದೆ. ಇನ್ನು ಮಕ್ಕಳನ್ನು ಹೊರಗೆ ಕಳುಹಿಸಿದರೆ ಗತಿಯೇನು’ ಎಂದು ಗೃಹಿಣಿ ಶಾಲಿನಿ ಆತಂಕ ವ್ಯಕ್ತಪಡಿಸಿದರು.

ಯುವ ಮುಖಂಡ ಹರ್ಷವರ್ಧನ್ ಮಾತನಾಡಿ, ‘ಬೀದಿನಾಯಿಗಳು ಪಟ್ಟಣದ ಸಮೀಪವಿರುವ ತೋಟಗಳಿಗೂ ಲಗ್ಗೆ ಇಟ್ಟಿವೆ. ತೋಟಗಳಿಗೆ ಅಳವಡಿಸಿರುವ ಹನಿ ನೀರಾವರಿ ಪೈಪ್‌ಗಳನ್ನು ಕಚ್ಚಿ ಹಾಕುತ್ತಿವೆ. ಇದರಿಂದ ರೈತರು ಹೊಸ ಪೈಪ್‌ ಅಳವಡಿಸಲು ಪರದಾಡುವಂತಾಗಿದೆ. ಪುರಸಭೆಯವರು ಬೀದಿ ನಾಯಿಗಳನ್ನು ಹಿಡಿಯಲು ₹ 5 ಲಕ್ಷ ಮೀಸಲಿಟ್ಟಿದ್ದೇವೆ. ಟೆಂಡರ್ ಕರೆದರೆ ಯಾರೂ ಮುಂದೆ ಬಂದಿಲ್ಲ ಎಂಬ ಕಾರಣ ಹೇಳಿ ನುಣುಚಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಮುಖಂಡ ನಾಗೇಶ್ ಮಾತನಾಡಿ, ಪುರಸಭೆ ಇದೆಯೋ ಇಲ್ಲವೋ ಎನ್ನುವ ಅನುಮಾನ ಜನರಿಗೆ ಕಾಡುತ್ತಿದೆ. ಒಬ್ಬ ಸದಸ್ಯ ಕೂಡ ಬೀದಿನಾಯಿ ಹಾವಳಿಗೆ ಕಡಿವಾಣ ಹಾಕುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಹೀಗೆಯೇ ನಿರ್ಲಕ್ಷ್ಯ ಮುಂದುವರಿದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಮಾತನಾಡಿ, ‘ಪ್ರತಿದಿನ ಕೇಂದ್ರಕ್ಕೆ ನಾಯಿ ಕಡಿತಕ್ಕೆ ಒಳಗಾದ 4 ರಿಂದ 5 ಮಂದಿ ಚಿಕಿತ್ಸೆಗೆ ಬರುತ್ತಾರೆ. ಇತ್ತೀಚೆಗೆ ಬೀದಿನಾಯಿಗಳ ಕಡಿತಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಪುರಸಭಾ ಮುಖ್ಯಾಧಿಕಾರಿ ಅವರನ್ನು ಸಂಪರ್ಕಿಸಿದರೂ ಅವರು ಮೊಬೈಲ್ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT