ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸರಳ ರಾಮನವಮಿ...

Last Updated 22 ಏಪ್ರಿಲ್ 2021, 7:00 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಶ್ರೀರಾಮನ ಜನ್ಮದಿನದಾದ ರಾಮನವಮಿಯನ್ನು ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನ ಕರಿನೆರಳಿನ ನಡುವೆಯೂ ಶ್ರದ್ಧಾಭಕ್ತಿಗಳಿಂದ ಸರಳವಾಗಿ ಆಚರಿಸಲಾಯಿತು.

ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುವುದು, ಯಾವುದೇ ಅರವಟ್ಟಿಗೆ, ಪ್ರಸಾದ ವಿತರಣೆ ಮಾಡಲು ನಿರ್ಬಂಧಿಸಿ, ಮನೆಗಳಲ್ಲಿಯೇ ರಾಮನವಮಿ ಆಚರಿಸುವಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಆದೇಶಿ ನೀಡಿದ್ದರು. ಈ
ಹಿನ್ನೆಲೆಯಲ್ಲಿ ಶ್ರೀರಾಮ ದೇವಾಲಯ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ದೇವಾಲಯದ ಅರ್ಚಕರು ಸರಳ ಪೂಜೆಯನ್ನು ನೆರವೇರಿಸಿದರು.

ನಗರದ ನೆಲದಾಂಜನೇಯಸ್ವಾಮಿ ದೇವಾಲಯ, ಖಾಸ್‍ಬಾಗ್‍ನ ಶ್ರೀರಾಮ ಮಂದಿರ, ಶಿವಪುರಗೇಟ್ ಬಳಿಯ ಶ್ರೀರಾಮ ದೇವಾಲಯ, ತಾಲ್ಲೂಕಿನ ರಾಜಘಟ್ಟದ ಆಂಜನೇಯಸ್ವಾಮಿ, ತೇರಿನ ಬೀದಿ ಕೋದಂಡರಾಮ ಸ್ವಾಮಿ ದೇವಾಲಯ, ಕೆರೆ ಏರಿಆಂಜನೇಯಸ್ವಾಮಿ ದೇವಾಲಯ, ರೋಜಿಪುರದ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಸರಳ ಪೂಜಾ ಕಾರ್ಯಕ್ರಮಗಳು ನಡೆದವು. ಜನತೆ ಮನೆಗಳಲ್ಲಿ ಪಾನಕ, ಕೋಸಂಬರಿಯ ನೈವೇದ್ಯ ಇರಿಸಿ, ಶ್ರೀರಾಮ ನವಮಿಯನ್ನು ಆಚರಿಸಿದರು.

ಶ್ರೀ ರಾಮನವಮಿಯಂದು ಸಾರ್ವಜನಿಕ ಸ್ಥಳದಲ್ಲಿ ನೀಡಲಾಗುವ ಪಾನಕ ಮಜ್ಜಿಗೆಗಳ ವಿತರಣೆ ವಿರಳವಾಗಿತ್ತು. ಕೆಲವೆಡೆ ಸಾಂಕೇತಿಕವಾಗಿ ಪ್ರಸಾದ ವಿತರಣೆ ಮಾಡಲಾಯಿತು. ಗ್ರಾಮೀಣ ಭಾಗದಲ್ಲೂ ಆಂಜನೇಯಸ್ವಾಮಿ, ಶ್ರೀರಾಮರ ದೇವರ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು. ಹಲವರು ಮಾಸ್ಕ್‌ ಧರಿಸಿ, ಅಂತರ ಕಾಪಾಡಿಕೊಂಡಿದ್ದರು.

ಅರವಟ್ಟಿಗೆ ಕಡಿಮೆ ಸ್ಥಾಪನೆ

ಆನೇಕಲ್: ತಾಲ್ಲೂಕಿನ ವಿವಿಧೆಡೆ ರಾಮನವಮಿಯನ್ನು ಆಚರಿಸಲಾಯಿತು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಶ್ರೀರಾಮನವಮಿಯ ವಿಶೇಷವಾದ ಅರವಟ್ಟಿಗೆಗಳ ಸ್ಥಾಪನೆ ಕಡಿಮೆಯಾಗಿತ್ತು. ಭಕ್ತರು ಅಂತರ ಕಾಯ್ದುಕೊಂಡು ದೇವರ
ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡು ಬಂದಿತು.

ಆನೇಕಲ್‌ನ ಗಾಂಧೀವೃತ್ತದಲ್ಲಿನ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಪ್ರಯುಕ್ತ ವಿಶೇಷ ಪೂಜೆ ಅಲಂಕಾರ ಹಮ್ಮಿಕೊಳ್ಳಲಾಗಿತ್ತು. ರಾಮನವಮಿ ಅಂಗವಾಗಿ ರಾಮ ದೇವರ ಪರಿವಾರಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಬೆಳ್ಳಿ ಕವಚದಿಂದ ಅಲಂಕೃತಗೊಳಿಸಲಾಗಿತ್ತು.

ಪಟ್ಟಣದ ತಿಮ್ಮರಾಯಸ್ವಾಮಿ ದೇವಾಲಯ, ತಾಲ್ಲೂಕಿನ ಬನ್ನೇರುಘಟ್ಟದ ಚಂಪಕಧಾಮ, ಆಂಜನೇಯಸ್ವಾಮಿ, ಸರ್ಜಾಪುರ ಕೋದಂಡರಾಮ ಸ್ವಾಮಿ, ಚಂದಾಪುರದ ಕೋದಂಡರಾಮ, ಮುಗಳೂರಿನ ಶ್ರೀಬೇಟೆ ವೆಂಕಟರಮಣ ಸ್ವಾಮಿ, ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರಸ್ವಾಮಿ, ಬಿದರಗುಪ್ಪೆ ಹಾಗೂ ಬಳ್ಳೂರಿನ ಲಕ್ಷ್ಮೀನಾರಾಯಣ ಸ್ವಾಮಿ, ಕೊಪ್ಪ ಕೋದಂಡರಾಮಸ್ವಾಮಿ, ನಿರ್ಮಾಣ್ ಬಡಾವಣೆಯ ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರ ಸಂಖ್ಯೆ ವಿರಳವಾಗಿತ್ತು. ಎಲ್ಲೆಡೆ ಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಿಸಲಾಯಿತು.

ಕಾಶಿ ವಿಶ್ವನಾಥ ಸ್ವಾಮಿ ದೇವಾಲಯದಲ್ಲಿ ರಾಮನವಮಿ ಪ್ರಯುಕ್ತ ಅರವಟ್ಟಿಗೆ ಸ್ಥಾಪಿಸಿ ನೀರು ಮಜ್ಜಿಗೆ, ಪಾನಕ ವಿತರಿಸಲಾಯಿತು.

ಭಕ್ತರ ಸಂಖ್ಯೆ ವಿರಳ

ವಿಜಯಪುರ: ಕೊರೊನಾ ಸಂಕಷ್ಟದಿಂದಾಗಿ ಈ ಬಾರಿಯ ಶ್ರೀರಾಮನವಮಿ ಹಬ್ಬದ ಆಚರಣೆಯು ಎಲ್ಲೆಡೆ ಸರಳವಾಗಿ ನೆರವೇರಿದೆ.

ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ತೀರಾ ವಿರಳವಾಗಿತ್ತು. ಈ ಮುಂಚೆ ಆಂಜನೇಯಸ್ವಾಮಿ ದೇವಾಲಯ, ಹಾಗೂ ಶ್ರೀರಾಮರ ದೇವಾಲಯಗಳ ಬಳಿಯಲ್ಲಿ ಜಮಾಯಿಸುತ್ತಿದ್ದ ಭಕ್ತರು, ಕೋಸಂಬರಿ, ಪಾನಕ, ಮಜ್ಜಿಗೆಗಳನ್ನು ವಿತರಣೆ ಮಾಡುತ್ತಿದ್ದರು. ಈ ಬಾರಿ ಅಂತಹ ವಿಜೃಂಭಣೆಯಿಲ್ಲದೇ ಕೇವಲ ಪೂಜೆಗಳಿಗಷ್ಟೇ ಹಬ್ಬದ ಆಚರಣೆ ಸೀಮಿತವಾಗಿತ್ತು. ದೇವಾಲಯಗಳಲ್ಲಿ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರಗಳನ್ನು ಮಾಡಲಾಗಿತ್ತು. ದೇವಾಲಯಗಳನ್ನೂ ಹೂಗಳು ಹಾಗೂ ವಿದ್ಯುತ್ ದೀಪಗಳಿಂದ ಸಿಂಗಾರ ಮಾಡಲಾಗಿತ್ತು.

ಕೆರೆಆಂಜನೇಯಗೆ ವಿಶೇಷ ಅಲಂಕಾರ

ದೇವನಹಳ್ಳಿ: ರಾಮನವಮಿಯ ಅಂಗವಾಗಿ ಪಟ್ಟಣದ ಕೋಟೆ ಬಳಿ ಇರುವ ಕೆರೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಿ, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗಿದೆ ಎಂದು ಅರ್ಚಕ ನಾಗೇಶ್‌ಶಾಸ್ತ್ರಿ ತಿಳಿಸಿದರು.

ಪಟ್ಟಣದ ಕೋಟೆ ಬಳಿ ಇರುವ ಆಂಜನೇಯ ಸ್ವಾಮಿ ದೇವಾಲಯ ಪುರಾತನ ಕಾಲದ್ದಾಗಿದ್ದು ಪ್ರತಿನಿತ್ಯ ಇಲ್ಲಿ ನೂರಾರು ಭಕ್ತರು ದರ್ಶನ ಪಡೆಯುತ್ತಾರೆ. ಕೊರೊನಾ ಸಂಕಷ್ಟದಿಂದಾಗಿ ಭಕ್ತರು ಅಂತರ ಕಾಪಾಡಿಕೊಂಡು ದೇವರ ದರ್ಶನ ಪಡೆದುಕೊಳ್ಳುವಂತೆ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಕೋವಿಡ್‌ ನಿಯಮಗಳನ್ನು ಪಾಲಿಸಿ, ಹಬ್ಬದ ಆಚರಣೆ ಸಂಪ್ರದಾಯದಂತೆ ಈ ವರ್ಷ ಆಚರಣೆ ನಿಲ್ಲಿಸಬಾರದೆಂಬ ಕಾರಣಕ್ಕೆ ಸರಳವಾಗಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT