ಶನಿವಾರ, ಜನವರಿ 18, 2020
22 °C
ಚಿ.ನಾ. ರಾಮು ಹೇಳಿಕೆಗೆ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಕ್ರೋಶ

ವೈಯಕ್ತಿಕ ಅಭಿವೃದ್ಧಿಗೆ ಅಂಬೇಡ್ಕರ್ ಹೆಸರು ಬಳಕೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ‘ಈಚೆಗೆ ಚಿ.ನಾ. ರಾಮು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದನ್ನು ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ’ ಎಂದು ಸಮಿತಿಯ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ‌

ಇಲ್ಲಿನ ಖಾಜಿ ಹೊಸಹಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನೆಲದ ಕವಿ ಗೊಲ್ಲಹಳ್ಳಿ ಶಿವಪ್ರಕಾಶ್ ಮಾತನಾಡಿ, ‘ದೇವನೂರು ಮಹದೇವ, ಸಿದ್ದಲಿಂಗಯ್ಯ, ಮಾವಳ್ಳಿ ಶಂಕರ್ ಸೇರಿದಂತೆ ಹಲವು ಮಹನೀಯರು ಸೇರಿ ಹೋರಾಟದ ಮೂಲಕ ಕಟ್ಟಿದ ಬಲಿಷ್ಠ ಸಂಘಟನೆ ದಲಿತ ಸಂಘರ್ಷ ಸಮಿತಿ. ಹಿಂದೆ ದಲಿತ ಸಂಘರ್ಷ ಸಮಿತಿ ಎಂದರೆ ಮಹಾಮನೆಯಾಗಿತ್ತು. ಇಂತಹ ಸಂಘಟನೆಯ ವಿರುದ್ಧ ಮಾತನಾಡುವ ಹಕ್ಕು ಚಿ.ನಾ. ರಾಮುಗಿಲ್ಲ. ಅವರು ತಮ್ಮ ವೈಯಕ್ತಿಕ ಅಭಿವೃದ್ಧಿಗೆ ದಲಿತ ಸಂಘಟನೆ ಹಾಗೂ ಅಂಬೇಡ್ಕರ್ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಡಿಎಸ್ಎಸ್ ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಮಾತನಾಡಿ, ‘ಚಿ.ನಾ. ರಾಮು; ಮಾವಳ್ಳಿ ಶಂಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸಂಘಟನೆಯನ್ನು ಹೋಳು ಸಂಘಟನೆ ಎಂದು ಕರೆದಿದ್ದಾರೆ. ಚಿ.ನಾ. ರಾಮು ಸ್ವಯಂ ಘೋಷಿತ ರಾಷ್ಟ್ರಾಧ್ಯಕ್ಷರಾಗಿದ್ದು ಅವರಿಂದ ದಲಿತ ಸಮುದಾಯಕ್ಕೆ ಯಾವುದೇ ರೀತಿಯ ನೆರವು ದಕ್ಕಿಲ್ಲ. ಬದಲಿಗೆ ಅವರು ಅಭಿವೃದ್ಧಿಯಾಗಿದ್ದಾರೆ’ ಎಂದು ದೂರಿದರು.

‘ತಾಲ್ಲೂಕಿನ ಯಾವುದೇ ಹಳ್ಳಿಯಲ್ಲಿ ಅವರ ಸಂಘಟನೆಯ ನಾಮಫಲಕವಿಲ್ಲ. ಆದರೂ ಯಾವ ರೀತಿಯಲ್ಲಿ ರಾಷ್ಟ್ರಾಧ್ಯಕ್ಷರಾಗುತ್ತಾರೋ ತಿಳಿಯದು. ಮಾವಳ್ಳಿ ಶಂಕರ್ ಹೋರಾಟದ ಮೂಲಕ ದಲಿತರ ಅಭಿವೃದ್ಧಿಗೆ ಶ್ರಮಿಸಿದ್ದು, ಅವರ ಬಗ್ಗೆ ಮಾತನಾಡುವ ನೈತಿಕತೆ ಚಿ. ನಾ. ರಾಮು ಅವರಿಗೆ ಇಲ್ಲ’ ಎಂದರು.

ವಿಭಾಗೀಯ ಸಂಚಾಲಕ ಲೋಕೇಶ್, ಬೆಂಗಳೂರು ಗ್ರಾಮಾಂತರ ಸಂಚಾಲಕರಾದ ಶಿವಾನಂದ, ತಾಲ್ಲೂಕು ಸಂಚಾಲಕ ನಾರಾಯಣಸ್ವಾಮಿ, ರಾಜ್ಯ ಕಲಾ ಮಂಡಳಿ ಸಂಚಾಲಕ ಯಲ್ಲಪ್ಪ, ಗ್ರಾಮ ಸಮಿತಿ ಅಧ್ಯಕ್ಷ ಅಪ್ಪಯ್ಯ, ದೇವರಾಜ್, ಮಂಜುನಾಥ್, ರಾಜಪ್ಪ ಇದ್ದರು.

ಪ್ರತಿಕ್ರಿಯಿಸಿ (+)