ದೊಡ್ಡಬಳ್ಳಾಪುರ: ಕಳೆಗುಂದಿದ ಪಟಾಕಿ ವ್ಯಾಪಾರ

ದೊಡ್ಡಬಳ್ಳಾಪುರ: ದೀಪಾವಳಿ ಹಬ್ಬ ಆಚರಿಸಲು ಸಿದ್ಧತೆಗಳು ನಡೆಯುತ್ತಿರುವುದು ಒಂದು ಕಡೆಯಾದರೆ ಹಬ್ಬದ ಮುಖ್ಯ ಆಕರ್ಷಣೆಯಾಗಿರುವ ಪಟಾಕಿ ಮಾರಾಟ ಕಳೆಗುಂದಿದೆ.
ಈ ಬಾರಿ ಸುಪ್ರೀಂ ಕೋರ್ಟ್ ಆದೇಶದಂತೆ ಹಸಿರು ಪಟಾಕಿ ಹಾಗೂ ಮಾಲಿನ್ಯರಹಿತ ಪಟಾಕಿಗಳ ಮಾರಾಟಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಪಟಾಕಿ ಮಾರಾಟಕ್ಕೆ ಪರವಾನಗಿ ಸಿಗುವುದು ವಿಳಂಬವಾಗಿ ಮಾರಾಟಗಾರರು ಕಾದು ಕುಳಿತುಕೊಳ್ಳುವಂತಾಗಿತ್ತು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಪರವಾನಗಿ ಪಡೆದ 8 ಅಂಗಡಿಗಳ ವ್ಯಾಪಾರಿಗಳು ಪಟಾಕಿಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ.
ಸುಪ್ರೀಂಕೋರ್ಟ್ ಸೂಚನೆಯಂತೆ ಹಸಿರು ಪಟಾಕಿಗಳ ತಯಾರಿಕೆ ಮಾರ್ಗಸೂಚಿಗಳನ್ನು ಅನುಸರಿಸಿ ತಯಾರಿಸಲಾಗಿರುವ ಕಂಪನಿಗಳಿಂದಲೇ ನಾವು ಪಟಾಕಿಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಗ್ರಾಹಕರು ಯಾವುದೇ ಆತಂಕವಿಲ್ಲದೇ ಖರೀದಿಸಬಹುದು ಎನ್ನುತ್ತಾರೆ ವ್ಯಾಪಾರಿಗಳು.
ಎಂದಿನಂತೆ ನಮಗೆ ಪಟಾಕಿ ಅಂಗಡಿ ಇಡುವುದಕ್ಕೆ ಜಾಗ ನೀಡುವುದು ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ಪರವಾನಗಿ ಪಡೆಯುವುದು ಸಹ ತ್ರಾಸವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪಟಾಕಿ ವ್ಯಾಪಾರ ಕುಸಿತ ಕಂಡಿದೆ. ಸರ್ಕಾರ ಯಾವುದೇ ಸುತ್ತೋಲೆ ಹೊರಡಿಸಿದರೂ ಮುಂಚಿತವಾಗಿ ಹೇಳಿದರೆ ನಮಗೆ ಅನುಕೂಲವಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ದೀಪಾವಳಿ ಹಿನ್ನೆಲೆಯಲ್ಲಿ ಹೂ, ಸೊಪ್ಪು, ತರಕಾರಿ ಬೆಲೆ ಗಗನಕ್ಕೇರಿದೆ. ದೀಪಾವಳಿಯಲ್ಲಿ ಮನೆ ಮುಂದೆ ಹಚ್ಚಿಡುವ ಹಣತೆಗಳ ಮಾರಾಟ ಭರದಿಂದ ಸಾಗಿದೆ. ಮಾರುಕಟ್ಟೆ ಪ್ರದೇಶದಲ್ಲಿ ದೀಪಾವಳಿಗೆ ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿರುವ ಸಾರ್ವಜನಿಕರು ಹಬ್ಬ ಆಚರಿಸಲು ಸಿದ್ಧವಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.