ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಲಿಬೆಲೆ: ಒಂದೇ ಕಾಮಗಾರಿಗೆ ಎರಡು ಭೂಮಿಪೂಜೆ!

ಜಿಲ್ಲಾ ಉಸ್ತುವಾರಿ ಸಚಿವರ ನಡೆಗೆ ಶಾಸಕ ಶರತ್‌ ಬಚ್ಚೇಗೌಡ ಆಕ್ಷೇಪ
Last Updated 4 ನವೆಂಬರ್ 2021, 6:30 IST
ಅಕ್ಷರ ಗಾತ್ರ

ಸೂಲಿಬೆಲೆ: ‘ಹೊಸಕೋಟೆ ತಾಲ್ಲೂಕಿನ ಶಾಂತಿಯುತ ವಾತಾವರಣವನ್ನು ಕೆಡಿಸುವ ಉದ್ದೇಶ ಇಟ್ಟುಕೊಂಡು ಸಚಿವ ಎಂ.ಟಿ.ಬಿ. ನಾಗರಾಜ್ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಶಾಸಕ ಶರತ್ ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಸೂಲಿಬೆಲೆ ಹೋಬಳಿಯ ನಗರೇನಹಳ್ಳಿಯಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ₹ 12 ಲಕ್ಷ ವೆಚ್ಚದ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಅ. 12ರಂದು ದ್ಯಾವಸಂದ್ರ, ಭಾವಾಪುರ, ಬಾಲೇನಹಳ್ಳಿ ಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್ ಭೂಮಿಪೂಜೆ ನೆರವೇರಿಸಿದ್ದರು. ಅದೇ ಕಾಮಗಾರಿಗೆ ಸಚಿವ ಎಂ.ಟಿ.ಬಿ. ನಾಗರಾಜ್ ನ. 2ರಂದು ಮತ್ತೆ ಭೂಮಿಪೂಜೆ ನೆರವೇರಿಸಿದ್ದು, ಇದಕ್ಕೆ ಶಾಸಕರು ಆಕ್ಷೇಪವ್ಯಕ್ತಪಡಿಸಿದರು.

‘ಸಚಿವರು ಹಿಂದಿನ ಬಾಗಿಲ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ನನಗೆ ಮತದಾರರು ಶಾಸಕನಾಗಿ ಆಯ್ಕೆ ಮಾಡಿ ಕೊಟ್ಟಿರುವ ಸೌಭಾಗ್ಯವನ್ನು ಕಳಚುವ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಬಾಗಿಲಿನಿಂದ ಬಂದು ಪೂಜೆ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಾರೆ’ ಎಂದುಟೀಕಿಸಿದರು.

ಕ್ಷೇತ್ರದಲ್ಲಿ ಪೂಜೆ ನಡೆಯುತ್ತಿದ್ದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಸೇರಿದಂತೆ ಯಾರಿಗೂ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ನೀಡಿಲ್ಲ. ಡಿ.ಆರ್ ಪೊಲೀಸ್ ತುಕಡಿಗಳನ್ನು ಇಟ್ಟುಕೊಂಡು ಅವರ ಕಾವಲಿನಲ್ಲಿ ಪೂಜೆ ನೆರವೇರಿಸಿದ್ದಾರೆ. ಇದು ನ್ಯಾಯಬದ್ಧ ಪೂಜೆನಾ ಎಂದು ಪ್ರಶ್ನಿಸಿದರು.

ಈ ಕಾಮಗಾರಿಗೆ ಸಚಿವರನ್ನು ಕರೆಯುವ ಅಗತ್ಯ ಇರಲಿಲ್ಲ. ಆದರೂ ಸೌಜನ್ಯಕ್ಕೆ 10 ದಿನಗಳ ಮುಂಚಿತವಾಗಿಯೇ ಲೋಕೋಪಯೋಗಿ ಇಲಾಖೆ ಮೂಲಕ ಸಚಿವರನ್ನು ಪೂಜೆಗೆ ಆಹ್ವಾನಿಸಲು ಸೂಚಿಸಲಾಗಿತ್ತು. ಪೂಜೆಗೆ ಬರದೇ ಅಂದು ಮಾಡಿದ ಪೂಜೆಗೆ ಮತ್ತೆ ಭೂಮಿಪೂಜೆ ಮಾಡಿದ್ದಾರೆ. ನಾನು ತಂದ ಅನುದಾನ ಎಂದು ಸುಳ್ಳು ಹೇಳಿಕೊಂಡು ತಾಲ್ಲೂಕಿನ ಶಾಂತಿಯುತ ವಾತಾವರಣವನ್ನು ಕೆಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಗೂ ಉಸ್ತುವಾರಿ ಸಚಿವರು ಎಂದು ಅಧಿಕೃತ ಆದೇಶ ಬಂದಿಲ್ಲ. ಗೆಜೆಟ್ ನೋಟಿಫಿಕೇಷನ್‌ನಲ್ಲಿ ಕುಡಿಯುವ ನೀರು ಮತ್ತು ಕೋವಿಡ್ ನಿರ್ವಹಣೆಗೆ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ ಎಂದು ನಮೂದಿಸಲಾಗಿದೆ. ಜಿಲ್ಲೆಯಲ್ಲಿ ಯಾರು ಧ್ವಜಾರೋಹಣ ಮಾಡಬೇಕೆಂದಷ್ಟೇ ಸ್ಪಷ್ಟಪಡಿಸಲಾಗಿದೆ ಎಂದುಹೇಳಿದರು.

ಆದರೆ, ತಾವು ಜಿಲ್ಲಾ ಉಸ್ತುವಾರಿ ಸಚಿವರು ಎಂದು ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಮರುಪೂಜೆ ಮಾಡುತ್ತಿದ್ದಾರೆ. ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲ್ಲೂಕಿನಲ್ಲೂ ಇದೇ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

‘ಸಚಿವರ ಧೋರಣೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ. ಮುಂದಿನ ದಿನಗಳಲ್ಲಿ ಇದೇ ರೀತಿ ಕಾನೂನು ಉಲ್ಲಂಘಿಸಿ ನಡೆದುಕೊಂಡರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ದೊಡ್ಡಅರಳಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ವಿ. ಸತೀಶಗೌಡ, ಉಪಾಧ್ಯಕ್ಷ ಮುನಿರಾಜು, ಕಂಬಳೀಪುರ ಗ್ರಾ.ಪಂ. ಅಧ್ಯಕ್ಷ ರಮೇಶ, ಮುಖಂಡರಾದ ಡಿ.ಟಿ. ವೆಂಕಟೇಶ್, ನಾಗರಾಜಪ್ಪ, ತಮ್ಮಣ್ಣ, ಅಮ್ಜದ್ ಬೇಗ್, ಶಿವಕುಮಾರ್, ವೆಂಕಟೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT