ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಅರಳುಮಲ್ಲಿಗೆ ಕೆರೆ ಅಂಗಳಕ್ಕೆ ತ್ಯಾಜ್ಯ ನೀರು

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತಲಿನ ಕೆರೆಗಳಿಗೆ ಅಪತ್ತು
Published 5 ಜನವರಿ 2024, 12:59 IST
Last Updated 5 ಜನವರಿ 2024, 12:59 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ವಕ್ರದೃಷ್ಟಿ ಈಗ ಅರಳುಮಲ್ಲಿಗೆ ಕೆರೆ ಅಂಗಳದ ಕಡೆಗೆ ಬಿದ್ದಿದ್ದು ಕಾರ್ಖಾನೆಗಳ ತ್ಯಾಜ್ಯ ನೀರನ್ನು ಟ್ಯಾಂಕರ್‌ಗಳ ಮೂಲಕ ರಾತ್ರಿ ವೇಳೆ ತುಂಬಿಕೊಂಡು ಬಂದು ರಸ್ತೆ ಅಂಚಿನ ರಾಜಕಾಲುವೆಗಳ ಮೂಲಕ ಕೆರೆ ಅಂಗಳಕ್ಕೆ ಹರಿದು ಬಿಡಲಾಗುತ್ತಿದೆ.

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತಲಿನ ಚಿಕ್ಕತುಮಕೂರು, ವೀರಾಪುರ, ದೊಡ್ಡತುಮಕೂರು ಕೆರೆಗಳಿಗೆ ಕಾಖಾನೆಗಳ ತ್ಯಾಜ್ಯ ನೀರು ಹರಿದು ಕೆರೆಯಲ್ಲಿನ ನೀರಷ್ಟೇ ಅಲ್ಲದೆ ಅಂತರ್ಜಲವೂ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಇಲ್ಲಿನ ಜನರು ಎಚ್ಚೆತ್ತುಕೊಂಡು ತ್ಯಾಜ್ಯ ನೀರನ್ನು ಕೆರೆಗೆ ಹರಿಸುವುದರ ವಿರುದ್ಧ ಹೋರಾಟ ತೀವ್ರಗೊಳಿಸಿದ ನಂತರ ಈಗ ಕಾರ್ಖಾನೆಗಳವರು ರಾತ್ರಿ ವೇಳೆ ಟ್ಯಾಂಕರ್‌ಗಳ ಮೂಲಕ ಅರಳುಮಲ್ಲಿಗೆ ಕೆರೆಗೆ ತಂದು ಸುರಿಯುತ್ತಿದ್ದಾರೆ.

ಈ ಬಗ್ಗೆ ಯುವ ಸಂಚಲನ ಅಧ್ಯಕ್ಷ ಚಿದಾನಂದ್‌, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವಿಜಯ ಬುಧವಾರ ಕೆರೆ ಅಂಚಿನ ರಾಜಕಾಲುಗಳಿಗೆ ಭೇಟಿ ನೀಡಿ ಅಲ್ಲಿ ಶೇಖರಣೆಯಾಗಿದ್ದ ತ್ಯಾಜ್ಯ ನೀರನ್ನು ಸಂಗ್ರಹ ಮಾಡಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಈಗ ನಿರ್ಮಾಣ ಹಂತದಲ್ಲಿ ಇರುವ ದಾಬಸ್‌ಪೇಟೆ-ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವ ರಾಜಕಾಲುವೆಗಳಿಗೆ ರಾತ್ರಿ ವೇಳೆ ಟ್ಯಾಂಕರ್‌ಗಳ ಮೂಲಕ ತ್ಯಾಜ್ಯ ನೀರು ಸುರಿದು ಹೋಗಲಾಗುತ್ತಿದೆ. ಇದಷ್ಟೇ ಅಲ್ಲದೆ ಹೆದ್ದಾರಿ ನಿರ್ಮಾಣಕ್ಕಾಗಿ ಕೆರೆ ಅಂಗಳದಿಂದ ಮಣ್ಣು ಸಾಗಿಸಲು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ರಸ್ತೆಗಳ ಮೂಲಕ ಕೆರೆ ಅಂಗಳಕ್ಕೆ ಹೋಗಿ ಬೃಹತ್‌ ಹೊಂಡಗಳಿಗೂ ತ್ಯಾಜ್ಯ ನೀರು ಸುರಿದಿರುವುದು ಬೆಳಕಿಗೆ ಬಂದಿದೆ. ‌

ದೊಡ್ಡಬಳ್ಳಾಪುರ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಅರಳುಮಲ್ಲಿಗೆ ಕೆರೆಯ ರಾಜಕಾಲುವೆಗಳಿಗೆ ಟ್ಯಾಂಕರ್‌ಗಳ ಮೂಲಕ ತಂದು ಸುರಿಯಲಾಗಿರುವ ಕೈಗಾರಿಕೆಗಳ ತ್ಯಾಜ್ಯ ನೀರು
ದೊಡ್ಡಬಳ್ಳಾಪುರ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಅರಳುಮಲ್ಲಿಗೆ ಕೆರೆಯ ರಾಜಕಾಲುವೆಗಳಿಗೆ ಟ್ಯಾಂಕರ್‌ಗಳ ಮೂಲಕ ತಂದು ಸುರಿಯಲಾಗಿರುವ ಕೈಗಾರಿಕೆಗಳ ತ್ಯಾಜ್ಯ ನೀರು

ಕೆರೆ ಅಂಚಿನ ಗ್ರಾಮಗಳ ಸಾರ್ವಜನಿಕರು ಹಾಗೂ ರೈತರು ಈಗಲೇ ಎಚ್ಚೆತ್ತುಕೊಂಡು ರಾತ್ರಿ ವೇಳೆ ತ್ಯಾಜ್ಯ ನೀರು ತುಂಬಿಕೊಂಡು ಬರುವ ಟ್ಯಾಂಕರ್‌ಗಳನ್ನು ತಡೆದು ಪೊಲೀಸರಿಗೆ ಒಪ್ಪಿಸುವ ಕೆಲಸ ತುರ್ತಾಗಿ ಮಾಡಬೇಕಿದೆ. ಇಲ್ಲವಾದರೆ ಈಗ ದೊಡ್ಡತುಮಕೂರು ಗ್ರಾಮದ ರೈತರು ಕುಡಿಯುವ ನೀರು ಬೇರೆ ಊರಿನಿಂದ ತರಿಸಿಕೊಳ್ಳುತ್ತಿರುವ ಪರಿಸ್ಥಿಯೇ ಅರಳುಮಲ್ಲಿಗೆ ಕೆರೆ ಅಂಚಿನ ಗ್ರಾಮಗಳ ರೈತರಿಗೂ ಬರಲಿದೆ ಎಂದು ಚಿದಾನಂದ್‌ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT