ಸೋಮವಾರ, ನವೆಂಬರ್ 18, 2019
23 °C
ವಿಶ್ವ ಓಝೋನ್ ದಿನಾಚರಣೆ, ಪರಿಸರ ಜಾಗೃತಿ ಕಾರ್ಯಕ್ರಮ

‘ಮಳೆಯ ನರ್ತನಕ್ಕೆ ಕಾರಣ ಅರ್ಥ ಮಾಡಿಕೊಳ್ಳಿ’

Published:
Updated:
Prajavani

ದೇವನಹಳ್ಳಿ: ವಾತಾವರಣದಲ್ಲಿ ಹೆಚ್ಚುತ್ತಿರುವ ವಿಷಕಾರಕ ವಾಯುಮಾಲಿನ್ಯದಿಂದ ಓಜೋನ್ ಪದರಕ್ಕೆ ಧಕ್ಕೆಯಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಹೇಳಿದರು.

ಇಲ್ಲಿನ ಸರ್ಕಾರಿ ಕಿರಿಯ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹಾಗೂ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ನಡೆದ ವಿಶ್ವ ಓಜೋನ್ ದಿನಾಚರಣೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ, ಕರಾವಳಿಯಲ್ಲಿ ಮಳೆಯ ನರ್ತನಕ್ಕೆ ಕಾರಣಗಳೇನು ಎಂಬುದನ್ನು ಆರ್ಥ ಮಾಡಿಕೊಳ್ಳಬೇಕು. ಹೆಚ್ಚುತ್ತಿರುವ ನಗರೀಕರಣ, ಕಾರ್ಖಾನೆಗಳ ಸ್ಥಾಪನೆ, ಪರಿಸರ ಸಂರಕ್ಷಣೆ ಬಗ್ಗೆ ನಿರ್ಲಕ್ಷ್ಯದಿಂದ ವಿಪರಿತ ಬಿಸಿಲು, ಅಕಾಲಿಕ ಮಳೆ, ತಣ್ಣನೆಯ ಗಾಳಿಗೆ ಕಾರಣವಾಗುತ್ತಿದೆ ಎಂದರು.

ಪರಿಸರ ಸಮತೋಲನ ಕಾಯ್ದುಕೊಳ್ಳಬೇಕಾದರೆ ಗಿಡ ಮರಗಳನ್ನು ಬೆಳೆಸುವುದೊಂದೇ ಪರ್ಯಾಯ ಮಾರ್ಗವಾಗಿದೆ ಎಂದು ಹೇಳಿದರು.

ಪಶು ವೈದ್ಯಕೀಯ ಇಲಾಖೆ ಜಿಲ್ಲಾ ನಿರ್ದೇಶಕ ಡಾ.ಸಿ.ಎಸ್. ಅನಿಲ್ ಕುಮಾರ್ ಮಾತನಾಡಿ, ‘ಸಮೃದ್ಧ ವನ ಸಂಪತ್ತು ಹೊಂದಿದ್ದ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೆಸಾರ್ಟ್ ಮತ್ತು ಹೋಟೆಲ್‌ಗಳ ನಿರ್ಮಾಣದಿಂದ ಎರಡು ವರ್ಷಗಳಿಂದ ಆ ಜಿಲ್ಲೆ ತತ್ತರಿಸಿಹೋಗಿದೆ. ಪರಿಸರ ಸಂರಕ್ಷಣೆ ನಮ್ಮ ಮನೆಯಿಂದಲೇ ಸ್ವಯಂಪ್ರೇರಿತವಾಗಿ ಆರಂಭವಾಗಬೇಕು’ ಎಂದು ಹೇಳಿದರು.

ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಧಕ್ಕೆಯ ಜೊತೆಗೆ ಜನ, ಜಾನುವಾರುಗಳಿಗೂ ಮಾರಕ. ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡುವುದರಿಂದ ಅನೇಕ ಪಶುಗಳು ತಮಗರಿವಿಲ್ಲದೆ ಆಹಾರವನ್ನಾಗಿ ಸ್ವೀಕರಿಸಿ ಮರಣ ಹೊಂದುತ್ತಿವೆ. ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಪಣ ತೊಡಬೇಕು ಎಂದು ಹೇಳಿದರು.

ಮುಖಂಡ ಚಂದ್ರಶೇಖರ್ ಮತ್ತು ಉಪನ್ಯಾಸಕಿ ಶೋಭಾ ಮಾತನಾಡಿ, ‘ನಾಡು ಹೆಚ್ಚಾಗಿ ಕಾಡು ಕಡಿಮೆಯಾಗುತ್ತಿದೆ. ಹೆಚ್ಚುತ್ತಿರುವ ಅನಾವೃಷ್ಟಿ, ಅತಿವೃಷ್ಟಿಗೆ ಮಾನವನ ಸ್ವಯಂಕೃತ ಅಪರಾಧ ಕಾರಣ. ಪ್ರತಿಯೊಂದನ್ನು ಸರ್ಕಾರದಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಸ್ವಯಂ ನಾವೇ ಪ್ರೇರಿತರಾಗಬೇಕು’ ಎಂದು ಹೇಳಿದರು.

ಓಜೋನ್ ಪದರಗಳು ನೆಲಮಟ್ಟದಿಂದ 20 ರಿಂದ 30 ಕಿ.ಮೀ. ಅಂತರದಲ್ಲಿ ಇರುತ್ತವೆ. ಬಿಸಿಯಾದ ಸೂರ್ಯನ ಕಿರಣಗಳನ್ನು ಹೀರುವ ಶಕ್ತಿ ಆ ಪದರಕ್ಕಿದೆ. ಇದಕ್ಕೆ ಧಕ್ಕೆಯಾದರೆ ಪ್ರಕೃತಿ ಜೀವ ಸಂಕುಲ ಮಾನವನ ಮೇಲೆ ದುಷ್ಪರಿಣಾಮ ಬೀರಲಿದೆ. ಇದನ್ನು ಕಾಯ್ದುಕೊಳ್ಳಲು ಮರಗಿಡಗಳನ್ನು ಬೆಳೆಸಬೇಕು ಎಂದು ಹೇಳಿದರು.

ಉಪಪ್ರಾಂಶುಪಾಲ ಕೆ.ಬಸವರಾಜು, ಹಿರಿಯ ಶಿಕ್ಷಕ ಶರಣಯ್ಯ ಹಿರೇಮಠ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜನಾರ್ಧನ್, ಪಶುವೈದ್ಯರಾದ ಡಾ.ರಮೇಶ್, ಡಾ.ಮಧುಸೂಧನ್, ಪುರಸಭೆ ಸದಸ್ಯ ಬಾಲರಾಜ್, ಪರಿಸರ ಸಂರಕ್ಷಣಾ ಸಮಿತಿ ರಾಜ್ಯ ಘಟಕ ಅಧ್ಯಕ್ಷ ಮುನಿರಾಜಪ್ಪ, ಗೌರವಾಧ್ಯಕ್ಷ ಮನೋಹರ್, ಉಪಾಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ಎ.ಎಂ. ಮನು, ಉಪಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕಾರ್ಮಿಕ ಘಟಕ ಅಧ್ಯಕ್ಷ ತಿರುಮಲೇಶ್ ಇದ್ದರು.

ಪ್ರತಿಕ್ರಿಯಿಸಿ (+)