ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿ

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: `ಅಕ್ರಮವಾಗಿ ಗಳಿಸಿರುವ ಆಸ್ತಿಯನ್ನು ಮುಟ್ಟುಗೊಲು ಹಾಕಿಕೊಳ್ಳುವ ನೀತಿ ಜಾರಿಯಾಗದ ಹೊರತು ಭ್ರಷ್ಟಾಚಾರಕ್ಕೆ ಕಡಿವಾಣಹಾಕಲು ಸಾಧ್ಯವಿಲ್ಲ~ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.

ತಾಲ್ಲೂಕಿನ ಎಸ್.ಎಸ್.ಘಾಟಿ ಕ್ಷೇತ್ರದಲ್ಲಿ ರೈತ ಸಂಘದ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

`ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದಿದ್ದರೂ ಸಹ ಉತ್ತರ ಕರ್ನಾಟಕದ ಜನ ನಗರಗಳಿಗೆ ಗುಳೆ ಹೋಗುವುದನ್ನು ತಡೆಯುವಂತಹ ಅಭಿವೃದ್ಧಿ ಪರ ಬಜೆಟ್, ಕಾನೂನುಗಳನ್ನು ರೂಪಿಸಲು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ.

ಸರ್ಕಾರಿ ನೌಕರರ ಸಂಬಳ ಪ್ರತಿ ವರ್ಷ ಏರಿಕೆಯಾಗುತ್ತಲೇ ಇದೆ ಆದರೆ ಕೃಷಿ ಉತ್ಪನ್ನಗಳ ಬೆಲೆ ಮಾತ್ರ ಪ್ರತಿ ವರ್ಷ ಕುಸಿತವಾಗುತ್ತಿದೆ  ಎಂದು ಬೇಸರ ವ್ಯಕ್ತಪಡಿಸಿದರು.

`ಕಾಯಕ ಧರ್ಮದ ಬಸವಣ್ಣ ರೂಪಿಸಿದ್ದ ಆರ್ಥಿಕ ನೀತಿ ಜಾರಿಗೆ ಬಂದಾಗ ಮಾತ್ರ ನಿರುದ್ಯೋಗ ನಿವಾರಣೆ ಸಾಧ್ಯ. ದೇಶದ ಆಹಾರ ಭದ್ರತೆಯಲ್ಲಿ ಮಹಿಳೆಯರ ಪಾಲು ದೊಡ್ಡದು. ಆದರೆ ದುಡಿಯುವ ಮಹಿಳೆಯರು ಅನಾರೋಗ್ಯಕ್ಕೆ ತುತ್ತಾದಾಗ ಅವರ ಚಿಕಿತ್ಸೆಗಾಗಿ ವಿಶೇಷ ಸೌಲಭ್ಯಗಳು ಮಾತ್ರ ಇಲ್ಲ ಎಂದರು.

ಬಡವರ ಹಾಗೂ ದುಡಿಯುವ ವರ್ಗದ ಜನರ ಬದುಕಿನ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳಿಗೂ ಕನಸುಗಳೆ ಇಲ್ಲದಾಗಿವೆ. ಉದ್ಯೋಗ ಸೃಷ್ಟಿಸುವಂತಹ ಸಾಲ ನೀತಿಯಿಂದ ಹಾಗೂ ಬಡ್ಡಿ ರಹಿತ ಕೃಷಿ  ಸಾಲದಿಂದ ಮಾತ್ರ ದೇಶದಲ್ಲಿ ಆರ್ಥಿಕ ಸಮಾನತೆ ತರಲು ಸಾಧ್ಯವಾಗಲಿದೆ ಎಂದರು.

ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ಎನ್.ವೆಂಕಟರೆಡ್ಡಿ ಮಾತನಾಡಿ, ಎಸ್.ಎಸ್.ಘಾಟಿ ಕ್ಷೇತ್ರದಲ್ಲಿ ಆರ್.ಎಸ್.ಎಸ್ ಅಂಗ ಸಂಸ್ಥೆ ನಡೆಸುತ್ತಿರುವ ಗೋ ಶಾಲೆಗೆ ಸರ್ಕಾರ ರಾತ್ರೋರಾತ್ರಿ ನೂರು ಎಕರೆ ಭೂಮಿಯನ್ನು ನಿಯಮ ಮೀರಿ ಮಂಜೂರು ಮಾಡಲಾಗಿದೆ. ಈ ಭೂಮಿಯಲ್ಲಿ ಬಗರ್ ಹುಕ್ಕುಂ ಭೂಮಿಯೇ ಹೆಚ್ಚಾಗಿದೆ. ಗೋ ಶಾಲೆ ನಿರ್ಮಿಸುವ ದಾವಂತದಲ್ಲಿ ಐತಿಹಾಸಿಕ ವಿಶ್ವೇಶ್ವರಯ್ಯ ಪಿಕ್ ಡ್ಯಾಮ್ ಅನ್ನು ಸಹ ಕಾಂಪೌಡ್ ಒಳಗೆ ಸೇರಿಸಿಕೊಳ್ಳಲಾಗಿದೆ. ಈ ಡ್ಯಾಮ್‌ನಲ್ಲಿ ನಿಲ್ಲುತ್ತಿದ್ದ ನೀರನ್ನು ಹೊರಬಿಡಲಾಗಿದೆ ಎಂದು ತಿಳಿಸಿದ ಅವರು ನಿಯಮ ಮೀರಿ ಗೋ ಶಾಲೆಗೆ ಮಂಜೂರು ಮಾಡಿರುವ ಭೂಮಿಯನ್ನು ಬಗರ್‌ಹುಕಂ ಸಾಗುವಳಿದಾರ ರೈತರಿಗೆ ಹಿಂದಿರುಗಿಸುವವರೆಗೂ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಸದ್ಯದಲ್ಲೇ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ದೇಶದಲ್ಲಿ ಹೊಸ ಭೂಸ್ವಾಧೀನ ಕಾಯಿದೆ ರೂಪಿಸಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಅಕ್ಟೋಬರ್ 18 ರಂದು ದೆಹಲಿಯಲ್ಲಿ ದೇಶದ ಎಲ್ಲಾ ರೈತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಲಕ್ಷ್ಮಾನಾಯ್ಕ ವಹಿಸಿದ್ದರು. ರಾಜ್ಯ ರೈತ ಸಂಘದ ಯುವ ಮುಖಂಡ ಪಚ್ಚೆನಂಜುಂಡಸ್ವಾಮಿ, ಬೆಂ.ಗ್ರಾ.ಜಿಲ್ಲಾ ಅಧ್ಯಕ್ಷ ವೆಂಕಟನಾರಾಯಣಪ್ಪ, ಕಾರ್ಯದರ್ಶಿ ಡಾ.ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಪ್ರಸನ್ನ, ಮುತ್ತೇಗೌಡ, ಕೆ.ಪಿ.ಕುಮಾರ್, ನಾರಾಯಣಸ್ವಾಮಿ, ಬಸವರಾಜು ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT