ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ| ಜೆಟ್‌ ಕ್ಲೀನರ್‌ ಖರೀದಿ ಟೆಂಡರ್‌ನಲ್ಲಿ ಅಕ್ರಮ?

ಅಗತ್ಯ ಅನುದಾನ ಲಭ್ಯ ಇಲ್ಲದಿದ್ದರೂ ₹ 12.40 ಕೋಟಿ ಮೊತ್ತಕ್ಕೆ ಟೆಂಡರ್‌
Last Updated 1 ಜನವರಿ 2022, 20:04 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೇಂದ್ರ ವಾಣಿಜ್ಯ ಪ್ರದೇಶದ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ಸ್ವಚ್ಛತೆ ಕಾಪಾಡಲು ಐದು ಪ್ರೆಷರ್‌ ಜೆಟ್‌ ಕ್ಲೀನರ್‌/ ವಾಷರ್‌ ಯಂತ್ರಗಳನ್ನು ಖರೀದಿಸುತ್ತಿದ್ದು, ಇದರ ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆಕ್ಷೇಪ ವ್ಯಕ್ತವಾಗಿದೆ.

ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವಷ್ಟು ಅನುದಾನ ಇಲ್ಲದೆಯೇ ಟೆಂಡರ್‌ ಕರೆಯಲಾಗಿದೆ. ಯಂತ್ರಕ್ಕೆ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚು ಮೊತ್ತ ನೀಡಲು ಪ್ರಸ್ತಾವ ಸಲ್ಲಿಸಲಾಗಿದೆ. ಅರ್ಹತೆ ಹೊಂದಿಲ್ಲದ ಗುತ್ತಿಗೆದಾರರಿಗೆ ಟೆಂಡರ್‌ ನೀಡಲು ತಯಾರಿ ನಡೆದಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ನಗರದ ಕೇಂದ್ರ ವಾಣಿಜ್ಯ ಪ್ರದೇಶದ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ಸ್ವಚ್ಛತೆ ಕಾಪಾಡುವ ₹12.40 ಕೋಟಿ ವೆಚ್ಚದ ಯೋಜನೆಗೆ ಬಿಬಿಎಂ‍ಪಿ 2021ರ ಜೂನ್‌ 10ರಂದು ಟೆಂಡರ್‌ ಆಹ್ವಾನಿಸಿತ್ತು. ಟೆಂಡರ್‌ ಸಲ್ಲಿಕೆಗೆ ಜುಲೈ 13 ಕೊನೆಯ ದಿನ ವಾಗಿತ್ತು. ಜುಲೈ 22ರಂದು ನಡೆದ ತಾಂತ್ರಿಕ ಮೌಲ್ಯಮಾಪನದಲ್ಲಿ ಮೂವರು ಗುತ್ತಿಗೆದಾರರು ಅರ್ಹತೆ ಗಳಿಸಿದ್ದರು. ಸೆ.22ರಂದು ಆರ್ಥಿಕ ಬಿಡ್‌ ತೆರೆಯಲಾಗಿದ್ದು, ಗುತ್ತಿಗೆದಾರ ಎ.ಎಲ್‌.ಸತೀಶ್‌ ಕುಮಾರ್‌ ಅತಿ ಕಡಿಮೆ ದರ (₹ 9.29 ಕೋಟಿ) ನಮೂದಿಸಿದ್ದರು. ಟೆಂಡರ್‌ ಮೊತ್ತಕ್ಕಿಂತ ಶೇ 24.67ರಷ್ಟು ಕಡಿಮೆ ದರ ನಮೂದಿಸಿದ್ದ ಅವರಿಗೆ ಗುತ್ತಿಗೆ ನೀಡುವುದಕ್ಕೆ ಅನುಮೋದನೆ ಕೋರಿ ಬಿಬಿ ಎಂಪಿಯು ಅಧಿಕಾರಯುಕ್ತ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿದೆ

ಬಿಬಿಎಂಪಿಯು 2019ನೇ ಸಾಲಿನ ‘ಶುಭ್ರ ಬೆಂಗಳೂರು’ ಯೋಜನೆಯಡಿ ಈ ಯಂತ್ರಗಳನ್ನು ಖರೀದಿ ಮಾಡುತ್ತಿದೆ. ಈ ಯೋಜನೆಯಡಿ ₹ 5 ಕೋಟಿಯಷ್ಟೇ ಲಭ್ಯವಿದ್ದರೂ ₹ 12.40 ಕೋಟಿ ವೆಚ್ಚಕ್ಕೆ ಟೆಂಡರ್‌ ಕರೆಯಲಾಗಿದೆ. ಈ ಟೆಂಡರ್‌ ಅನುಷ್ಠಾನಕ್ಕೆ (ಯಂತ್ರಗಳ ಖರೀದಿ ಮತ್ತು ಮೂರು ವರ್ಷ ಕಾರ್ಯಾಚರಣೆ, ನಿರ್ವಹಣೆ) ತಗಲುವ ₹ 7.40 ಕೋಟಿ ವ್ಯತ್ಯಾಸದ ಮೊತ್ತವನ್ನು ಪಾಲಿಕೆಯ ಆಯಾ ವರ್ಷಗಳ ಬಜೆಟ್‌ ಅನುದಾನದಲ್ಲಿ ಮರುಹೊಂದಾಣಿಕೆ ಮಾಡುವುದಾಗಿ ಬಿಬಿಎಂಪಿ ಹೇಳಿದೆ.

‘ಅನುದಾನವೇ ಲಭ್ಯವಿಲ್ಲದಿದ್ದರೂ ಇಷ್ಟು ಮೊತ್ತಕ್ಕೆ ಟೆಂಡರ್‌ ಆಹ್ವಾನಿಸಿರುವುದು ಸರಿಯಲ್ಲ. ವ್ಯತ್ಯಾಸದ ಮೊತ್ತವನ್ನು ಬಿಬಿಎಂಪಿ ಅನುದಾನದಲ್ಲಿ ಭರಿಸುವುದಕ್ಕೂ ಕೌನ್ಸಿಲ್‌, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಥವಾ ಆಡಳಿತಾಧಿಕಾರಿ ಅನುಮೋದನೆ ಅಗತ್ಯ. ಅನುಮೋದನೆ ಪಡೆಯದೆಯೇ ಪಾಲಿಕೆ ಹಣವನ್ನು ವೆಚ್ಚ ಮಾಡಲು ಪ್ರಸ್ತಾವ ಸಲ್ಲಿಸಿರುವುದು ನಿಯಮಬಾಹಿರ’ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

‘ಶುಭ್ರ ಬೆಂಗಳೂರು ಯೋಜನೆ ಅನುದಾನವನ್ನು ಯಂತ್ರಗಳ ಖರೀದಿಗಷ್ಟೇ ಬಳಸಲಾಗುತ್ತದೆ. ಆದರೆ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಬಿಬಿಎಂಪಿ ಅನುದಾನ ಬಳಸುತ್ತೇವೆ. ಇದಕ್ಕೆ ಮುಖ್ಯ ಆಯುಕ್ತರಿಂದ ಅನುಮೋದನೆ ಪಡೆದಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಕಸ ನಿರ್ವಹಣೆ) ಬಸವರಾಜ ಕಬಾಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾರುಕಟ್ಟೆ ದರಕ್ಕಿಂತ ಹೆಚ್ಚು ಮೊತ್ತಕ್ಕೆ ಖರೀದಿ?

ಬಿಬಿಎಂಪಿಯು ಅಧಿಕಾರಯುಕ್ತ ಸಮಿತಿ ಮುಂದೆ ಸಲ್ಲಿಸಿರುವ ಪ್ರಸ್ತಾವನೆ ಪ್ರಕಾರ ‘ಕ್ವಾಲಿಟಿ ಎನ್‌ವಿರೋ ಎಂಜಿನಿಯರ್ಸ್‌’ ಸಂಸ್ಥೆಯಿಂದ ಪ್ರೆಷರ್‌ ಜೆಟ್‌ ಕ್ಲೀನರ್ಸ್‌/ ವಾಷರ್ಸ್‌ ಯಂತ್ರ ಖರೀದಿಸಲಾಗುತ್ತಿದೆ. ಈ ಸಂಸ್ಥೆಯು ಮಾರುಕಟ್ಟೆಯಲ್ಲಿ ₹ 28.9 ಲಕ್ಷ ದರಕ್ಕೆ ಯಂತ್ರವನ್ನು ಪೂರೈಸುತ್ತಿದೆ. ಆದರೂ, ಅದಕ್ಕೆ
₹ 88 ಲಕ್ಷ ವೆಚ್ಚದಲ್ಲಿ ಖರೀದಿ ಮಾಡಲು ಪ್ರಸ್ತಾಪಿಸಲಾಗಿದೆ.

ಅಲ್ಲದೇ ಈ ಯಂತ್ರದ ನಿರ್ವಹಣೆ ವೆಚ್ಚವು ವಾರ್ಷಿಕ ಶೇ 8ರಷ್ಟು ಹೆಚ್ಚು ಆಗುವಂತೆ, (ಅಂದರೆ ಮೊದಲ ವರ್ಷಕ್ಕೆ ₹ 29.12 ಲಕ್ಷ, ಎರಡನೇ ವರ್ಷಕ್ಕೆ ₹ 33.72 ಲಕ್ಷ ಹಾಗೂ ಮೂರನೇ ವರ್ಷಕ್ಕೆ ₹ 35.09 ಲಕ್ಷ) ಪ್ರಸ್ತಾಪಿಸಲಾಗಿದೆ. ಇದೇ ಸಂಸ್ಥೆಯು ನವದೆಹಲಿಯಲ್ಲಿ ಟ್ರಕ್‌ ಮೌಂಟೆಡ್‌ ವಾಟರ್‌ ಸ್ಪ್ರಿಂಕ್ಲರ್‌ ಸೇವೆಗೆ ವಾರ್ಷಿಕ ₹ 8.7 ಲಕ್ಷ ಮಾತ್ರ ಪಡೆಯುತ್ತಿದೆ.


ಅರ್ಹರಲ್ಲದ ಗುತ್ತಿಗೆದಾರರಿಗೆ ಟೆಂಡರ್‌?

ಟೆಂಡರ್‌ ನಿಯಮಗಳ ಪ್ರಕಾರ, ಬಿಡ್‌ದಾರರು ಕನಿಷ್ಠ ನಾಲ್ಕು ಪ್ರೆಷರ್‌ಜೆಟ್‌ ಕ್ಲೀನರ್‌ ಯಂತ್ರಗಳನ್ನು ಈ ಹಿಂದೆ ಸರಬರಾಜು ಮಾಡಿರಬೇಕು. ಗುತ್ತಿಗೆದಾರ ಎ.ಎಲ್‌.ಸತೀಶ್‌ ಕುಮಾರ್‌ ಒಂದೂ ಯಂತ್ರವನ್ನೂ ಯಾರಿಗೂ ಸರಬರಾಜು ಮಾಡಿಲ್ಲ, ನಿರ್ವಹಣೆಯನ್ನೂ ಮಾಡಿಲ್ಲ. ಅವರು ‘ಕ್ವಾಲಿಟಿ ಎನ್‌ವಿರೊ ಎಂಜಿನಿಯರ್ಸ್‌’ ಸಂಸ್ಥೆಯಿಂದ ಈ ಯಂತ್ರಗಳನ್ನು ಖರೀದಿಸುತ್ತಿದ್ದಾರಷ್ಟೇ. ಈ ಸಂಸ್ಥೆ ದೆಹಲಿಯ ಪಾಲಿಕೆಗೆ ಈ ಯಂತ್ರವನ್ನು ಪೂರೈಸಿರುವ ಅನುಭವವನ್ನೇ ಬಿಡ್‌ದಾರರ ಅರ್ಹತೆ ಎಂದು ಪರಿಗಣಿಸಿರುವುದು ಸರಿಯಲ್ಲ. ಪೂರ್ವಾನುಭವವಿಲ್ಲದ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಟೆಂಡರ್‌ ನಿಯಮಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಟೆಂಡರ್‌ನಲ್ಲಿ ಭಾಗವಹಿಸಲು ಬಿಡ್‌ದಾರರು ಈಚಿನ ಐದು ವರ್ಷಗಳಲ್ಲಿ ಕನಿಷ್ಠ ಮೂರು ವರ್ಷ ₹ 13.86 ಕೋಟಿ ವಾರ್ಷಿಕ ವಹಿವಾಟು ಹೊಂದಿರಬೇಕು. ಬಿಡ್‌ದಾರರು ಯಂತ್ರದ ಅಧಿಕೃತ ಮಾರಾಟಗಾರ/ ಪೂರೈಕೆದಾರ ಆಗಿದ್ದಲ್ಲಿ ಐದು ವರ್ಷಗಳಲ್ಲಿ ಕನಿಷ್ಠ ಮೂರು ವರ್ಷ ವಾರ್ಷಿಕ ವಹಿವಾಟು ₹ 6.93 ಕೋಟಿಗಿಂತ ಹೆಚ್ಚು ಇರಬೇಕು. ಎ.ಎಲ್‌.ಅನಿಲ್‌ ಕುಮಾರ್‌ ಅವರು ‘ಕ್ವಾಲಿಟಿ ಎನ್‌ವಿರೊ ಎಂಜಿನಿಯರ್ಸ್‌’ ಸಂಸ್ಥೆಯ ಅಧಿಕೃತ ಮಾರಾಟಗಾರ/ ಪೂರೈಕೆದಾರ ಅಲ್ಲ. 2015ರಿಂದ 2020ರ ಅವಧಿಯಲ್ಲಿ ಅವರ ವಾರ್ಷಿಕ ವಹಿವಾಟು ಒಂದು ಬಾರಿ ಮಾತ್ರ ₹ 13.86 ಕೋಟಿಗಿಂತ ಹೆಚ್ಚು ಇದೆ. ಅವರು ಸಂಸ್ಥೆಯಿಂದ ಪಡೆದಿದ್ದಾಗಿ ಸಲ್ಲಿಸಿರುವ ದಾಖಲೆ ತಿದ್ದಿರುವ ಸಂದೇಹವೂ ಇದೆ. ತನಿಖೆಯಾದರೆ ಸತ್ಯತಿಳಿಯಲಿದೆ‘ ಎಂದು ಮೂಲಗಳು ತಿಳಿಸಿವೆ.


ಅರ್ಹರಲ್ಲದ ಗುತ್ತಿಗೆದಾರರಿಗೆ ಟೆಂಡರ್‌?

ಟೆಂಡರ್‌ ನಿಯಮಗಳ ಪ್ರಕಾರ, ಬಿಡ್‌ದಾರರು ಕನಿಷ್ಠ ನಾಲ್ಕು ಪ್ರೆಷರ್‌ಜೆಟ್‌ ಕ್ಲೀನರ್‌ ಯಂತ್ರಗಳನ್ನು ಈ ಹಿಂದೆ ಸರಬರಾಜು ಮಾಡಿರಬೇಕು. ಗುತ್ತಿಗೆದಾರ ಎ.ಎಲ್‌.ಸತೀಶ್‌ ಕುಮಾರ್‌ ಒಂದೂ ಯಂತ್ರವನ್ನೂ ಯಾರಿಗೂ ಸರಬರಾಜು ಮಾಡಿಲ್ಲ, ನಿರ್ವಹಣೆಯನ್ನೂ ಮಾಡಿಲ್ಲ. ಅವರು ‘ಕ್ವಾಲಿಟಿ ಎನ್‌ವಿರೊ ಎಂಜಿನಿಯರ್ಸ್‌’ ಸಂಸ್ಥೆಯಿಂದ ಈ ಯಂತ್ರಗಳನ್ನು ಖರೀದಿಸುತ್ತಿದ್ದಾರಷ್ಟೇ.
ಈ ಸಂಸ್ಥೆ ದೆಹಲಿಯ ಪಾಲಿಕೆಗೆ ಈ ಯಂತ್ರವನ್ನು ಪೂರೈಸಿರುವ ಅನುಭವವನ್ನೇ ಬಿಡ್‌ದಾರರ ಅರ್ಹತೆ ಎಂದು ಪರಿಗಣಿಸಿರುವುದು ಸರಿಯಲ್ಲ. ಪೂರ್ವಾನುಭವವಿಲ್ಲದ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಟೆಂಡರ್‌ ನಿಯಮಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಟೆಂಡರ್‌ನಲ್ಲಿ ಭಾಗವಹಿಸಲು ಬಿಡ್‌ದಾರರು ಈಚಿನ ಐದು ವರ್ಷಗಳಲ್ಲಿ ಕನಿಷ್ಠ ಮೂರು ವರ್ಷ₹ 13.86 ಕೋಟಿ ವಾರ್ಷಿಕ ವಹಿವಾಟು ಹೊಂದಿರಬೇಕು. ಬಿಡ್‌ದಾರರು ಯಂತ್ರದ ಅಧಿಕೃತ ಮಾರಾಟಗಾರ/ ಪೂರೈಕೆದಾರ ಆಗಿದ್ದಲ್ಲಿ ಐದು ವರ್ಷಗಳಲ್ಲಿ ಕನಿಷ್ಠಮೂರು ವರ್ಷ ವಾರ್ಷಿಕ ವಹಿವಾಟು ₹ 6.93 ಕೋಟಿಗಿಂತ ಹೆಚ್ಚು ಇರಬೇಕು. ಎ.ಎಲ್‌.ಅನಿಲ್‌ ಕುಮಾರ್‌ ಅವರು ‘ಕ್ವಾಲಿಟಿ ಎನ್‌ವಿರೊಎಂಜಿನಿಯರ್ಸ್‌’ ಸಂಸ್ಥೆಯ ಅಧಿಕೃತ ಮಾರಾಟಗಾರ/ ಪೂರೈಕೆದಾರ ಅಲ್ಲ. 2015ರಿಂದ 2020ರ ಅವಧಿಯಲ್ಲಿ ಅವರ ವಾರ್ಷಿಕ ವಹಿವಾಟು ಒಂದು ಬಾರಿ ಮಾತ್ರ ₹ 13.86 ಕೋಟಿಗಿಂತ ಹೆಚ್ಚು ಇದೆ. ಅವರು ಸಂಸ್ಥೆಯಿಂದ ಪಡೆದಿದ್ದಾಗಿಸಲ್ಲಿಸಿರುವ ದಾಖಲೆ ತಿದ್ದಿರುವ ಸಂದೇಹವೂ ಇದೆ. ತನಿಖೆಯಾದರೆ ಸತ್ಯತಿಳಿಯಲಿದೆ‘ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT