ಮಂಗಳವಾರ, ಅಕ್ಟೋಬರ್ 22, 2019
26 °C
ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ಹೇಳಿಕೆ;

ಪ್ರವಾಹ- ಪರಿಹಾರ ಕಾರ್ಯಕ್ಕೆ ₹ 867 ಕೋಟಿ ಬಿಡುಗಡೆ

Published:
Updated:
Prajavani

ಬೆಳಗಾವಿ: ‘ಜಿಲ್ಲೆಯಲ್ಲಿ ನೆರೆ ಪರಿಹಾರ ಕಾಮಗಾರಿ ಕೈಗೊಳ್ಳಲು ಇದುವರೆಗೆ ₹ 867 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹದಿಂದ 872 ಗ್ರಾಮಗಳು ಬಾಧಿತವಾಗಿದ್ದವು. ಸುಮಾರು 1,12,702 ಕುಟುಂಬಗಳು ಸಂತ್ರಸ್ತವಾಗಿದ್ದವು. ಪರಿಹಾರ ಕಾರ್ಯಗಳಿಗಾಗಿ ₹ 167 ಕೋಟಿ, ಹಾನಿಗೊಳಗಾದ ಮನೆಗಳಿಗೆ ಪರಿಹಾರ ವಿತರಿಸಲು ₹ 500 ಕೋಟಿ ಹಾಗೂ ಮೂಲಭೂತ ಸೌಕರ್ಯಗಳ ದುರಸ್ತಿ ಕುರಿತು ₹ 200 ಕೋಟಿ ಹೀಗೆ ಒಟ್ಟು ₹ 867 ಕೋಟಿ ಅನುದಾನವು ಬಿಡುಗಡೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಬಟ್ಟೆ ಹಾಗೂ ಗೃಹಬಳಕೆ ವಸ್ತುಗಳನ್ನು ಖರೀದಿಸಲು 1.12 ಲಕ್ಷ ಕುಟುಂಬಗಳಿಗೆ ತಲಾ ₹ 10 ಸಾವಿರದಂತೆ ಪರಿಹಾರ ಧನ ವಿತರಿಸಲಾಗಿದೆ. ಸಂತ್ರಸ್ತರಿಗೆ 10 ಕೆ.ಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ, 1 ಕೆ.ಜಿ ಸಕ್ಕರೆ, 1 ಕೆ.ಜಿ ಉಪ್ಪು, 1 ಲೀಟರ್ ಪಾಮ್ ಎಣ್ಣೆ, 5 ಲೀಟರ್ ಸೀಮೆ ಎಣ್ಣೆ ಒಳಗೊಂಡ ವಿಶೇಷ ಆಹಾರ ಕಿಟ್‍ಗಳನ್ನು 1,08,268 ಕುಟುಂಬಗಳಿಗೆ ವಿತರಿಸಲಾಗಿದೆ’ ಎಂದು ವಿವರಣೆ ನೀಡಿದ್ದಾರೆ.

‘ಜಿಲ್ಲೆಯಲ್ಲಿ ಒಟ್ಟು 69,381 ಮನೆಗಳು ಹಾನಿಗೊಳಗಾಗಿವೆ. ಅವುಗಳಲ್ಲಿ ದಾಖಲೆ ಸರಿ ಇರುವ 57,432 ಮನೆಗಳ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ತಂತ್ರಾಂಶದಲ್ಲಿ ದಾಖಲಿಸಿದ ಮನೆಗಳ ಪೈಕಿ ದಾಖಲೆ ಸರಿ ಇರುವ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಮೊದಲ ಕಂತಾಗಿ ₹ 1 ಲಕ್ಷ ಹಾಗೂ ಭಾಗಶ: ಹಾನಿಗೊಳಗಾದ ಮನೆಗಳಿಗೆ ಮೊದಲ ಕಂತಾಗಿ ₹ 25 ಸಾವಿರ ಮತ್ತು ಅಲ್ಪಸ್ವಲ್ಪ ಹಾನಿಗೊಳಗಾದ ಮನೆಗಳಿಗೆ ಪೂರ್ಣ ಪರಿಹಾರವಾಗಿ ₹ 25 ಸಾವಿರಗಳಂತೆ ಒಟ್ಟು 25,072 ಮನೆಗಳಿಗೆ ₹ 78.87 ಕೋಟಿ ಪರಿಹಾರ ಧನವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಈ ಎಲ್ಲ ಮನೆಗಳ ಪುನರ್ ನಿರ್ಮಾಣ ಹಾಗೂ ದುರಸ್ತಿಗಾಗಿ ಈಗಾಗಲೇ ಕ್ರಮಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ. 

‘ಇನ್ನುಳಿದ ಫಲಾನುಭವಿಗಳ ದಾಖಲೆ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದ್ದು, ದಾಖಲೆ ಸರಿಯಿರುವ ಫಲಾನುಭವಿಗಳಿಗೆ ಪರಿಹಾರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಹಾನಿಗೊಳಗಾದ ಮನೆಗಳ ಮೇಲಿನ ಎಲ್ಲ ಮಾಹಿತಿ ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ಬೆಂಗಳೂರು ಇವರ ವೆಬ್‍ಸೈಟ್‌ ವಿಳಾಸ: ashraya.karnataka.gov.in ನಲ್ಲಿ ಲಭ್ಯವಿದೆ’.

‘ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ 6.99 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ ಪ್ರವಾಹದಿಂದ ಹಾಗೂ ಅತಿವೃಷ್ಟಿಯಿಂದ 2.21 ಲಕ್ಷ ಹೆಕ್ಷೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆಗೆ ಹಾನಿಯಾಗಿದೆ. ಈ ಹಾನಿಯ ಜಂಟಿ ಸಮೀಕ್ಷೆ ಪೂರ್ಣಗೊಂಡಿದೆ. ವರದಿಯನ್ನು ಶೀಘ್ರದಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)