ಭಾನುವಾರ, ಆಗಸ್ಟ್ 18, 2019
21 °C
ಕ್ಷಯ ನಿವಾರಣೆಗೆ ಅಪೌಷ್ಟಿಕತೆ ಸವಾಲು: ಅಧಿಕಾರಿಗಳ ಮಾಹಿತಿ

6 ತಿಂಗಳಲ್ಲಿ 207 ಮಂದಿಗೆ ಹಾವು ಕಡಿತ!

Published:
Updated:
Prajavani

ಬೆಳಗಾವಿ: ಜಿಲ್ಲೆಯಲ್ಲಿ ಜನವರಿಯಿಂದ ಜುಲೈವರೆಗೆ 207 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಮೃತರಾಗಿದ್ದಾರೆ. ಹಾವು ಕಡಿತ ‍ಪ್ರಕರಣಗಳು ಹೆಚ್ಚಾಗುತ್ತಿವೆ.

– ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಇದು.

ದಿಗ್ಭ್ರಮೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ‘ಹಾವು ಕಡಿತ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚುಚ್ಚುಮದ್ದು  ಮತ್ತು ಔಷಧಿ ದಾಸ್ತಾನು ಇಟ್ಟುಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಹಾವು ಕಚ್ಚಿದರೆ, ಜಿಲ್ಲಾಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಚಿಕಿತ್ಸೆ ಲಭ್ಯವಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಿಲ್ಲ. ಒಂದು ವೇಳೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದಿದ್ದರೆ 108 ಆಂಬ್ಯುಲೆನ್ಸ್ ಮೂಲಕ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಬರಬೇಕು’ ಎಂದು ಸಲಹೆ ನೀಡಿದರು.

ಮಕ್ಕಳ ಮೇಲೆ ಬೀದಿನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತ‍‍ಪಡಿಸಿದ ಅವರು, ‘ನಾಯಿಗಳ ಉಪಟಳ ನಿಯಂತ್ರಣಕ್ಕೆ ಪಾಲಿಕೆಯವರು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ಆಪ್ತಸಮಾಲೋಚನೆ ನಡೆಸಿ:

‘ಕ್ಷಯ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಜೊತೆಗೆ ಆಪ್ತಸಮಾಲೋಚನೆ ನಡೆಸಬೇಕು. ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಯಶಸ್ವಿಗೊಳಿಸಬೇಕು. ಜಾಗೃತಿ ಮೂಡಿಸಬೇಕು. ಗುಣಮುಖರಾಗಲು 6 ತಿಂಗಳು ನಿರಂತರ ಚಿಕಿತ್ಸೆ ಕೊಡಬೇಕಿರುವುದರಿಂದ, ಕುಟುಂಬದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ತಿಳಿಸಿದರು.

‘ಅಪೌಷ್ಟಿಕತೆ, ಎಚ್‌ಐವಿ ಹಾಗೂ ಮಧುಮೇಹ ಸಮಸ್ಯೆಗಳು ಕ್ಷಯ ರೋಗ ನಿವಾರಣೆಗೆ ದೊಡ್ಡ ಸವಾಲಾಗಿವೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಅನಧಿಕೃತವಾಗಿ ತಂಬಾಕು ಮಾರುವುದನ್ನು ನಿಯಂತ್ರಿಸಬೇಕು. ಶಾಲೆ ಆವರಣದ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಕಂಡುಬಂದರೆ ಕ್ರಮ ಕೈಗೊಳ್ಳಬೇಕು. ಶಾಲೆಯಲ್ಲಿ ಯಾವುದೇ ಖಾಸಗಿ ಕಂಪನಿಯು ಯಾವುದೇ ತಿನಿಸುಗಳನ್ನು ಉಚಿತವಾಗಿ ಹಂಚುವುದಕ್ಕೂ ಅವಕಾಶ ಕೊಡಬಾರದು’ ಎಂದು ತಾಕೀತು ಮಾಡಿದರು.

ಮಂಗನ ಕಾಯಿಲೆ ತಡೆಯಿರಿ:

‘ಮಂಗನ ಕಾಯಿಲೆ ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯ ಔಷಧಿಗಳ ದಾಸ್ತಾನು ಇಟ್ಟುಕೊಳ್ಳಬೇಕು. ನೆರೆಯ ಗೋವಾದಲ್ಲಿ ಕಂಡುಬಂದಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ಖಾನಾಪುರ ತಾಲ್ಲೂಕಿನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ರೋಟಾ ವೈರಸ್‌ನಿಂದ ಉಲ್ಬಣಿಸುವ ಭೇದಿ ನಿಯಂತ್ರಣಕ್ಕೆ ಲಸಿಕೆ ಅಭಿಯಾನವನ್ನು ಆಗಸ್ಟ್ 2ನೇ ವಾರದಿಂದ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಡಾ.ಐ.ಎಚ್. ಗಡಾದ ಮಾಹಿತಿ ನೀಡಿದರು.

‘ಸಂಶಯಾಸ್ಪದ ಡೆಂಗಿ ಪ್ರಕರಣದಲ್ಲಿ ಕಳೆದ ತಿಂಗಳು ಇಬ್ಬರು ಸಾವಿಗೀಡಾದ ಬಗ್ಗೆ ವರದಿಯಾಗಿದೆ. ಇದು ದೃಢಪಟ್ಟಿಲ್ಲ. ವರದಿ ನಿರೀಕ್ಷಿಸಲಾಗಿದೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಎಸ್. ಪಲ್ಲೇದ ತಿಳಿಸಿದರು.

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಡಿಎಚ್ಒ ಡಾ.ಎಸ್.ವಿ. ಮುನ್ಯಾಳ, ಆರ್‌ಟಿಒ ಶಿವಾನಂದ ಮಗದುಮ್, ತಹಶೀಲ್ದಾರ್‌ ಮಂಜುಳಾ ನಾಯಕ, ಡಾ.ಎನ್‌.ಬಿ. ತುಕ್ಕಾರ ಇದ್ದರು.

Post Comments (+)