ಮೂವರ ಬಂಧನ; ₹ 20 ಲಕ್ಷ ಮೌಲ್ಯದ ಅಫೀಮು ವಶ

ಬೆಳಗಾವಿ: ತಾಲ್ಲೂಕಿನ ಹೊನಗಾದ ಪಿ.ಬಿ. ರಸ್ತೆಯ ಧಾಬಾವೊಂದರ ಪಾನ್‌ಶಾಪ್ ಮತ್ತು ಚನ್ನಮ್ಮ ನಗರದಲ್ಲಿ ದಾಳಿ ನಡೆಸಿದ ಸಿಇಎನ್ ಅಪರಾಧ ಠಾಣೆ ಪೊಲೀಸರು, ಮಾದಕ ಪದಾರ್ಥ ಅಫೀಮನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ.
‘ಪಾನ್ ಶಾಪ್ ಇಟ್ಟುಕೊಂಡಿದ್ದ ತಾಲ್ಲೂಕಿನ ಜೋಗಾನಟ್ಟಿ ಗ್ರಾಮದ ಬರಖತ್‌ಖಾನ್ ವಿಲ್ಲಾಖಾನ್ (30), ಚನ್ನಮ್ಮ ನಗರದ ಸರವನ್ ಅಲಿಯಾಸ್ ಸಾವರಾರಾಮ (21) ಹಾಗೂ ಹುಬ್ಬಳ್ಳಿಯ ಮೊರಾರ್ಜಿ ನಗರದ ಗೋಕುಲ ರಸ್ತೆಯ ಕಮಲೇಶ ಬೇನಿವಾ (25) ಬಂಧಿತರು. ಅವರಿಂದ 1 ಕೆ.ಜಿ. 15 ಗ್ರಾಂ. ತೂಕದ ಅಫೀಮು ವಶಪಡಿಸಿಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಬೆಲೆ ಸುಮಾರು ₹ 20 ಲಕ್ಷ ಆಗುತ್ತದೆ’ ಎಂದು ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಪತ್ರಕರ್ತರಿಗೆ ತಿಳಿಸಿದರು.
‘ಸಿಇಎನ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ. ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಬಿ.ಆರ್. ಗಡ್ಡೇಕರ, ಅಧಿಕಾರಿಗಳು ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದಾರೆ. ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ’ ಎಂದು ಡಿಸಿಪಿ ವಿಕ್ರಂ ಅಮಟೆ ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.