ಭಾನುವಾರ, ನವೆಂಬರ್ 28, 2021
21 °C

ಎಸಿಬಿ ದಾಳಿ: ಲೈನ್ ಮೆಕ್ಯಾನಿಕ್ ಬಳಿ ಕಾರು, ಮನೆ ಸಹಿತ 1.8 ಕೋಟಿಗೂ ಮಿಕ್ಕ ಆಸ್ತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ/ ಬೈಲಹೊಂಗಲ/ ಗೋಕಾಕ: ಆದಾಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಗಳಿಸಿರುವ ಆರೋಪದ ಮೇಲೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮೂವರು ನೌಕರರ ಮನೆ, ಕಚೇರಿ ಹಾಗೂ ಅವರ ನಿಕಟವರ್ತಿಗಳ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದವರು ಬುಧವಾರ ಬೆಳಿಗ್ಗೆಯಿಂದ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸರಾಸರಿ ಶೇ 190ಕ್ಕೂ ಹೆಚ್ಚು ಅಕ್ರಮ ಸಂಪತ್ತು ಹೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ.

ಬೆಳಗಾವಿ ನಗರ, ಬೈಲಹೊಂಗಲ, ಗೋಕಾಕದಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಇಲ್ಲಿನ ಹೆಸ್ಕಾಂ‌ನ ಮಹಾಂತೇಶ ನಗರ ಶಾಖೆ ನಂ.4ರ ಲೈನ್ ಮೆಕ್ಯಾನಿಕ್ ಗ್ರೇಡ್‌–2 ನಾಥಾಜಿ ಪಾಟೀಲ, ರಾಯಬಾಗದ ಎಆರ್‌ಸಿಎಸ್‌ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಅಡವಿಸಿದ್ದೇಶ್ವರ ಕರೆಪ್ಪ ಮಸ್ತಿ, ಗೋಕಾಕದ ಎಆರ್‌ಟಿಒದ ಹಿರಿಯ ಮೋಟಾರು ವಾಹನ ಇನ್‌ಸ್ಪೆಕ್ಟರ್‌ ಸದಾಶಿವ ಮರಲಿಂಗಣ್ಣವರ ನಿವಾಸದಲ್ಲಿ ಶೋಧ ನಡೆದಿದೆ. ಈ ಮೂವರಿಗೆ ಸಂಬಂಧಿಸಿದ ಒಟ್ಟು 12 ಸ್ಥಳಗಳಲ್ಲಿ ಪ್ರಕ್ರಿಯೆ ಜರುಗಿದೆ.

ಎಸ್ಪಿ, ಐವರು ಡಿವೈಎಸ್‌ಪಿ, 13 ಇನ್ಸ್‌ಪೆಕ್ಟರ್‌ಗಳು ಮತ್ತು 51 ಸಿಬ್ಬಂದಿ ನಡೆಸಿದ ದೊಡ್ಡ ದಾಳಿ ಇದಾಗಿದೆ. ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಥಾಜಿ ಪಾಟೀಲ ಅವರ ವೈಭವ ನಗರದ ಮನೆ, ಪತ್ನಿ ತಮ್ಮ ವಾಸಿಸುವ ಕಂಗ್ರಾಳಿ ಬಿ.ಕೆ. ಗ್ರಾಮದ ಮರಾಠಾ ಕಾಲೊನಿಯ ಮನೆ ಹಾಗೂ ಶ್ರೀನಗರ ಹೆಸ್ಕಾಂ ಶಾಖೆಯ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. 

ಬಿ.ಕೆ. ಕಂಗ್ರಾಳಿಯ ಮನೆ, 2 ಪ್ಲಾಟ್, ನಿರ್ಮಾಣ ಹಂತದಲ್ಲಿರುವ 2 ಮನೆ, ಕಾರು, ದ್ವಿಚಕ್ರವಾಹನ, ₹ 10.80 ಲಕ್ಷ ಮೌಲ್ಯದ 239.670 ಗ್ರಾಂ. ಬಂಗಾರ, ₹ 1.18 ಲಕ್ಷ ಮೌಲ್ಯದ 1,803 ಗ್ರಾಂ. ಬೆಳ್ಳಿ ಆಭರಣಗಳು, ₹ 20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, ₹ 38,766 ನಗದು ಪತ್ತೆಯಾಗಿದೆ. ಬಲ್ಲ ಮೂಲಗಳಿಗಿಂತ ಒಟ್ಟು ₹ 1.83 ಕೋಟಿ (ಶೇ.141ರಷ್ಟು) ಮೌಲ್ಯದ ಹೆಚ್ಚಿನ ಅಕ್ರಮ ಸಂಪತ್ತು ಕಂಡುಬಂದಿದೆ. 2 ವಿದೇಶಿ ನೋಟುಗಳು ಸಿಕ್ಕಿವೆ ಎಂದು ಎಸಿಬಿ ಮೂಲಗಳು ಮಾಹಿತಿ ನೀಡಿವೆ.

ಸದಾಶಿವ ಮರಲಿಂಗಣ್ಣವರ ಅವರ ಗೋಕಾಕದ ವಿವೇಕಾನಂದ ನಗರದ ಮನೆ, ಕಚೇರಿ, ಇಲ್ಲಿನ ರಾಮತೀರ್ಥ ನಗರದ ಮನೆ, ರಾಮದುರ್ಗ ತಾಲ್ಲೂಕಿನ ಕುಳ್ಳೂರ ಗ್ರಾಮದ ಮನೆ, ಅವರ ಹೋದರ ವಾಸವಿರುವ ಮುಧೋಳದಲ್ಲಿರುವ ಮನೆ, ಅವರ ಸಂಬಂಧಿಕರು ವಾಸವಿರುವ ಗೋಕಾಕ ತಾಲ್ಲೂಕಿನ ಕಲ್ಲೋಳಿಯ  ಮನೆ ಮೇಲೆ ದಾಳಿ ನಡೆದಿದೆ.

ರಾಮದುರ್ಗ ತಾಲ್ಲೂಕಿನ ಕುಳ್ಳೂರ ಹುಲಿಕಟ್ಟಿ ಗ್ರಾಮದಲ್ಲಿ 22 ಎಕರೆ ಕೃಷಿ ಜಮೀನು, ಬೆಳಗಾವಿಯಲ್ಲಿ ಒಂದು ಮನೆ, ₹ 31 ಲಕ್ಷ ಮೌಲ್ಯದ 2 ಕಾರು, ₹ 50 ಲಕ್ಷ ಮೌಲ್ಯದ 1 ಕೆ.ಜಿ. 135 ಗ್ರಾಂ. ಬಂಗಾರ ಮತ್ತು 200 ಗ್ರಾಂ. ಬೆಳ್ಳಿ ಆಭರಣಗಳು, ₹ 5 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, ₹ 8.22 ಲಕ್ಷ ನಗದು ದೊರೆತಿದೆ. ಒಟ್ಟು 1.87 ಕೋಟಿ (ಶೇ.190.81ರಷ್ಟು) ಮೌಲ್ಯದ ಹೆಚ್ಚಿನ ಅಕ್ರಮ ಸಂಪತ್ತು ಪತ್ತೆಯಾಗಿದೆ.

ಅಡವಿಸಿದ್ದೇಶ್ವರ ಮಸ್ತಿ ಅವರ ಬೈಲಹೊಂಗಲದ ಮೃತ್ಯುಂಜಯ ನಗರದ ಮನೆ, ಅವರ ಸ್ನೇಹಿತನ ಶಿವಾನಂದ ಭಾರತಿ ನಗರದ ಮನೆ, ರಾಯಬಾಗದ ಸಹಕಾರಿ ಅಭಿವೃದ್ಧಿ ಅಧಿಕಾರಿ ಕಚೇರಿ ಮೇಲೆ ದಾಳಿ ಅಧಿಕಾರಿಗಳು ನಡೆಸಿದ್ದಾರೆ.

ಬೈಲಹೊಂಗಲದಲಿ ₹ 66 ಲಕ್ಷ ಮೌಲ್ಯದ 2 ಮನೆ, ₹ 20 ಲಕ್ಷ ಮೌಲ್ಯದ ನಿರ್ಮಾಣದ ಹಂತದಲ್ಲಿರುವ 2 ಮನೆ, ₹ 44.13 ಲಕ್ಷ ಮೌಲ್ಯದ 4 ನಿವೇಶನಗಳು (₹ 1.30 ಕೋಟಿ ಮೌಲ್ಯ), ₹ 11.58 ಲಕ್ಷ ಮೌಲ್ಯದ 263 ಗ್ರಾಂ. ಬಂಗಾರದ ಆಭರಣಗಳು, ₹ 27,988ಸಾವಿರ ಮೌಲ್ಯದ ಬೆಳ್ಳಿ ಆಭರಣಗಳು, ₹ 5 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, ₹ 1.10 ಲಕ್ಷ ನಗದು, ₹ 4.45 ಲಕ್ಷ ಮೌಲ್ಯದ 6 ದ್ವಿಚಕ್ರವಾಹನಗಳು, ₹ 20.70 ಲಕ್ಷ ರೂ ಮೌಲ್ಯದ 4 ಕಾರುಗಳು ಪತ್ತೆಯಾಗಿವೆ. 1.24 ಕೋಟಿ (ಶೇ.191.91ರಷ್ಟು) ಮೌಲ್ಯದ ಹೆಚ್ಚಿನ ಅಕ್ರಮ ಸಂಪತ್ತು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ಎಸ್ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಗೋಕಾಕದಲ್ಲಿ ಡಿಎಎಸ್ಪಿ ಕರುಣಾಕರ ಶೆಟ್ಟಿ, ವಿಜಯಪುರ ಡಿಎಎಸ್ಪಿ ಮಂಜುನಾಥ ಗಂಗಲ್, ರಾಯಚೂರು ಡಿಎಸ್‌ಪಿ ವಿಜಯಕುಮಾರ, ಇನ್‌ಸ್ಪೆಕ್ಟರ್‌ಗಳಾದ ಮುಕರ್ತಿಹಾಳ, ಪರಮೇಶ್ವರ ಕವಟಗಿ, ವೀರಭದ್ರ ಕಡಿ, ಚಂದ್ರಕಲಾ ಹೊಸಮನಿ, ಸಮೀರ ಮುಲ್ಲಾ, ಬೈಲಹೊಂಗಲದಲ್ಲಿ ಗದಗ ಡಿಎಸ್ಪಿ ಮಲ್ಲಾಪುರ, ಇನ್‌ಸ್ಪೆಕ್ಟರ್‌ಗಳಾದ ಅಡಿವೇಶ ಗುದಿಗೊಪ್ಪ, ಈರಣ್ಣ ಹಳ್ಳಿ, ಪ್ರದೀಪ ತಳಕೇರಿ, ಬೆಳಗಾವಿಯಲ್ಲಿ ಬಾಗಲಕೋಟೆ ಡಿಎಸ್ಪಿ ಸುರೇಶ ರೆಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಸುನೀಲಕುಮಾರ, ವಿಜಯ ಮಠಪತಿ, ಅಲಿ ಶೇಖ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು