ಶುಕ್ರವಾರ, ಏಪ್ರಿಲ್ 16, 2021
31 °C

ಬೆಳಗಾವಿ: ಎಂಜಿನಿಯರ್‌ ಮನೆ ಮೇಲೆ ಎಸಿಬಿ ದಾಳಿ, ಕಂತೆ ಕಂತೆ ನೋಟು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕಾಮಗಾರಿಯ ಬಿಲ್ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಇಲ್ಲಿನ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಕಚೇರಿಯ ಮುಖ್ಯ ಎಂಜಿನಿಯರ್‌ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಗುರುವಾರ ಬಿದ್ದಿದ್ದಾರೆ.

ಸಿದ್ದನಾಯ್ಕ ದೊಡ್ಡಬಸಪ್ಪ ಬಲೆಗೆ ಬಿದ್ದವರು. ಅವರು ಕಚೇರಿಯಲ್ಲಿ ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಲ್ಲೂಕಿನ ಗಣೇಶನಗರದ ನಿವಾಸಿ ಹಾಗೂ ಅಪೂರ್ವಾ ಕನ್ಸ್‌ಟ್ರಕ್ಷನ್‌ ಯೋಜನಾ ವ್ಯವಸ್ಥಾಪಕ ಸಂಜೀವಕುಮಾರ ನವಲಗುಂದ ದೂರು ನೀಡಿದ್ದರು. ‘ಕಂಪನಿಯಿಂದ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಿರ್ವಹಿಸಿದ ನಗರ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯ ಬಿಲ್‌ ಮಂಜೂರು ಮಾಡಲು ಸಿದ್ದನಾಯ್ಕ, ಹಿಂದಿನ ಬಿಲ್‌ನಲ್ಲಿ ಶೇ 0.5ರಷ್ಟು ಅಂದರೆ ₹60 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಆರೋಪಿಯು ಮನೆಯಲ್ಲಿ ₹60 ಸಾವಿರ ಲಂಚ ಪಡೆಯುವ ವೇಳೆ ಬಲೆಗೆ ಬೀಳಿಸಿದ್ದಾರೆ. ಅವರ ಮನೆಯಲ್ಲಿ ಶೋಧನೆ ನಡೆಸಿದಾಗ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ. ‘ಆರೋಪಿ ಮನೆಯಲ್ಲಿ ಒಟ್ಟು ₹23.56 ಲಕ್ಷ ಅಕ್ರಮ ನಗದು ಪತ್ತೆಯಾಗಿದೆ. ಅವರನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆ ಮುಂದುವರಿಸಲಾಗಿದೆ’ ಎಂದು ಉತ್ತರ ವಲಯದ ಎಸ್ಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.

ಎಸ್ಪಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೆ.ಎಂ. ಕರುಣಾಕರಶೆಟ್ಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್‌ಗಳಾದ ಎ.ಎಸ್. ಗುದಿಗೊಪ್ಪ, ಎಚ್‌. ಸುನೀಲ್‌ಕುಮಾರ್‌ ಹಾಗೂ ಸಿಬ್ಬಂದಿ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ... ವಿಧಾನಸಭೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು