ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಬಸ್- ಕ್ಯಾಂಟರ್ ಡಿಕ್ಕಿ, ಸೀಟಿನಡಿ ಕಾಲು ಸಿಲುಕಿ ಒದ್ದಾಡಿದ ವಿದ್ಯಾರ್ಥಿನಿ

Last Updated 20 ಆಗಸ್ಟ್ 2022, 6:37 IST
ಅಕ್ಷರ ಗಾತ್ರ

ಅಥಣಿ: ಕಾಲೇಜು ಬಸ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಪಿಯು ದ್ವಿತೀಯ ವರ್ಷದ ಕೆಲವು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಎಲ್ಲರನ್ನೂ ಪಟ್ಟಣದ ಬೇರೆಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಅಪಘಾತದ ರಭಸಕ್ಕೆ ಒಬ್ಬ ವಿದ್ಯಾರ್ಥಿನಿಯ ಕಾಲುಗಳು ಸೀಟಿನ ಕಬ್ಬಿಣದ ರಾಡ್ ಮಧ್ಯೆ ಸಿಲುಕಿಕೊಂಡವು. ಅಪಘಾತವಾಗಿ ಅರ್ಧ ತಾಸಿನವರೆಗೂ ಕಾಲು ತೆಗೆಯಲು ಸಾಧ್ಯವಾಗಲಿಲ್ಲ. ಎಲ್ಲ ಮಕ್ಕಳನ್ನು ಕೆಳಗಿಳಿಸಿದ ಮೇಲೆ ಕೆಲ ಯುವಕರು ಕಬ್ಬಿಣದ ರಾಡ್ ಅನ್ನೇ ಮಣಿಸಿದರು.

ಇಷ್ಟೆಲ್ಲ ಮಾಡುವವರೆಗೂ ವಿದ್ಯಾರ್ಥಿನಿ ತೀವ್ರ ನೋವಿನಿಂದ ಒದ್ದಾಡಿದರು. ನಡೆಯಲು ಆಗದ ಅವರನ್ನು ಜನ ಮುಂಗೈ ಮೇಲೆ ಎತ್ತಿಕೊಂಡು ಹೊರತಂದರು. ಆಂಬುಲೆನ್ಸ್ ಹತ್ತಿಸಲು ಇನ್ನೊಬ್ಬರು ನೆರವಾಗುವ ವೇಳೆ ವಿದ್ಯಾರ್ಥಿನಿಯ ತಲೆ ಮುಟ್ಟಿದರು. ಆಗ ತೀವ್ರ ನೋವಿನಿಂದ ವಿದ್ಯಾರ್ಥಿನಿ ಚೀರಿದರು. ಅವರ ತಲೆ, ಭುಜಕ್ಕೂ ಬಲವಾದ ಪೆಟ್ಟು ಬಿದ್ದಿದ್ದು ರಕ್ತ ಬಂದಿದ್ದು ನಂತರ ಗೊತ್ತಾಯಿತು.

ಕ್ಯಾಂಟರ್ ನಲ್ಲಿ ಚಾಲಕನ ಪಕ್ಕ ಕುಳಿತಿದ್ದ ಕ್ಲೀನರ್ ಕಾಲುಗಳೂ ಸಿಕ್ಕಿಕೊಂಡಿದ್ದರಿಂದ ಜನ ಸಹಾಯಕ್ಕೆ ಧಾವಿಸಿದರು.

ಅಪಘಾತದ ರಭಸಕ್ಕೆ ಬಸ್ಸಿನ ಎಲ್ಲ ಸೀಟುಗಳೂ ಕಿತ್ತುಬಿದ್ದವು. ವಿದ್ಯಾರ್ಥಿಗಳ ಬ್ಯಾಗ್, ಪುಸ್ತಕ, ಚಪ್ಪಲಿಗಳಿಗೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ರಕ್ತ ಅಂಟಿಕೊಂಡಿತು.

30 ಸೆಕೆಂಡುಗಳ ಸಾಕಾಗಿತ್ತು:ವಿದ್ಯಾರ್ಥಿಗಳು ಇದ್ದ ಬಸ್ ಕಾಲೇಜು ಕಾಂಪೌಂಡ್ ಒಳಗೆ ಹೋಗಲು ಕೇವಲ 3೦ ಸೆಕೆಂಡ್ ಸಮಯ ಬೇಕಾಗಿತ್ತು. ಕಾಲೇಜಿನಿಂದ ಕೂಗಳತೆ ದೂರದಲ್ಲಿ ಈ ಅಪಘಾತವಾಯಿತು.

ಬಸ್ ಹಾಗೂ ಪೈಪ್ ಗಳನ್ನು ತುಂಬಿದ್ದ ಕ್ಯಾಂಟರ್ ಮುಂಭಾಗಕ್ಕೆ ಡಿಕ್ಕಿಯಾಗಿದ್ದರಿಂದ ಚಾಲಕರು ಮೃತಪಟ್ಟರು. ತುಸು ಹಿಂದಕ್ಕೆ ಗುದ್ದಿದ್ದರೆ ಬಸ್ ಕಂದಕಕ್ಕೆ ಉರುಳಿ ಇನ್ನೂ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಇತ್ತು.

‘ಈ ಬಸ್ಸಿನಲ್ಲಿ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಪ್ರಯಾಣಿಸುತ್ತಿದ್ದರು’ ಎಂದು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದರು.

ಗಾಯಗೊಂಡ ಮಕ್ಕಳನ್ನು ಬೇರೆ ಬೇರೆ ಆಸ್ಪತ್ರೆಯಲ್ಲಿ ದಾಖಲಿಸಿದ್ದರಿಂದ ಯಾರ ಸ್ಥಿತಿ ಹೇಗಿದೆ ಎಂದ ಮಾಹಿತಿ ನಿಖರವಾಗಿ ಸಿಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT