ಶನಿವಾರ, ಜುಲೈ 2, 2022
25 °C
ಬಿಪಿಎಲ್‌ ಕಾರ್ಡ್‌ ಅಕ್ರಮವಾಗಿ ಪಡೆದಿರುವವರ ವಿರುದ್ಧ ಕ್ರಮ

ಸರ್ಕಾರಿ ನೌಕರರು, ಉಳ್ಳವರಿಗೆ ‘ದಂಡಾಸ್ತ್ರ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್‌) ನೀಡುವ ಪಡಿತರ ಚೀಟಿಗಳನ್ನು ಅನಧಿಕೃತವಾಗಿ ಪಡೆದು, ‘ಅನ್ನಭಾಗ್ಯ’ ಯೋಜನೆ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ದಂಡಾಸ್ತ್ರ ಪ್ರಯೋಗಿಸುತ್ತಿದ್ದಾರೆ.

2019ರಿಂದ ಮೇ 17ರವರೆಗೆ ಬರೋಬ್ಬರಿ 36,466 ಅನಧಿಕೃತ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ₹ 1,55,05,262 ದಂಡ ವಿಧಿಸಿ ಬಿಸಿ ಮುಟ್ಟಿಸಲಾಗಿದೆ.

ಸಚಿವ ಉಮೇಶ ಕತ್ತಿ ತವರಲ್ಲೇ ಸರ್ಕಾರಿ ನೌಕರರ ಹಾಗೂ ‘ಆರ್ಥಿಕವಾಗಿ ಸಬಲರಾದವರು’ ಕೂಡ ಬಿಪಿಎಲ್‌ ಕಾರ್ಡ್‌ ಪಡೆದು ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಬಳಸಿಕೊಂಡಿರುವುದು  ಪತ್ತೆಯಾಗುತ್ತಲೇ ಇದೆ. ಸಚಿವರ ಸೂಚನೆ ಮೇರೆಗೆ ಪತ್ತೆ ಕಾರ್ಯಾಚರಣೆ ನಡೆದಿದೆ.

ಮೌಲ್ಯ ಆಧರಿಸಿ:

ಎಚ್ಚರಿಕೆ ಹಿನ್ನೆಲೆಯಲ್ಲಿ, ಕೆಲವರು ತಾವು ಪಡೆದಿದ್ದ ಚೀಟಿಗಳನ್ನು ಇಲಾಖೆಗೆ ವಾಪಸ್ ಮಾಡಿದ್ದಾರೆ. ಅವರಲ್ಲಿ ಕೆಲವರಿಗೆ ಎಪಿಎಲ್‌ ಕಾರ್ಡ್‌ಗೆ ಪರಿವರ್ತಿಸಿ ನೀಡಲಾಗಿದೆ. ಕೋವಿಡ್ ಲಾಕ್‌ಡೌನ್‌ ಸಂಕಷ್ಟದ ಸಮಯದಲ್ಲಿ ಕಾರ್ಯಾಚರಣೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಳಿಕ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಕಾರ್ಡ್‌ ರದ್ದುಪಡಿಸುವ ಜೊತೆಗೆ ಈವರೆಗೆ ಪಡೆದಿರುವ ಪಡಿತರದ ಮೌಲ್ಯ ಆಧರಿಸಿ ದಂಡ ವಿಧಿಸಲಾಗುತ್ತಿದೆ.

ಶ್ರೀಮಂತರೂ ಸುಳ್ಳು ಮಾಹಿತಿ ನೀಡಿ ಪಡೆದಿರುವುದು ಬೆಳಕಿಗೆ ಬಂದಿದೆ. ಅಂಥವರು ಕೂಡಲೇ ಚೀಟಿಗಳನ್ನು ಮರಳಿಸಬೇಕು’ ಎಂದು ಸರ್ಕಾರ ಸೂಚಿಸಿತ್ತು. ಅನಧಿಕೃತವಾಗಿ ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದವರಲ್ಲಿ ಶಿಕ್ಷಕರು, ಪೊಲೀಸರು, ಹೆಸ್ಕಾಂ, ಸರ್ಕಾರದ ಇಲಾಖೆಗಳ ನೌಕರರು ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಗುರುತಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಅನರ್ಹರು ಬಿಪಿಎಲ್‌ ಚೀಟಿ ಪಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಗೋಕಾಕದಲ್ಲಿ ಹೆಚ್ಚು:

ರಾಯಬಾಗ, ರಾಮದುರ್ಗ ಹಾಗೂ ಗೋಕಾಕ ತಾಲ್ಲೂಕುಗಳಲ್ಲಿ ಹೆಚ್ಚಿನ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಖಾನಾಪುರ, ರಾಯಬಾಗ ಹಾಗೂ ಗೋಕಾಕ ತಾಲ್ಲೂಕುಗಳಲ್ಲಿ ಹೆಚ್ಚಿನ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

‘ಕೆ.ಜಿ. ಅಕ್ಕಿಗೆ ₹ 35ರಂತೆ ಸರ್ಕಾರ ಹಣ ಪಾವತಿಸಿ ದುರ್ಬಲ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದೆ. ಈ ಯೋಜನೆಯ ಲಾಭವನ್ನು ಆರ್ಥಿಕವಾಗಿ ಸದೃಢವಾಗಿರುವ ಕೆಲವು ಕುಟುಂಬಗಳು ಸುಳ್ಳು ಮಾಹಿತಿ ನೀಡಿಯೋ, ಗೊತ್ತಿಲ್ಲದೆಯೋ ಪಡೆಯುತ್ತಿರುವುದು ಕಂಡುಬಂದಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಚನ್ನಬಸ‍ಪ್ಪ ಕೊಡ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಪತ್ತೆ ಹಚ್ಚಿದ ಅನರ್ಹರು, ಯಾವಾಗಿನಿಂದ ಎಷ್ಟು ಅಕ್ಕಿ ಸೇರಿದಂತೆ ಆಹಾರ ಧಾನ್ಯವನ್ನು ಪಡೆದಿದ್ದಾರೆ ಎನ್ನುವುದನ್ನು ಲೆಕ್ಕ ಹಾಕಿ, ಪ್ರಸಕ್ತ ಮಾರುಕಟ್ಟೆ ದರದಂತೆ (ಅಕ್ಕಿಗಾದರೆ ಕೆ.ಜಿ.ಗೆ ₹ 23 ಇದೆ) ದಂಡ ವಿಧಿಸಲಾಗುತ್ತಿದೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಲೂ ಅವಕಾಶವಿದೆ. ಈವರೆಗೆ ಅನರ್ಹರಿಗೆ ಗರಿಷ್ಠ ₹ 40ಸಾವಿರದಿಂದ ₹ 45ಸಾವಿರ ದಂಡ ವಿಧಿಸಿದ ಉದಾಹರಣೆಯೂ ಇದೆ’ ಎಂದು ಮಾಹಿತಿ ನೀಡಿದರು.

‘2022ರಲ್ಲಿ ಈವರೆಗೆ 2,599 ಅನರ್ಹ ಚೀಟಿಗಳನ್ನು ರದ್ದುಪಡಿಸಿ ₹ 1.10 ಕೋಟಿ ದಂಡ ವಸೂಲಿ ಮಾಡಲಾಗಿದೆ. ಈ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ. ಈ ಮೂಲಕ ಇತರರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗುತ್ತಿದೆ. ಸರ್ಕಾರದ ಸೌಲಭ್ಯ ದುರ್ಬಳಕೆ ಸರಿಯಲ್ಲ ಎಂದು ತಿಳಿಸಲಾಗುತ್ತಿದೆ. ಈ ಕಾರ್ಯಾಚರಣೆಯಲ್ಲಿ ಜಿಲ್ಲೆ ಮುಂದಿದೆ. ಅನರ್ಹವಾಗಿ ಚೀಟಿ ಪಡೆದವರಲ್ಲಿ ಬಹುತೇಕರು ಸರ್ಕಾರಿ ನೌಕರರೇ ಇದ್ದಾರೆ’ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು