ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಟ್ಯೂಬ್ ಚಾನೆಲ್‌ ವಿರುದ್ಧ ಕ್ರಮ

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ
Last Updated 19 ಡಿಸೆಂಬರ್ 2019, 12:28 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಅನೇಕ ಕಡೆಗಳಲ್ಲಿ ಯೂಟ್ಯೂಬ್ ಚಾನೆಲ್‌ಗಳ ಹಾವಳಿ ಹೆಚ್ಚಾಗಿದ್ದು, ಅನಧಿಕೃತವಾಗಿ ಸುದ್ದಿ ಪ್ರಸಾರ ಮಾಡಿ ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.

ಗುರುವಾರ ನಡೆದ ಜಿಲ್ಲಾಮಟ್ಟದ ಕೇಬಲ್ ಟಿವಿ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆಲವರು ಉಪಗ್ರಹ ಚಾನೆಲ್‌ಗಳ ಮಾದರಿಯಲ್ಲಿ ಲೋಗೊ ತಂದು ಸರ್ಕಾರಿ ಕಚೇರಿಗಳಿಗೆ ಮತ್ತು ಸಭೆ, ಸಮಾರಂಭಗಳಿಗೆ ಹಾಜರಾಗುತ್ತಿದ್ದಾರೆ. ಇಂತಹ ಅನಧಿಕೃತ ಚಾನೆಲ್‌ಗಳ ಮೇಲೆ ನಿಗಾ ಇರಿಸಲಾಗಿದೆ’ ಎಂದರು.

‘ಕೇಬಲ್ ಟಿವಿ ನೆಟ್ ವರ್ಕ್(ರೆಗ್ಯುಲೇಷನ್) ಕಾಯ್ದೆ–1995ರ ಪ್ರಕಾರ ಸ್ಥಳೀಯ ಕೇಬಲ್ ಆಪರೇಟರ್ ಮತ್ತು ಮಲ್ಟಿ ಸಿಸ್ಟಂ ಆಪರೇಟರ್‌ಗಳು ಡಿಡಿ ಚಂದನ, ಲೋಕಸಭಾ ಮತ್ತು ರಾಜ್ಯಸಭಾ ಚಾನೆಲ್ ಸೇರಿದಂತೆ ದೂರದರ್ಶನದ ಒಟ್ಟು 27 ಚಾನೆಲ್‌ಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು’ ಎಂದು ಸೂಚಿಸಿದರು.

‘ಕಡ್ಡಾಯ ಚಾನೆಲ್‌ಗಳನ್ನು ಪ್ರಸಾರ ಮಾಡದವರಿಗೆ ತಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಕಾರಣ ಕೇಳಿ ಕೂಡಲೇ ನೋಟಿಸ್ ಜಾರಿಗೊಳಿಸಬೇಕು. ಮತ್ತೆ ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಅಂತಹ ಆಪರೇಟರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಉಪ ವಿಭಾಗಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದೂರು ಬಂದರೆ ಕ್ರಮ:ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ‘ಕೇಬಲ್ ಟಿವಿ ನೆಟ್‌ವರ್ಕ್(ರೆಗ್ಯುಲೇಷನ್) ಕಾಯ್ದೆ ಪಾಲನೆ ಮತ್ತು ಅನಧಿಕೃತ ಯೂಟ್ಯೂಬ್ ಚಾನೆಲ್ ಮೇಲೆ ನಿಗಾ ವಹಿಸಲಾಗುತ್ತಿದೆ. ಸಾರ್ವಜನಿಕರಿಂದ ದೂರುಗಳು ಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ದೂರದರ್ಶನ ಕೇಂದ್ರದ ಪ್ರಭಾರ ಉಪ ನಿರ್ದೇಶಕ ವೆಂಕಟೇಶ ದೇಶಪಾಂಡೆ ನಿಯಮಾವಳಿ ಮಂಡಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ನಿರ್ವಹಿಸಿದರು.

ಸಮಿತಿ ಸದಸ್ಯರಾದ ಎಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಉಪ ವಿಭಾಗಾಧಿಕಾರಿ ಅಶೋಕ ತೇಲಿ, ಮಕ್ಕಳ ಸಹಾಯವಾಣಿ ಕೇಂದ್ರದ ಬಿ.ಒ. ತಿಪ್ಪೇಸ್ವಾಮಿ, ಮಹಿಳಾ ಕಲ್ಯಾಣ ಸಂಸ್ಥೆಯ ಸುರೇಖಾ ಪಾಟೀಲ, ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಸಿ.ಈಶ್ವರಚಂದ್ರ, ಬಿಮ್ಸ್ ಮನೋರೋಗ ವಿಭಾಗದ ಮುಖ್ಯಸ್ಥೆ ಡಾ.ಎನ್. ಸರಸ್ವತಿ, ಮಲ್ಟಿಸಿಸ್ಟಮ್ ಆಪರೇಟರ್‌ಗಳಾದ ರಾಜಶೇಖರ್ ಪಾಟೀಲ, ಅಶೋಕ ದೇವಡಕರ್, ಜೆ.ಬಿ. ಮೇಲಪ್ಪಗೋಳ, ಬಸವಪ್ರಭು ತಿಮ್ಮಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT