ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಗಣೇಶೋತ್ಸವ: ಮಹಾಪುರುಷರ ಪೋಸ್ಟರ್‌ಗೆ ಅನುಮತಿ ಕಡ್ಡಾಯ –ಅಲೋಕ್‌ಕುಮಾರ್‌

ಬೆಳಗಾವಿ ಗಣೇಶೋತ್ಸವ ಸಿದ್ಧತೆ ಪರಿಶೀಲನೆ
Last Updated 30 ಆಗಸ್ಟ್ 2022, 7:48 IST
ಅಕ್ಷರ ಗಾತ್ರ

ಬೆಳಗಾವಿ: ‘ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಯಾವುದೇ ಮಹಾಪುರುಷರು, ವ್ಯಕ್ತಿಗಳ ಪೋಸ್ಟರ್‌ ಹಾಕಲು ಆಯಾ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯುವುದು ಕಡ್ಡಾಯ’ ಎಂದು ಎಡಿಜಿಪಿ ಅಲೋಕ್‌ಕುಮಾರ್‌ ತಿಳಿಸಿದರು.

ಈ ಬಾರಿ ನಗರದಲ್ಲಿ ಅದ್ಧೂರಿ ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆದ ಹಿನ್ನೆಲೆಯಲ್ಲಿ, ಮಂಗಳವಾರ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಅವರು, ಮಧ್ಯಮಗಳೊಂದಿಗೆ ಮಾತನಾಡಿದರು.

‘ಮಂಟಪಗಳಲ್ಲಿ ವೀರ ಸಾವರ್ಕರ್‌ ಭಾವಚಿತ್ರ ಹಾಕುವಂತೆ ಕೆಲವರು ಅಭಿಯಾನ ನಡೆಸಿದ್ದಾರೆ. ಸಾವರ್ಕರ್‌, ನೆಹರೂ, ಬಾಲಗಂಗಾಧರ ತಿಲಕ್‌, ಭಗತ್‌ ಸಿಂಗ್‌ ಸೇರಿದಂತೆ ಯಾರೇ ಮಹಾಪುರುಷರ, ಸಮಾಜ ಸುಧಾರಕರ ಭಾವಚಿತ್ರ ಅಥವಾ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲು ಅನುಮತಿ ಪಡೆಯುವುದು ಕಡ್ಡಾಯ. ಖಾಸಗಿ ಸ್ಥಳಗಳಲ್ಲಿ ಯಾರು ಬೇಕಾದರೂ ತಮಗೆ ಬೇಕಾದ ಪೋಸ್ಟರ್‌ಗಳನ್ನು ಹಾಕಿಕೊಳ್ಳಬಹುದು. ಅದಕ್ಕೆ ಅನುಮತಿ ಅಗತ್ಯವಿಲ್ಲ’ ಎಂದರು.

‘ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಚತುರ್ಥಿಯನ್ನು ಸಂಕ್ಷಿಪ್ತವಾಗಿ ಆಚರಿಸಲಾಗಿದೆ. ಈ ಬಾರಿ ಎಲ್ಲರೂ ಅದ್ಧೂರಿ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಬೆಳಗಾವಿಯ ಗಣೇಶೋತ್ಸವ ದೇಶದಲ್ಲೇ ವಿಶೇಷತೆ ಪಡೆದಿದೆ. ಹೀಗಾಗಿ, ಅಗತ್ಯ ಭದ್ರತಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಪೊಲೀಸರು ಮಾರ್ಗ ಪರಿಶೀಲನೆ, ಪಂಟಪದ ಸ್ಥಳಗಳ ಭೇಟಿ, ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಶಾಂತಿ ಸಮಿತಿ ಸಭೆಗಳನ್ನು ನಡೆಸಿದ್ದಾರೆ. ಸುರಕ್ಷಿತ ಹಾಗೂ ಶಾಂತ ಹಬ್ಬಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದೇವೆ’ ಎಂದರು.

ಕ್ಷಿಪ್ರ ಕಾರ್ಯಪಡೆ ನಿಯೋಜನೆ:‘ಚತುರ್ಥಿಯ ಏಳನೇ ದಿನ ಹಾಗೂ 11ನೇ ದಿನ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಉತ್ಸವ ನೋಡಲು ಸಾಕಷ್ಟು ಜನ ಬರುತ್ತಾರೆ. ಹೀಗಾಗಿ, ಈ ಎರಡೂ ದಿನಗಳಂದು ಕ್ಷಿಪ್ರ ಕಾರ್ಯಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗುವುದು. ಮೆರವಣಿಗೆ ಮೇಲೆ ಡ್ರೋನ್‌ ಕಣ್ಗಾವಲು ಇಡಲಾಗುವುದು’ ಎಂದೂ ಎಡಿಜಿಪಿ ಹೇಳಿದರು.

‘ಆಗಸ್ಟ್‌ 31ರಿಂದ 11 ದಿನಗಳವರೆಗೆ ನಗರದಲ್ಲಿ ಉತ್ಸವ ನಡೆಯಲಿದೆ. ನಗರದ ಪ್ರಮುಖ ವೃತ್ತ, ಚೌಕ, ಜನನಿಬಿಡ ಸ್ಥಳ, ಮಾರುಕಟ್ಟೆ, ಮಂಟಪಗಳ ಸುತ್ತ ಬಿಗಿ ಪೊಲೀಸ್‌ ಭದ್ರತೆ ನಿಯೋಜಿಸಲಾಗುವುದು. ಹೆಚ್ಚುವರಿ ಪೊಲೀಸರನ್ನು ಪಕ್ಕದ ಜಿಲ್ಲೆಗಳಿಂದ ಕರೆಸಲಾಗುವುದು. ಗೃಹರಕ್ಷಕ ಸಿಬ್ಬಂದಿ, ಸ್ವಯಂ ಸೇವಕರನ್ನು ನಿಯೋಜಿಸಲಾಗುವುದು. ರಾತ್ರಿ ಗಸ್ತಿನಲ್ಲಿರುವ ಎಲ್ಲ ಸಿಬ್ಬಂದಿಗೆ ರಿಫ್ಲೆಕ್ಟರ್‌ ಜಾಕೆಟ್‌ ನೀಡಲಾಗುವುದು. ಇದರಿಂದ ಸಹಾಯ ಬೇಕಾದವರು ತಕ್ಷಣ ಸಂಪರ್ಕಿಸಲು ಸಾಧ್ಯವಾಗುತ್ತದೆ’ ಎಂದು ವಿವರಿಸಿದರು.

‘ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂ‌ಧಿಸಿದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರ ನೇತೃತ್ವದ ತಂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇದರ ಜಾಲ ಇನ್ನೂ ವಿಸ್ತರಿಸಿದ್ದು, ಎಲ್ಲರ ಬಂಧನ ಖಂಡಿತ. ಹಬ್ಬ ಮುಗಿದ ಬಳಿಕ ಮತ್ತಷ್ಟು ಕುಳಗಳು ಹೊರಬೀಳಲಿವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಹೆಚ್ಚುವರಿ ಎಸ್ಪಿ ಮಾನಿಂಗ ನಂದಗಾವಿ, ನಗರ ಪೊಲೀಸ್‌ ಆಯುಕ್ತ ಡಾ.ಬೋರಲಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT