ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ; 80,857 ವಿದ್ಯಾರ್ಥಿಗಳು ನೋಂದಣಿ

ಜುಲೈ 19ರಿಂದ ಆರಂಭ, ಕೋವಿಡ್ ಮಾರ್ಗಸೂಚಿ ಪಾಲನೆ: ಅಧಿಕಾರಿಗಳ ಹೇಳಿಕೆ
Last Updated 18 ಜುಲೈ 2021, 5:10 IST
ಅಕ್ಷರ ಗಾತ್ರ

ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ಜುಲೈ 19 ಹಾಗೂ 22ರಂದು ನಡೆಯಲಿದ್ದು, ಜಿಲ್ಲೆಯ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳೆರಡರಲ್ಲೂ ಪೂರ್ವ ಸಿದ್ಧತೆ ಅಂತಿಮಗೊಂಡಿದೆ. ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳ ಸ್ವಾಗತಕ್ಕಾಗಿ ಸಜ್ಜುಗೊಂಡಿವೆ.

ಕೋವಿಡ್ ಭೀತಿ ಮತ್ತು ಜಿಟಿಜಿಟಿ ಮಳೆಯ ನಡುವೆಯೇ ನಡೆಯುತ್ತಿರುವ ಪರೀಕ್ಷೆಗೆ 80,857 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಬೆಳಗಾವಿಯಲ್ಲಿ 35,308 ಹಾಗೂ ಚಿಕ್ಕೋಡಿಯಲ್ಲಿ 45,549 ಮಂದಿ ಇದ್ದಾರೆ. ಒಟ್ಟು 415 ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಣೆಗೆ 12,600 ಸಿಬ್ಬಂದಿ ನಿಯೋಜಿಸಲಾಗಿದೆ. 350 ವೈದ್ಯಕೀಯ ಸಿಬ್ಬಂದಿಯೂ ಕಾರ್ಯನಿರ್ವಹಿಸಲಿದ್ದಾರೆ. ಕೋವಿಡ್–19 ಮಾರ್ಗಸೂಚಿ ಅನ್ವಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭೌತಿಕವಾಗಿ:

ಬೆಳಿಗ್ಗೆ 10.30ರಿಂದ 11.30ರವರೆಗೆ ಪರೀಕ್ಷೆ ಇದೆ. ಮೊದಲ ದಿನವಾದ ಜುಲೈ 19ರಂದು ಗಣಿತ, ವಿಜ್ಞಾನ ಮತ್ತು ಸಮಾಜವಿಜ್ಞಾನ ವಿಷಯಗಳನ್ನು ಒಳಗೊಂಡು 120 ಅಂಕಗಳಿಗೆ ಪ್ರಶ್ನೆಪತ್ರಿಕೆ ಇರುತ್ತದೆ. 22ರಂದು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳನ್ನು ಒಳಗೊಂಡ ಪ್ರಶ್ನೆಪತ್ರಿಕೆ ಇರಲಿದೆ.

ಕೋವಿಡ್ ಕಾರಣದಿಂದ ಪರೀಕ್ಷೆಯನ್ನು ಸರಳೀಕರಣಗೊಳಿಸಿ, 2 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಆನ್‌ಲೈನ್‌ನಲ್ಲಿ ಪಾಠ ಕೇಳಿದ ವಿದ್ಯಾರ್ಥಿಗಳು ಭೌತಿಕ ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ. ಸ್ಮಾರ್ಟ್‌ ಮೊಬೈಲ್ ಫೋನ್‌ ವ್ಯವಸ್ಥೆ ಇಲ್ಲದವರಿಗೆ ಶಿಕ್ಷಕರೇ ಮನೆಗಳ ಬಳಿಗೆ ಹೋಗಿ ಪಾಠ ಹೇಳಿದ್ದಾರೆ. ಎಲ್ಲ ಪ್ರಯತ್ನದ ಫಲಿತಾಂಶ ಏನಾಗಿರಲಿದೆ ಎನ್ನುವುದು ಸೋಮವಾರ ಒಎಂಆರ್‌ ಶೀಟ್‌ಗಳಲ್ಲಿ ದಾಖಲಾಗಲಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ. ಸೋಂಕು ನಿವಾರಕ ದ್ರಾವಣವನ್ನೂ ಸಿಂಪಡಿಸಲಾಗಿದೆ. ಕೋವಿಡ್ ಲಸಿಕೆ ಪ‍ಡೆದ ಸಿಬ್ಬಂದಿಯನ್ನು ಆದ್ಯತೆ ಮೇಲೆ ನಿಯೋಜಿಸಲಾಗಿದೆ.

ಅಂತರ ಕಾಯ್ದುಕೊಳ್ಳಲು:

‘ಈ ಬಾರಿ ಬಹು ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆ ನಡೆಯುತ್ತಿದೆ. ಉತ್ತರ ಪತ್ರಿಕೆಯು ಒಎಂಆರ್‌ ಶೀಟ್ ರೂಪದಲ್ಲಿರುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೂಲಕ ಮನವರಿಕೆ ಮಾಡಿಕೊಡಲಾಗಿದೆ. ಹೊಸ ರೀತಿಯ ಪದ್ಧತಿಯ ಕುರಿತು ವ್ಯಾಪಕವಾಗಿ ಪ್ರಚಾರವನ್ನೂ ಮಾಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚುವರಿ ಕೇಂದ್ರಗಳನ್ನು ಗುರುತಿಸಿ ಸಜ್ಜುಗೊಳಿಸಲಾಗಿದೆ. ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಡೆಸ್ಕ್‌ಗೆ ಒಬ್ಬರಂತೆ ಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರ ಅವಕಾಶ ಇರುತ್ತದೆ’ ಎಂದು ಡಿಡಿಪಿಐಗಳಾದ ಆನಂದ ಪುಂಡಲೀಕ ಮತ್ತು ಗಜಾನನ ಮನ್ನಿಕೇರಿ ತಿಳಿಸಿದರು.

‘ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳಿಗೆ ಮಾಸ್ಕ್‌ ವಿತರಿಸಲಾಗುವುದು. ಕೇಂದ್ರಗಳ ಬಳಿ ಆರೋಗ್ಯ ತಪಾಸಣೆಗೂ ವ್ಯವಸ್ಥೆ ಮಾಡಲಾಗಿದೆ. ಜ್ವರ, ಶೀತ, ಕೆಮ್ಮ ಇದ್ದವರಿಗೆ ಪ್ರತ್ಯೇಕ ಕೊಠಡಿ ಸಜ್ಜುಗೊಳಿಸಲಾಗಿದೆ. ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದಾಗಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಬಂದು ಪರೀಕ್ಷೆ ಎದುರಿಸಿ ಉತ್ತಮ ಫಲಿತಾಂಶ ಗಳಿಸಲು ಪ್ರಯತ್ನಿಸಬೇಕು’ ಎಂದು ಧೈರ್ಯ ತುಂಬಿದರು.

ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಸ್‌ಗಳನ್ನು ಅವಲಂಬಿಸಿರುವವರು ಉಚಿತವಾಗಿ ಪ್ರಯಾಣಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅವಕಾಶ ನೀಡಿದೆ. ಕೋವಿಡ್ ಮತ್ತು ಡೆಲ್ಟಾ ಪ್ಲಸ್ ಪ್ರಕರಣಗಳು ಹೆಚ್ಚಿರುವ ಮಹಾರಾಷ್ಟ್ರದ ಗಡಿಯಲ್ಲಿನ ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಕಿ ಸಂಖ್ಯೆ

15

ಶೈಕ್ಷಣಿಕ ವಲಯಗಳು

415

ಪರೀಕ್ಷಾ ಕೇಂದ್ರಗಳು

12,600

ನಿಯೋಜಿತ ಸಿಬ್ಬಂದಿ

350

ನಿಯೋಜಿತ ವೈದ್ಯಕೀಯ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT