ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕ ಮತ ಎಣಿಕೆಗೆ ಸಕಲ ಸಿದ್ಧತೆ

Published 2 ಜೂನ್ 2024, 14:49 IST
Last Updated 2 ಜೂನ್ 2024, 14:49 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ಜೂನ್‌ 4ರಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪಾರದರ್ಶಕವಾಗಿ ಕೈಗೊಳ್ಳಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಆಯೋಗದ ನಿರ್ದೇಶನದಂತೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಅಂದು ಬೆಳಿಗ್ಗೆ 6ಕ್ಕೆ ವಿದ್ಯುನ್ಮಾನ ಮತಯಂತ್ರಗಳನ್ನು ಇರಿಸಿದ ಭದ್ರತಾ ಕೊಠಡಿಗಳನ್ನು ಅಭ್ಯರ್ಥಿಗಳು, ಚುನಾವಣೆ ಏಜೆಂಟರು ಹಾಗೂ ವೀಕ್ಷಕರ ಸಮ್ಮುಖದಲ್ಲಿ ತೆರೆಯಲಾಗುವುದು. 8ಕ್ಕೆ ಮತ ಎಣಿಕೆ ಆರಂಭಿಸಲಾಗುವುದು’ ಎಂದರು.

13.75 ಲಕ್ಷ ಮತಗಳ ಚಲಾವಣೆ:

‘ಬೆಳಗಾವಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ 19,23,788 ಮತದಾರರಿದ್ದಾರೆ. ಈ ಪೈಕಿ 13,75,283 (ಶೇ 71.49) ಮತಗಳ ಚಲಾವಣೆಯಾಗಿದೆ. ಈವರೆಗೆ 11,148 ಅಂಚೆ ಮತ ಬಂದಿವೆ. ಮಂಗಳವಾರ ಬೆಳಿಗ್ಗೆ 8ರ ವರೆಗೆ ಬರುವಅಂಚೆ ಮತಗಳನ್ನು ಎಣಿಕೆಗೆ ಪರಿಗಣಿಸಲಾಗುವುದು. ವಿದ್ಯುನ್ಮಾನ ಯಂತ್ರಗಳ ಮತ ಎಣಿಕೆಗೆ 8 ಕೊಠಡಿಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಅಂಚೆ ಮತಗಳ ಎಣಿಕೆಗೆ ಎರಡು ಪ್ರತ್ಯೇಕ ಕೊಠಡಿ ಸ್ಥಾಪಿಸಲಾಗಿದೆ’ ಎಂದರು.

‘ಪ್ರತಿ ಕೊಠಡಿಯ 14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ. ಮೇಲ್ವಿಚಾರಕರು, ಮೈಕ್ರೋ ಆಬ್ಜರ್ವರ್‌ ಸೇರಿದಂತೆ ಒಟ್ಟು 552 ಸಿಬ್ಬಂದಿಯನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಮಂದಿ ಮತ್ತು ಮೂವರು ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗಿದೆ. ಮತ ಎಣಿಸುವಾಗ ತಾಂತ್ರಿಕ ಸಮಸ್ಯೆ ಕಂಡುಬಂದರೆ, ತ್ವರಿತವಾಗಿ ಸ್ಪಂದಿಸಲು 8 ಮಂದಿ ತಂತ್ರಜ್ಞರು ಇದ್ದಾರೆ’ ಎಂದು ತಿಳಿಸಿದರು.

‘ಚುನಾವಣೆ ಆಯೋಗದ ತಂತ್ರಾಂಶದಲ್ಲಿ ಮತ ಎಣಿಕೆ ವಿವರಗಳನ್ನು ನಿರಂತರವಾಗಿ ಪ್ರಕಟಿಸಲಾಗುವುದು. ಫಲಿತಾಂಶ ವೀಕ್ಷಣೆಗೆ ಅನುಕೂಲವಾಗಲೆಂದು ಆರ್‌ಪಿಡಿ ವೃತ್ತದಲ್ಲಿ ಎಲ್‌ಇಡಿ ಪರದೆ ಅಳವಡಿಕೆಗೆ ಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮತ ಎಣಿಕೆ ಕೇಂದ್ರದಿಂದ 200 ಮೀಟರ್‌ ವ್ಯಾಪ್ತಿಯಲ್ಲಿ ವಿಜಯೋತ್ಸವ, ಸಂಭ್ರಮಾಚರಣೆ ನಿಷೇಧಿಸಲಾಗಿದೆ. ಕೇಂದ್ರದಲ್ಲಿ ಮೊಬೈಲ್‌, ತಂಬಾಕು ಉತ್ಪನ್ನಗಳ ಬಳಕೆ ನಿಷೇಧಿಸಲಾಗಿದೆ. ಕೇಂದ್ರದ ಬಳಿ ಬರುವವರಿಗೆ ಪಟಾಕಿ, ಗುಲಾಲು ತರದಂತೆ ಸೂಚನೆ ನೀಡಿದ್ದೇವೆ’ ಎಂದರು.

‘ಮತ ಎಣಿಕೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಕೆ ನಿಷೇಧಿಸಲಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ’ ಎಂದು ಹೇಳಿದರು.

ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಪಿ.ಎನ್.ಲೋಕೇಶ, ಆಹಾರ ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕ ಶ್ರೀಶೈಲ ಕಂಕಣವಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ, ತಹಶೀಲ್ದಾರ್‌ ಸಿದ್ದರಾಯ ಭೋಸಗಿ ಇತರರಿದ್ದರು.

ನಂತರ ಮತ ಎಣಿಕೆ ಕೊಠಡಿ, ಊಟೋಪಚಾರ ವ್ಯವಸ್ಥೆ, ಮಾಧ್ಯಮ ಕೇಂದ್ರ ಮತ್ತಿತರ ಸೌಕರ್ಯಗಳನ್ನು ನಿತೇಶ್ ಪಾಟೀಲ ಮತ್ತು ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT