ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಕೊಡುವಾಗ ಭಾವುಕರಾಗುವುದು ಸ್ವಾಭಾವಿಕ: ಆನಂದ ಮಾಮನಿ

Last Updated 26 ಜುಲೈ 2021, 14:18 IST
ಅಕ್ಷರ ಗಾತ್ರ

ಬೆನಕಟ್ಟಿ (ಬೆಳಗಾವಿ ಜಿಲ್ಲೆ): ‘ಮಹತ್ವದ ಹುದ್ದೆಗೆ ರಾಜೀನಾಮೆ ಕೊಡುವಾಗ ಭಾವುಕರಾಗುವುದು ಸ್ವಾಭಾವಿಕ’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಸಮೀಪದ ಜಾಲಿಕಟ್ಟಿ ಗ್ರಾಮದಲ್ಲಿ 217 ಮನೆಗಳಿಗೆ (4 ಕಿ.ಮೀ. ವ್ಯಾಪ್ತಿ) ನಲ್ಲಿಗಳ ಮೂಲಕ ನೀರು ಸಂಪರ್ಕ ಕಲ್ಪಿಸಲು ಜಲಜೀವನ ಅಭಿಯಾನದಲ್ಲಿ ₹ 35 ಲಕ್ಷ ವೆಚ್ಚದಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಅಧಿಕಾರದ ಅವಧಿ ಮುಗಿಯುತ್ತಿದೆ ಎನ್ನುವ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ–ಉಪಾಧ್ಯಕ್ಷರೇ ಭಾವುಕರಾಗುತ್ತಾರೆ. ಹೀಗಿರುವಾಗ, ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು ಭಾವುಕರಾಗುವುದು ಸಹಜ. ಪಕ್ಷ ಬೆಳೆಸಲು ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದೂ ಹೇಳಿದ್ದಾರಲ್ಲಾ’ ಎಂದರು.

‘ಸಾಮಾನ್ಯ ಕಾರ್ಯಕರ್ತನಾಗಿ ತಳಮಟ್ಟದಿಂದ ಪಕ್ಷ ಕಟ್ಟಿ ಬೆಳಿಸಿದ ಅವರು, 4 ಬಾರಿ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಅನೇಕ ಕೊಡುಗೆಗಳನ್ನು ನೀಡಿದ ಧೀಮಂತ ನಾಯಕ. ಹೈಕಮಾಂಡ್ ನಿರ್ದೇಶನದಂತೆ, ನಾಯಕರ ನಿರ್ಣಯಕ್ಕೆ ಬದ್ಧರಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನೂ 15ರಿಂದ 20 ವರ್ಷಗಳವರೆಗೆ ಪಕ್ಷದ ಬೆಳವಣಿಗೆಗೆ ದುಡಿಯುತ್ತೇನೆ ಎಂದು ಹೇಳಿದ್ದಾರೆ’ ಎಂದು ತಿಳಿಸಿದರು.

‘ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಷಯದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಉಳಿದಿರುವ ಅವಧಿಯಲ್ಲಿ ಉತ್ತಮ ಆಡಳಿತ ರಾಜ್ಯದ ಅಭಿವೃದ್ಧಿಗೆ ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ’ ಎಂದರು.

‘ಈಗ ರಾಜೀನಾಮೆ ಕೊಟ್ಟಿದ್ದರಿಂದ ತಪ್ಪು ಸಂದೇಶವೇನೂ ರವಾನೆ ಆಗುವುದಿಲ್ಲ. ಸರ್ಕಾರ ಇದ್ದೇ ಇರುತ್ತದೆ. ಮುಂದಿನ ಮುಖ್ಯಮಂತ್ರಿಯು ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಸಮರ್ಥ ನಾಯಕನನ್ನು ಗುರುತಿಸುವುದು ಹೈಕಮಾಡ್‌ಗೆ ಬಿಟ್ಟಿದ್ದು. ಯಾರ ಹಣೆಯಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

ನಿಮ್ಮ ನಾಯಕರು ಯಾರು ಎಂಬ ಪ್ರಶ್ನೆಗೆ, ‘ಕ್ಷೇತ್ರದ ಜನರೇ ನನ್ನ ನಾಯಕರು’ ಎಂದರು.

ತಲ್ಲೂರ ಗ್ರಾ.ಪಂ. ಅಧ್ಯಕ್ಷ ಬಸವರಾಜ ಕಡಬಿ, ಸದಸ್ಯರಾದ ಚನ್ನಯ್ಯ ಪೂಜೇರ, ಮಹಾದೇವಯ್ಯ ಪೂಜೇರ, ಪುಂಡಲೀಕ ಮೇಟಿ, ಶಿವಾನಂದ ಹುಬ್ಬಳ್ಳಿ, ಮಲ್ಲನಾಯ್ಕ ನಾಯ್ಕರ, ಶಂಕ್ರೆಪ್ಪ ಬೀರಪ್ಪನ್ನವರ, ಬಸವರಾಜ ಬನಪ್ಪನ್ನವರ, ಕಲ್ಮೇಶ ಯಡಳ್ಳಿ, ಮಹಾಂತೇಶ ಗೌಡರ, ಎಂಜಿನಿಯರ್‌ ಡಿ.ಬಿ. ಕೋಟೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT