ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಯಲ್ಲಿ ನೂಕುನುಗ್ಗಲು; ಸೃಷ್ಟಿಸಿದ ಆತಂಕ

ಲಾಕ್‌ಡೌನ್‌ ಎಚ್ಚರಿಕೆ ನಡುವೆಯೂ ಜನದಟ್ಟಣೆ;
Last Updated 27 ಮಾರ್ಚ್ 2020, 12:26 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ನಾಲ್ಕೈದು ದಿನಗಳಿಂದ ಸ್ಟಾಕ್ ಇಟ್ಟುಕೊಂಡಿದ್ದ ತರಕಾರಿಗಳನ್ನು ಹೊತ್ತ ರೈತರು ಒಮ್ಮೆಲೇ ಬಂದಿದ್ದರಿಂದ ಇಲ್ಲಿನ ಎಪಿಎಂಸಿ ಮಾರ್ಕೆಟ್ ನಲ್ಲಿ ಶುಕ್ರವಾರ ಜನಜಂಗುಳಿ ಕಂಡುಬಂದಿತು.

ಲಾಕ್ ಡೌನ್ ಹಿನ್ನೆಲೆಯಲ್ಲಿ ಜನದಟ್ಟಣೆ ನಿಷೇಧವಿದ್ದರೂ ರೈತರು ಹಾಗೂ ವ್ಯಾಪಾರಸ್ಥರು ಒಂದೇ ಕಡೆ ಜಮಾಯಿಸಿ, ವ್ಯಾಪಾರ ನಡೆಸಿದ್ದು ಆತಂಕ ಸೃಷ್ಟಿಸಿತು.ವಾಟ್ಸ್‌ ಆ್ಯಪ್‌ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಈ ದೃಶ್ಯಗಳು ಸಾಕಷ್ಟು ಹರಿದಾಡಿದವು. ಒಂದೆ ಕಡೆ ನೂರಾರು ಜನರು ಸೇರಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿ, ಸಂದೇಶಗಳನ್ನು ಹರಿಬಿಟ್ಟರು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಪಿಎಂಸಿ ಅಧಿಕಾರಿಗಳು ಹಾಗೂ ಪೊಲೀಸರು ಎಷ್ಟೇ ಮನವಿ ಮಾಡಿಕೊಂಡರೂ ಜನರು ಕಿವಿಗೊಡಲಿಲ್ಲ.

ಬೆಳಗಾವಿ ಅಕ್ಕಪಕ್ಕದ ಗ್ರಾಮಗಳಾದ ಮುಚ್ಚಂಡಿ, ಮೋದಗಾ, ಸಾಂಬ್ರಾ, ಕಾಕತಿ, ಮಚ್ಚೆ, ಹಿರೇಬಾಗೇವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ನೂರಾರು ರೈತರು ಆಗಮಿಸಿದರು. ಬೆಳಿಗ್ಗೆ ದರ ಕುಸಿತ ಕಂಡುಬಂದಿತ್ತು. ಮಧ್ಯಾಹ್ನದ ನಂತರ ದರದಲ್ಲಿ ಏರಿಕೆ ಕಂಡುಬಂದಿತು ಎಂದು ಮುಚ್ಚಂಡಿ ಗ್ರಾಮದ ವರ್ತಕ ಅಪ್ಪಯ್ಯ ಚೌಗುಲೆ ಹೇಳಿದರು.

ದರ ಏರಿಕೆ

ಈರುಳ್ಳಿ, ಟೊಮೆಟೊ, ಆಲೂಗಡ್ಡೆ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ದರಗಳು ಶೇ 10ರಿಂದ ಶೇ 20ರಷ್ಟು ಏರಿಕೆ ಕಂಡವು. ವ್ಯಾಪಾರಸ್ಥರು ಮುಗಿಬಿದ್ದು ಖರೀದಿಸಿದರು. ಇವುಗಳನ್ನು ಕೊಂಡೊಯ್ದು, ಬೀದಿ ಬೀದಿಗಳಲ್ಲಿ ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಮಾಡಿದರು.

ಗೋವಾಕ್ಕೆ ಪೂರೈಕೆ

ಕಳೆದ 4–5 ದಿನಗಳಿಂದ ನೆರೆಯ ಗೋವಾ ರಾಜ್ಯಕ್ಕೆ ತರಕಾರಿಗಳ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಅಲ್ಲಿನ ಸ್ಟಾಕ್‌ ಕೂಡ ಮುಗಿಯತ್ತ ಬಂದಿದ್ದು, ಭಾನುವಾರದಿಂದ ಪೂರೈಕೆ ಮಾಡುವಂತೆ ಅಲ್ಲಿನ ಸರ್ಕಾರ ಕೋರಿದೆ. ತರಕಾರಿ ಹಾಗೂ ಹಾಲು ಪೂರೈಕೆ ಮಾಡುವ ವಾಹನಗಳಿಗೆ ಅದು ಪಾಸ್ ನೀಡಿದ್ದು, ಈ ವಾಹನಗಳಲ್ಲಿ ಮಾತ್ರ ಪೂರೈಕೆ ಮಾಡಲಾಗುವುದು ಎಂದು ವ್ಯಾಪಾರಸ್ಥರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT