ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ, ಕಾಗವಾಡ: ನಾಮಪತ್ರ ಸಲ್ಲಿಕೆ ಭರಾಟೆ

Last Updated 1 ಡಿಸೆಂಬರ್ 2019, 11:17 IST
ಅಕ್ಷರ ಗಾತ್ರ

ಅಥಣಿ: ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೋಮವಾರ ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿಯಾಗಿ ಮಹೇಶ ಕುಮಠಳ್ಳಿ ಅವರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಜಗದೀಶ ಶೆಟ್ಟರ್, ಸಿ.ಸಿ. ಪಾಟೀಲ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ, ಮುಖಂಡರಾದ ಮಹೇಶ ಟೆಂಗಿನಕಾಯಿ, ಉಮೇಶ ಬಂಟೊಡಕರ ಅವರೊಂದಿಗೆ ಬಂದು ಚುನಾವಣಾ ಅಧಿಕಾರಿ ಜಿಲಾನಿ ಮೊಕಾಶಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಶೆಟ್ಟರ್, ‘ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಕುಟುಂಬಗಳಿಗೆ ತಾತ್ಕಾಲಿಕವಾಗಿ ತಲಾ ₹ 10ಸಾವಿರ ಪರಿಹಾರ ನೀಡಲಾಗಿದೆ. ಮನೆ ದುರಸ್ತಿಗಾಗಿ ಮೊದಲ ಕಂತಿನ ಪರಿಹಾರ ಕೊಡಲಾಗಿದೆ. ಜನರ ಸಂಕಷ್ಟ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದೇವೆ’ ಎಂದರು.

‘ಸವದಿ ಅವರಿಗೆ ಟಿಕೆಟ್ ಕೊಡದಿರುವುದಕ್ಕೆ ಅವರ ಅಭಿಮಾನಿಗಳಿಗೆ ಸಹಜವಾಗಿಯೇ ನೋವಾಗಿದೆ. ಅವರಿಗೆ ಮುಲಾಮು ಹಚ್ಚುವ ಕೆಲಸವನ್ನು ನಾವು ಮಾಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಗಜಾನನ ಮಂಗಸೂಳಿ: ಅಥಣಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗಜಾನನ ಮಂಗಸೂಳಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಶಾಸಕ ಎಂ.ಬಿ. ಪಾಟೀಲ, ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ ಜೊತೆ ಬಂದು ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿ ಜಿಲಾನಿ ಮೊಕಾಶಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬರಗಾಲ ಬಂದಾಗ ತೊಂದರೆಗೆ ಒಳಗಾಗಿದ್ದವರು ಹಾಗೂ ನೆರೆ ಬಂದಾಗ ಸಂಕಷ್ಟಕ್ಕೆ ಒಳಗಾದವರ ಪ್ರತಿನಿಧಿಯಾಗಿ ನಾನು ನಾಮಪತ್ರ ಸಲ್ಲಿಸಿದ್ದೇನೆ. ಇಲ್ಲಿನ ಶಾಸಕರಾಗಿದ್ದವರು ಅನರ್ಹರಾಗಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಜನರು ಸಂಕಷ್ಟದಲ್ಲಿದ್ದಾಗ ಅವರು ಮುಂಬೈ, ಬೆಂಗಳೂರಲ್ಲಿ ಇದ್ದರು. ಬಿಜೆಪಿ ಜೊತೆ ಹೋಗಿ ಜನರಿಗೆ ವಂಚನೆ ಮಾಡಿದ್ದಾರೆ. ಅವರಿಗೆ ಜನರು ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

ಕಾಗವಾಡ: ಕಾಗವಾಡ ಮತ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಭರಮಗೌಡ (ರಾಜು) ಕಾಗೆ ಸೋಮವಾರ ನಾಮಪತ್ರ ಸಲ್ಲಿಸಿದರು. ಬೆಂಬಲಿಗರೊಂದಿಗೆ ಬಂದ ಅವರು ಅಥಣಿಯ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗೆ ಉಮೇದುವಾರಿಕೆ ಸಲ್ಲಿಸಿದರು. ಶಾಸಕ ಎಂ.ಬಿ. ಪಾಟೀಲ ಮೊದಲಾದವರು ಜೊತೆಗಿದ್ದರು.

ಬಿಜೆಪಿ ಟಿಕೆಟ್ ದೊರೆಯದೇ ಇರುವುದರಿಂದ ಅವರು ಬಂಡಾಯವೆದ್ದು ಕಾಂಗ್ರೆಸ್ ಸೇರಿ ಆ ಪಕ್ಷದ ಟಿಕೆಟ್ ಪಡೆದಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಶ್ರೀಮಂತ ಪಾಟೀಲ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT