ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ | ಪ್ರಾಣಿಗಳ ಬಾಯಾರಿಕೆ ತಣಿಸುವ ರೈತ

ನೀರು, ಆಹಾರಕ್ಕಾಗಿ ಕುರಿಗಾಹಿಗಳ ಅಲೆದಾಟ, ಬೇಸಿಗೆಯಲ್ಲಿ ಮಾನವೀಯತೆ ಮೆರೆದ ಬಾಬು
Published 16 ಜೂನ್ 2024, 5:22 IST
Last Updated 16 ಜೂನ್ 2024, 5:22 IST
ಅಕ್ಷರ ಗಾತ್ರ

ಬೈಲಹೊಂಗಲ: ಬಿಸಿಲಿನ ಬೇಗೆಯಿಂದ ಬಳಲಿದ ಪಶು, ಪಕ್ಷಿ, ದನ–ಕರು, ಕುರಿಗಳಿಗೆ ನಿತ್ಯವೂ ಕುಡಿಯಲು ಉಚಿತವಾಗಿ ನೀರು ಪೂರೈಸುತ್ತಿರುವ ರೈತ ಬಾಬು ನಾಯ್ಕರ ಅವರ ಸಾಮಾಜಿಕ ಸೇವೆ ಎಲ್ಲರಿಗೂ ಮಾದರಿಯಾಗಿದೆ.

ಪಟ್ಟಣದ ಹೊಸೂರ ರಸ್ತೆಯ ತಮ್ಮ ಬರಡು ಕೃಷಿ ಭೂಮಿಯಲ್ಲಿರುವ ಹೊಂಡದಲ್ಲಿ ಬೋರ್‌ವೆಲ್ ಮೂಲಕ ಎರಡು ಹೊತ್ತು ನೀರು ಸಂಗ್ರಹಿಸಿ, ನಿತ್ಯ ನೂರಾರು ಕುರಿಗಳ ದಾಹ ತಣಿಸುತ್ತಿದ್ದಾರೆ.

ಬಿಸಿಲಿನ ದಗೆಗೆ ಬಾಯಾರಿದ ಕುರಿಗಳು ದಾರಿ ಮಧ್ಯೆ ಈ ರೈತನ ಜಮೀನಿಗೆ ಬಂದು ಹೊಂಡದಲ್ಲಿ ಸಂಗ್ರಹಿಸಿರುವ ನೀರು ಸೇವಿಸಿ, ಗಿಡ–ಮರಗಳ ನೆರಳಲ್ಲಿ ವಿರಮಿಸುತ್ತವೆ.

ಕೆರೆ, ಬಾವಿ, ಹಳ್ಳಗಳು ಒಣಗಿದ್ದರಿಂದ ಕುರಿಗಾಹಿಗಳು ಸುಮಾರು ಐದಾರು ಕಿ.ಮೀ ಸುತ್ತಾಡಿ, ಮೇಯಿಸಿಕೊಂಡು ಸಂಜೆ ಮನೆಗೆ ವಾಪಸ್ಸಾಗುತ್ತಿದ್ದರು. ಈಗ ಹೊಲಗಳು ಬರಡಾಗಿರುವುದರಿಂದ ಹಳ್ಳದ ಗಿಡಗಳನ್ನೇ ಹುಡುಕುತ್ತ, ಸುಮಾರು 15 ಕಿ.ಮೀ. ದೂರ ಹೋದರೂ ನೀರು, ಆಹಾರ ಸಿಗುತ್ತಿಲ್ಲ. ಇದರಿಂದ ಕುರಿಗಳನ್ನು ಮೇಯಿಸಲು ತುಂಬಾ ತೊಂದರೆ ಆಗುತ್ತಿದೆ. ಇತ್ತ ಕುರಿಗಳನ್ನು ಮಾರಾಟ ಮಾಡಲಾಗದೇ, ಇಟ್ಟುಕೊಳ್ಳಲಾಗದೇ, ಕುರಿಗಾರರು ನೋವಿನಿಂದ ಚಡಪಡಿಸುವಂತಾಗಿದೆ.

ಕುರಿಗಳಲ್ಲಿ ಅನಾರೋಗ್ಯ: ಹೊಲಗಳಲ್ಲಿ ಒಣ ಮುಳ್ಳು, ಕಂಟಿಗಳಂತಹ ಆಹಾರ ಸೇವಿಸಿ ಹಾಗೂ ಕಲುಷಿತ ನೀರನ್ನು ಕುಡಿದು ಕುರಿಗಳು ಸೊರಗುತ್ತಿವೆ. ಇಲ್ಲವೇ ಅಸ್ವಸ್ಥಗೊಳ್ಳುತ್ತಿವೆ. ತಾಪ ಮಾನದ ಏರಿಕೆಯಿಂದ ನಾಲಿಗೆ ಬೇನೆ, ಕಾಲು ಬೇನೆ, ಅತಿಯಾದ ಜ್ವರ, ಭೇದಿಯಂತಹ ರೋಗಗಳಿಗೆ ತುತ್ತಾಗಿ ಕುರಿಗಳು ಸಾವಿಗೀಡಾಗುತ್ತಿರುವುದು ಹೆಚ್ಚುತ್ತಿದೆ. ಹೀಗಾಗಿ ಕುರಿಗಾರರ ಬದುಕು ಕಷ್ಟಕರವಾಗಿದೆ. ಕುರಿಗಾರರು ಚಿಕ್ಕ ಕಾಲ್ನಡಿಗೆಯಲ್ಲಿ ಪ್ರತಿ ನಿತ್ಯ ಸಂಚರಿಸುತ್ತಾ, ಕತ್ತಲಲ್ಲಿ ಬದುಕು ಕಳೆಯುತ್ತಿದ್ದಾರೆ.

ಬೋರ್‌ವೆಲ್ ನೀರಿನಿಂದ ಹೊಂಡ ತುಂಬಿಸಿ ಕುರಿಗಳ, ದನ, ಕರುಗಳ, ಪಶು, ಪಕ್ಷಿಗಳ ಕುಡಿಯುವ ನೀರಿನ ದಾಹ ತಣಿಸಲಾಗುತ್ತಿದೆ. ಇದು ದೇವರ ಸೇವೆ ಇದ್ದಂತೆ ‌
ಬಾಬು ನಾಯ್ಕರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT