ಬುಧವಾರ, ಮೇ 18, 2022
23 °C
ಬಸವೇಶ್ವರ ಜಯಂತಿ ಆಚರಣೆ ಕಾರ್ಯಕ್ರಮ

ಬಸವ ತತ್ವ ಆಧರಿಸಿ ಸಂವಿಧಾನ ರಚನೆ: ಜಿಲ್ಲಾಧಿಕಾರಿ ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಬಸವ ತತ್ವಗಳನ್ನು ಆಧಾರವಾಗಿಟ್ಟುಕೊಂಡು ಡಾ.ಬಿ‌.ಆರ್. ಅಂಬೇಡ್ಕರ್ ಅವರು ದೇಶದ ಸಂವಿಧಾನ ರಚಿಸಿದ್ದಾರೆ ಎಂದರೆ ತಪ್ಪಾಗಲಾರದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪ್ರತಿಪಾದಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕ ಮತ್ತು ವಿವಿಧ ಲಿಂಗಾಯತ ಸಂಘಟನೆಗಳ ಸಹಯೋಗದಲ್ಲಿ ನಗರದ ಗೋವಾವೇಸ್‌ ಸಮೀಪದ ಬಸವೇಶ್ವರರ ಉದ್ಯಾನದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವ ತತ್ವಗಳನ್ನು ಇಂದಿನ ಪೀಳಿಗೆಯವವರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳ ಸಾರವನ್ನು ಅರಿತು ಪಾಲಿಸಬೇಕು. ಈ ಮೂಲಕ ಉತ್ತಮ ಸಮಾಜ ಕಟ್ಟಬಹುದಾಗಿದೆ’ ಎಂದರು.

‘ಬಸವಣ್ಣನವರು ಆಗಿನ ಕಾಲದಲ್ಲೇ ಸಮಾನತೆಗಾಗಿ ಹೋರಾಡಿದರು. ಜಾತಿ, ವರ್ಣ, ವರ್ಗ ರಹಿತ, ಲಿಂಗ ತಾರತಮ್ಯವಿಲ್ಲದ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಹಲವು ಆದರ್ಶಗಳನ್ನು ನೀಡಿದರು. ನಮ್ಮ ಸಂವಿಧಾನವೂ ಅದನ್ನೇ ಹೇಳಿದೆ’ ಎಂದು ತಿಳಿಸಿದರು.

‘ನಾವು ಚಿಕ್ಕಂದಿನಲ್ಲಿ ಬಸವಣ್ಣನವರ ವಚನಗಳನ್ನು ಮನೆ–ಶಾಲೆಯಲ್ಲಿ ಹೇಳುತ್ತಿದ್ದೆವು. ಅವುಗಳ ಸಂದೇಶಗಳ ಪ್ರಭಾವದಿಂದಾಗಿಯೇ ನಾನು ಮುಂದೆ ಬರಲು ಸಾಧ್ಯವಾಯಿತು’ ಎಂದು ಹೇಳಿದರು. ‘ಬಸವೇಶ ಕಲ್ಯಾಣ ಬಸವೇಶ’ ಎಂಬ ಭಜನೆ ಹಾಡಿ ನೆರೆದಿದ್ದವರ ಗಮನಸೆಳೆದರು.

ಇದಕ್ಕೂ ಮುನ್ನ ಸಂಸದೆ ಮಂಗಲಾ ಅಂಗಡಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಶಾಸಕ ಅನಿಲ ಬೆನಕೆ, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್‌ ಘಾಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷೆ ಜ್ಯೋತಿ ಭಾವಿಕಟ್ಟಿ ಮತ್ತು ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು