ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಬಸವ ಜಯಂತಿ; ಸರಳ ಆಚರಣೆಗೆ ಸಿದ್ಧತೆ

Last Updated 25 ಏಪ್ರಿಲ್ 2020, 13:00 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಭಾನುವಾರ ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲು ಬಸವಾದಿ ಶರಣರು ತೀರ್ಮಾನಿಸಿದ್ದಾರೆ. ಬಸವಣ್ಣನ ವಚನಗಳ ಪಠಣ, ಅಕ್ಕಪಕ್ಕದವರಿಗೆ ಸಿಹಿ ಹಂಚಿಕೆ ಮಾಡಲು ನಿರ್ಧರಿಸಿದ್ದಾರೆ.

ಮಾರಕ ರೋಗ ಕೋವಿಡ್‌–19 ಹರಡದಂತೆ ನಿಯಂತ್ರಿಸಲು ಸರ್ಕಾರವು ಲಾಕ್‌ಡೌನ್‌ ಘೋಷಿಸಿದೆ. ಅನಾವಶ್ಯಕವಾಗಿ ಮನೆಯಿಂದ ಹೊರಗೆ ತಿರುಗಾಡದಂತೆ, ಗುಂಪು ಕಟ್ಟಿಕೊಂಡು ನಿಲ್ಲದಂತೆ ಸೂಚಿಸಿದೆ. ಇದರ ಹಿನ್ನೆಲೆಯಲ್ಲಿ ಬಸವ ಜಯಂತಿಯನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಆಚರಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

ಪ್ರತಿ ವರ್ಷ ಆಚರಿಸುತ್ತಿದ್ದ ಅದ್ಧೂರಿತನವನ್ನು ಜಿಲ್ಲಾಡಳಿತವು ಕೈಬಿಟ್ಟಿದೆ. ಪ್ರತಿ ವರ್ಷ ಮಾಡಲಾಗುತ್ತಿದ್ದ ಬಸವಣ್ಣನವರ ಭಾವಚಿತ್ರದ ಮೆರವಣಿಗೆಯನ್ನು ಈ ಸಲ ಕೈಬಿಟ್ಟಿದೆ. ಗೋವಾವೇಸ್‌ ವೃತ್ತದಲ್ಲಿರುವ ಬಸವ ಪುತ್ಥಳಿಗೆ ಸರಳವಾಗಿ ಪೂಜೆ ಸಲ್ಲಿಸಲು ತೀರ್ಮಾನಿಸಿದೆ. ಹಿರಿಯ ಅಧಿಕಾರಿಗಳು ಹಾಗೂ ಕೆಲವೇ ಕೆಲವು ಜನಪ್ರತಿನಿಧಿಗಳು ಭಾನುವಾರ ಬೆಳಿಗ್ಗೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಲಿದ್ದಾರೆ.

ಜಿಲ್ಲಾಡಳಿತದ ಕರೆಗೆ ಓಗೊಟ್ಟ ಹಲವು ಮಠಾಧೀಶರು ಹಾಗೂ ಸಮಾಜದ ಹಿರಿಯ ಮುಖಂಡರು ಕೂಡ ಜನರಿಗೆ ತಮ್ಮ ತಮ್ಮ ಮನೆಗಳಲ್ಲಿಯೇ ಆಚರಿಸುವಂತೆ ಕರೆ ನೀಡಿದ್ದಾರೆ.

ದಾಸೋಹ ಮಾಡಿ:‘ಈ ಸಲ ಯಾವುದೇ ಅದ್ಧೂರಿತನ, ಆಡಂಬರ ಇಲ್ಲದೇ ಬಸವ ಜಯಂತಿ ಆಚರಿಸಬೇಕಾಗಿದೆ. ತಮ್ಮ ತಮ್ಮ ಮನೆಗಳಲ್ಲಿ ಬಸವಣ್ಣನ ಫೋಟೊ ಇಟ್ಟು ಪೂಜಿಸಬೇಕು. ವಚನಗಳ ಪಠಣ ಮಾಡಬೇಕು. ಸಿಹಿ ತಿನಿಸು ಮಾಡಿ, ಮನೆಯ ಸದಸ್ಯರೆಲ್ಲರೂ ಸವಿಯಬೇಕು. ಅಕ್ಕಪಕ್ಕದವರಿಗೂ ಹಂಚಬೇಕು’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಬಸವಣ್ಣನವರು ಈ ವಿಶ್ವಕ್ಕೆ ದಾಸೋಹ ಪರಿಕಲ್ಪನೆ ನೀಡಿದವರು. ಇದೇ ಹಿನ್ನೆಲೆಯಲ್ಲಿ ಬಡವರಿಗೆ, ಮನೆಗೆಲಸದವರಿಗೆ ಹಾಗೂ ಕೋವಿಡ್‌ ನಿಯಂತ್ರಿಸಲು ಸೆಣಸಾಡುತ್ತಿರುವವರಿಗೆ ಊಟ ಹಾಕಬಹುದು. ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್‌ ಬಳಸುವುದನ್ನು ಮರೆಯಬಾರದು’ ಎಂದು ಕರೆ ನೀಡಿದರು.

ದೀಪಾಲಂಕಾರ ಮಾಡಿ:‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರನ್ನು ಒಂದೇ ಕಡೆ ಕೂಡಿಸದಂತೆ ತಮ್ಮ ತಮ್ಮ ಮನೆಗಳಲ್ಲಿ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬಹುದು. ಮನೆಗೆ ದೀಪಾಲಂಕಾರ ಮಾಡಿ, ಮನೆಯ ಅಂಗಳದಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಬೇಕು. ಜಯಂತಿಗೆ ಶುಭ ಕೋರುವ ಫಲಕಗಳನ್ನು ಅಳವಡಿಸಬೇಕು. ಮನೆಯ ಮೇಲೆ ಬಸವ ಧ್ವಜವನ್ನು ಹಾರಿಸಬೇಕು’ ಎಂದು ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಕೆ.ಬಸವರಾಜ ತಿಳಿಸಿದರು.

‘ದೀಪಾವಳಿಯಲ್ಲಿ ಹಾಕುವಂತೆ ಆಕಾಶ ಬುಟ್ಟಿಯನ್ನು ಕಟ್ಟಬಹುದು. ತಳಿರು ತೋರಣಗಳಿಂದ ಮನೆಯನ್ನು ಅಲಂಕರಿಸಬೇಕು. ಸಾಮೂಹಿಕವಾಗಿಯಾಗಲಿ ಅಥವಾ ವೈಯುಕ್ತಿಕವಾಗಲಿ ಇಷ್ಟಲಿಂಗ ಪೂಜೆ ಮಾಡಬೇಕು. ಬಸವೇಶ್ವರ ಪೂಜಾ ವ್ರತವನ್ನು ಸಂಪೂರ್ಣವಾಗಿ ಆಚರಿಸಲು ಆಸ್ಪದವಿದೆ’ ಎಂದರು.

‘ಗುರು ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು. ಅನುಕೂಲವಿದ್ದರೆ, ಅಕ್ಕ ಪಕ್ಕದ ಮನೆಯವರಾಗಲಿ/ ಬಂಧುಗಳಿಗಾಗಲಿ ಇಷ್ಟಾರ್ಥ ನೆರವೇರಲು ಬಸವಾನುಗ್ರಹ (ಉಡಿಹಕ್ಕಿಯನ್ನು) ತುಂಬ ಬಹುದು. ಅನುಕೂಲವಿದ್ದಲ್ಲಿ ಬಡಬಗ್ಗರಿಗೆ, ಸ್ವಚ್ಛತಾ ಕಾರ್ಮಿಕರಿಗೆ ಪ್ರಸಾದ, ಬಟ್ಟೆ, ಕಾಣಿಕೆ ಕೊಡಬಹುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT